ಮಗುವಾಗಿದ್ದಾಗ ಅಪಹರಣಕ್ಕೊಳಗಾಗಿ 32 ವರ್ಷ ನಂತರ ಹೆತ್ತವರ ಮಡಿಲು ಸೇರಿದ ಯುವಕ !

Update: 2020-05-20 04:54 GMT
ಫೋಟೊ : (AFP)

ಬೀಜಿಂಗ್ : ಪುಟ್ಟ ಮಗುವಾಗಿದ್ದಾಗ ಅಪಹರಣಕ್ಕೊಳಗಾಗಿ 32 ವರ್ಷಗಳ ಬಳಿಕ ಯುವಕನೊಬ್ಬ, ಮುಖಚಹರೆ ಪತ್ತೆ ತಂತ್ರಜ್ಞಾನದ (ಫೇಶಿಯಲ್ ರೆಕೊಗ್ನಿಶನ್ ಟೆಕ್ನಾಲಜಿ) ನೆರವಿನಿಂದಾಗಿ ಪೋಷಕರ ಮಡಿಲು ಸೇರಿದ ಸ್ವಾರಸ್ಯಕರ ಪ್ರಸಂಗ ವರದಿಯಾಗಿದೆ.

ಸೆಂಟ್ರಲ್ ಶಾಂಕ್ಸಿ ಪ್ರಾಂತ್ಯದ ಕ್ಸಿಯಾನ್ ಹೋಟೆಲ್‌ನ ಹೊರಭಾಗದಿಂದ ಮಾವೋ ಯಿನ್ ಎಂಬ ಎರಡು ವರ್ಷದ ಬಾಲಕನನ್ನು 1988ರಲ್ಲಿ ಅಪಹರಿಸಲಾಗಿತ್ತು. ಬಳಿಕ ಈತನನ್ನು ಪಕ್ಕದ ಸಿಚುವಾನ್ ಪ್ರಾಂತ್ಯದ ಮಕ್ಕಳಿಲ್ಲದ ದಂಪತಿಗೆ ಮಾರಾಟ ಮಾಡಲಾಗಿತ್ತು. ಈ ದಂಪತಿ ಪುಟ್ಟ ಮಗುವನ್ನು ಸ್ವಂತ ಮಗುವಿನಂತೆಯೇ ಬೆಳೆಸಿದರು.

ಪೊಲೀಸರು ಮಾವೋನ ಬಾಲ್ಯದ ಭಾವಚಿತ್ರವನ್ನು ಸ್ಕ್ಯಾನ್ ಮಾಡಿ ರಾಷ್ಟ್ರೀಯ ಡಾಟಾಬೇಸ್ ಜತೆ ತಾಳೆ ನೋಡಿದಾಗ ಸಾಮ್ಯತೆ ಕಂಡುಬಂತು. 1980ರ ದಶಕದಲ್ಲಿ ಸಿಚುವಾನ್ ಪ್ರದೇಶದ ವ್ಯಕ್ತಿಯೊಬ್ಬರು ಮಗುವನ್ನು ಖರೀದಿಸಿದ್ದಾರೆ ಎಂಬ ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಪೊಲೀಸರು ಈ ಕ್ರಮಕ್ಕೆ ಮುಂದಾಗಿದ್ದರು.

ಸೋಮವಾರ 34 ವರ್ಷದ ಮಾವೋ ತನಗೆ ಜನ್ಮ ನೀಡಿದ ಪೋಷಕರ ಮಡಿಲು ಸೇರಿದ. ಮಗುವಿನ ಅಪಹರಣದ ಬಳಿಕ ತಾನು ಉದ್ಯೋಗ ತ್ಯಜಿಸಿ ಒಂದು ಲಕ್ಷಕ್ಕೂ ಹೆಚ್ಚು ಫ್ಲೈಯರ್‌ಗಳನ್ನು ಅಧಿಕಾರಿಗಳಿಗೆ ಕಳುಹಿಸಿ, ಹಲವು ಟಿವಿ ಚಾನಲ್‌ಗಳಲ್ಲಿ ಆತನ ಹುಡುಕಾಟದ ಸಲುವಾಗಿ ಮಾಹಿತಿ ನೀಡಿದ್ದಾಗಿ ತಾಯಿ ಲೀ ಜಿಂಗ್‌ಝಾಹಿ ಭಾವುಕರಾಗಿ ನುಡಿದರು. ಮೂರು ದಶಕಗಳಲ್ಲಿ ಈ ದಂಪತಿಗೆ ನಾಪತ್ತೆಯಾದ ಮಗನ ಬಗ್ಗೆ 300ಕ್ಕೂ ಹೆಚ್ಚು ತಪ್ಪು ಸುಳಿವುಗಳು ಸಿಕ್ಕಿದ್ದವು.

ಆದರೆ ಏಪ್ರಿಲ್ ಕೊನೆಯಲ್ಲಿ ಈ ಖಚಿತ ಸುಳಿವು ಲಭಿಸಿತ್ತು. ಪೊಲೀಸರು ಮಾವೋನನ್ನು ಪತ್ತೆ ಮಾಡಿ ಡಿಎನ್‌ಎ ಪರೀಕ್ಷೆ ಬಳಿಕ ಆತನ ಜನ್ಮ ರಹಸ್ಯ ಬೇಧಿಸಿದರು. ಮಾವೋನ ದತ್ತು ಪೋಷಕರು ಆತನಿಗೆ ಗೂ ನಿಂಗ್ನಿಂಗ್ ಎಂದು ಹೆಸರಿಟ್ಟಿದ್ದರು. ಜತೆಗೆ ಈತ ಬಾಲ್ಯದಲ್ಲಿ ಅಪಹರಣಕ್ಕೀಡಾದ ರಹಸ್ಯವನ್ನು ಮುಚ್ಚಿಟ್ಟಿದ್ದರು. ಮತ್ತೆಂದೂ ಮಗನನ್ನು ಬಿಟ್ಟು ಇರಲಾರೆ ಎಂದು ತಾಯಿ ಭಾವುಕರಾಗಿ ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News