ನಿರ್ಭಾಗ್ಯ ಮಕ್ಕಳಿಗಾಗಿ ಟ್ರಿಲಿಯ ಡಾಲರ್ ಖರ್ಚು ಮಾಡುವಂತೆ ಸರಕಾರಗಳಿಗೆ ಒತ್ತಾಯ
ವಾಶಿಂಗ್ಟನ್, ಮೇ 20: ಬೀಗಮುದ್ರೆಯ ಅವಧಿಯಲ್ಲಿ ಹಾಗೂ ಕೋವಿಡ್-19 ಸಾಂಕ್ರಾಮಿಕ ಮುಗಿದ ಬಳಿಕ, ನಿರ್ಭಾಗ್ಯ ಮಕ್ಕಳ ಅಭಿವೃದ್ಧಿಗಾಗಿ ಒಂದು ಟ್ರಿಲಿಯ ಡಾಲರ್ (ಸುಮಾರು 75 ಲಕ್ಷ ಕೋಟಿ ರೂಪಾಯಿ) ಮೊತ್ತವನ್ನು ಖರ್ಚು ಮಾಡುವಂತೆ ಜಗತ್ತಿನ ವಿವಿಧ ಸರಕಾರಗಳನ್ನು ಒತ್ತಾಯಿಸುವ ಹೇಳಿಕೆಯೊಂದಕ್ಕೆ ಭಾರತೀಯ ಕೈಲಾಶ್ ಸತ್ಯಾರ್ಥಿ ಸೇರಿದಂತೆ 88 ನೊಬೆಲ್ ಪ್ರಶಸ್ತಿ ವಿಜೇತರು ಮತ್ತು ದಲಾಯಿ ಲಾಮಾರಂಥ ಜಾಗತಿಕ ನಾಯಕರು ಸಹಿ ಹಾಕಿದ್ದಾರೆ.
ಆರ್ಚ್‌ಬಿಶಪ್ ಡೆಸ್ಮಂಡ್ ಟೂಟು, ಗಾರ್ಡನ್ ಬ್ರೌನ್ ಮತ್ತು ಕೆರಿ ಕೆನಡಿ ಮುಂತಾದವರು ಸಹಿ ಹಾಕಿರುವ ಹೇಳಿಕೆಯು, ಈ ಮೊದಲೇ ಚಾಲ್ತಿಯಲ್ಲಿದ್ದ ಅಸಮಾನತೆಗಳನ್ನು ಹೇಗೆ ಬಹಿರಂಗಪಡಿಸಿದೆ ಹಾಗೂ ಮತ್ತಷ್ಟು ತೀವ್ರಗೊಳಿಸಿದೆ ಎಂಬುದನ್ನು ಎತ್ತಿ ತೋರಿಸಿದೆ.
ಕೊರೋನ ವೈರಸ್, ಹೆಚ್ಚಿನ ಪ್ರಮಾಣದ ಜಾಗತಿಕ ಜನಸಂಖ್ಯೆಯ ಮೇಲೆ ವಿಧಿಸಲಾಗಿರುವ ನಿರ್ಬಂಧಗಳು ಹಾಗೂ ಅದರ ಪರಿಣಾಮಗಳು ಅತ್ಯಂತ ದುರ್ಬಲರ ಮೇಲೆ ವಿನಾಶಕಾರಿ ಪರಿಣಾಮಗಳನ್ನು ಬೀರುತ್ತವೆ ಎಂದು ಹೇಳಿಕೆ ತಿಳಿಸಿದೆ.
2014ರಲ್ಲಿ ನೊಬೆಲ್ ಶಾಂತಿ ಪ್ರಶಸ್ತಿ ಗೆದ್ದಿರುವ ಭಾರತೀಯ ಕೈಲಾಶ್ ಸತ್ಯಾರ್ಥಿಯ ಮುಂದಾಳುತ್ವದಲ್ಲಿ ಈ ಹೇಳಿಕೆಯನ್ನು ಹೊರಡಿಸಲಾಗಿದೆ.