ಉಡುಪಿ: ದಾನಿಗಳು ಕೊಡುಗೆಯಾಗಿ ನೀಡಿದ ಸಂಚಾರಿ ವಾಹನಕ್ಕೆ ಚಾಲನೆ

Update: 2020-05-20 06:35 GMT

ಉಡುಪಿ : ನೂರಿ ಸಿ ಫುಡ್ ಮಾಲಕ ನೂರಿ ಅಬ್ದುಲ್ ರಹ್ಮಾನ್ ಮತ್ತು ಮಲ್ಪೆ ಫ್ರೆಶ್ ಹಾಗೂ ಉಡುಪಿ ಲಿಗಾಡೋ ಹೋಟೆಲ್ ನ ಆಡಳಿತ ನಿರ್ದೇಶಕ  ಗಂಗೊಳ್ಳಿಯ ಮೌಲಾನ ಇಬ್ರಾಹಿಂ ಅವರು ಉಡುಪಿ ಜಿಲ್ಲಾಡಳಿತಕ್ಕೆ ಕೊಡುಗೆಯಾಗಿ ನೀಡಿರುವ ಕೋವಿಡ್ 19 ನ ಮಾದರಿ ಸಂಗ್ರಹಿಸುವ 2 ಸಂಚಾರಿ ವಾಹನಗಳಿಗೆ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಮಂಗಳವಾರ ಚಾಲನೆ ನೀಡಲಾಯಿತು.

ಕೋವಿಡ್ ಮಾದರಿ ಸಂಗ್ರಹಿಸುವ ಸಂಚಾರಿ ವಾಹನಕ್ಕೆ ಹಸಿರು ನಿಶಾನೆ ತೋರಿದ ಉಡುಪಿ ಶಾಸಕ ರಘುಪತಿ ಭಟ್ ಮಾತನಾಡಿ, ಕ್ವಾರಂಟೈನ್ ಕೇಂದ್ರಗಳಲ್ಲಿರುವವರನ್ನು ಬಿಡುಗಡೆಗೊಳಿಸುವ ಮೊದಲು ಅವರ ಗಂಟಲ ಸ್ರಾವ ಸಂಗ್ರಹಿಸಬೇಕಿದ್ದು, ಈ ಸಂಚಾರಿ ವಾಹನಗಳ ಮೂಲಕ ಸುಲಭವಾಗಿ ಮತ್ತು ಸುರಕ್ಷಿತವಾಗಿ ಶೀಘ್ರದಲ್ಲಿ ಗಂಟಲ ಸ್ರಾವ ತೆಗೆಯಲು ಅನುಕೂಲವಾಗುತ್ತದೆ ಎಂದು ಹೇಳಿದರು.

ಜಿಲ್ಲಾಧಿಕಾರಿ ಜಿ.ಜಗದೀಶ್ ಮಾತನಾಡಿ, ಈಗಾಗಲೇ ಕುಂದಾಪುರ ತಾಲೂಕಿನಲ್ಲಿ ಒಂದು ಸಂಚಾರಿ ಕೋವಿಡ್ ಮಾದರಿ ಸಂಗ್ರಹ ವಾಹನವಿದ್ದು, ಪ್ರಸ್ತುತ ಉಡುಪಿ ಮತ್ತು ಕಾರ್ಕಳ ತಾಲೂಕಿಗೆ ವಾಹನ ದೊರೆತಿರುವುದರಿಂದ ಕ್ವಾರಂಟೈನ್ ಕೇಂದ್ರಗಳಲ್ಲಿರುವವರ ಗಂಟಲ ಸ್ರಾವ ಸಂಗ್ರಹ ಸುಲಭವಾಗಲಿದೆ ಎಂದರು.

ಉಡುಪಿ ಜಿಲ್ಲಾ ಸರಕಾರಿ ನೌಕರರ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಶೇರಿಗಾರ್ ಮಾತನಾಡಿ, ಪ್ರತಿಯೊಂದು ಸಂಚಾರಿ ಮಾದರಿ ಸಂಗ್ರಹ ವಾಹನಕ್ಕೆ 30,000 ರೂ. ಗಳ ವೆಚ್ಚವಾಗಿದ್ದು, ಈ ಮೊತ್ತವನ್ನು ದಾನಿಗಳ ನೆರವಿನಿಂದ ಸಂಗ್ರಹಿಸಲಾಗಿದೆ.  ಉಡುಪಿಯ ವಾಹನಕ್ಕೆ ಉಡುಪಿಯ ಲಿಗಾಡೊ ಹೋಟೆಲ್ ಆಡಳಿತ ನಿರ್ದೇಶಕ ಗಂಗೊಳ್ಳಿಯ ಮೌಲಾನಾ ಇಬ್ರಾಹಿಂ ಹಾಗೂ ಕಾರ್ಕಳದ ವಾಹನಕ್ಕೆ ನಿತಿನ್ ಶೆಟ್ಟಿ ಹಾಗೂ ಅಬ್ದಲ್ ರಹ್ಮಾನ್ ಆರ್ಥಿಕ ನೆರವು ನೀಡಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್  ಸಿಇಒ ಪ್ರೀತಿ  ಗೆಹಲೋತ್, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಡಿಎಚ್ಒ ಡಾ. ಸುಧೀರ್ ಚಂದ್ರ ಸೂಡಾ, ಜಿಲ್ಲಾ ಕೋವಿಡ್ ನೋಡೆಲ್ ಅಧಿಕಾರಿ ಡಾ. ಪ್ರಶಾಂತ್ ಭಟ್, ಜಿಲ್ಲಾ ಸರಕಾರಿ ನೌಕರರ ಸಂಘದ ಉಪಾಧ್ಯಕ್ಷ ಪ್ರಶಾಂತ್ ಶೆಟ್ಟಿ  ಹಾವಂಜೆ, ಖಜಾಂಚಿ ಚಂದ್ರಶೇಖರ್, ರಾಜ್ಯ ಪರಿಷತ್ ಸದಸ್ಯ ಕಿರಣ್ ಹೆಗ್ಡೆ, ದಿವಾಕರ ಖಾರ್ವಿ, ರವಿ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News