×
Ad

ಮೂಡುಬಿದಿರೆ ಸಮೀಪದ ತೋಡಾರುವಿನಲ್ಲಿ ‘ಕಿಟ್’ ಕ್ರಾಂತಿ

Update: 2020-05-20 19:45 IST

ಮಂಗಳೂರು, ಮೇ 20: ಕೊರೋನ-ಲಾಕ್‌ಡೌನ್ ಹಿನ್ನೆಲೆಯಲ್ಲಿ ಸರಕಾರ ಅಥವಾ ಆಡಳಿತ ವ್ಯವಸ್ಥೆಯನ್ನೂ ಮೀರಿಸುವಂತೆ ಬಹುತೇಕ ಸಾಮಾಜಿಕ ಸಂಘಟನೆಗಳು ನಾಡಿನಾದ್ಯಂತ ಅರ್ಹರಿಗೆ ಆಹಾರ ಸಾಮಗ್ರಿಗಳ ಕಿಟ್ ವಿತರಿಸಿ ಗಮನ ಸೆಳೆದಿದೆ. ಈ ಮಧ್ಯೆ ಮೂಡುಬಿದಿರೆ ಸಮೀಪದ ತೋಡಾರುವಿನಲ್ಲೂ ಕಿಟ್ ವಿತರಣೆಯಾಗಿದೆ.

ಇದು ಯಾವುದೇ ಸಮಿತಿಯ ವತಿಯಿಂದ ನೀಡಲ್ಪಡುವ ಕಿಟ್ ಅಲ್ಲ. ಇಲ್ಲಿ ಸಮಿತಿ ಅಥವಾ ಅಧ್ಯಕ್ಷ, ಕಾರ್ಯದರ್ಶಿ ಇತ್ಯಾದಿ ಸ್ಥಾನಮಾನವೂ ಇಲ್ಲ. ಇದು ಸಾಮೂಹಿಕವಾಗಿ ಎಲ್ಲರೂ ಎಲ್ಲರಿಗಾಗಿ ನೀಡುವ ಕಿಟ್ ಆಗಿದೆ. ಒಂದು ‘ತಂಡ’ವಾಗಿ ಮಾಡುವ ಸೇವೆಯಾಗಿದೆ.

‘ತೋಡಾರು’ ಬದ್ರಿಯಾ ಸುನ್ನಿ ಜುಮಾ ಮಸ್ಜಿದ್ ವ್ಯಾಪ್ತಿಯಲ್ಲಿ ಲಾಕ್‌ಡೌನ್‌ನಿಂದಾಗಿ ಯಾರೂ ಹಸಿವಿನಲ್ಲಿರಬಾರದು. ಜಮಾಅತಿನ ಯಾರೂ ಕೂಡ ಹೊರ ಊರಿಗೆ ಕಿಟ್‌ಗಾಗಿ ಅಲೆದಾಡಬಾರದು. ಹೊರಗಿನವರು ಕೂಡ ಊರಿಗೆ ಬಂದು ಕಿಟ್ ವಿತರಿಸುವ ಸಂದರ್ಭ ಎದುರಾಗಬಾರದು ಎಂಬ ಸಂಕಲ್ಪದೊಂದಿಗೆ ಜಮಾಅತಿನ ಪ್ರಮುಖರು, ಸಂಘ ಸಂಸ್ಥೆಗಳ ಮುಖಂಡರು ಮತ್ತು ಉತ್ಸಾಹಿ ಯುವಕರು ‘ಹಸಿವು ಮುಕ್ತ ತೋಡಾರು’ ಎಂಬ ಘೋಷಣೆಯ ಮೂಲಕ ಕಿಟ್ ವಿತರಣೆಗೆ ಯೋಜನೆ ರೂಪಿಸಿದರು.

ಅದಕ್ಕಾಗಿ ಊರಿನ ಶ್ರೀಮಂತರು, ದಾನಿಗಳ ನೆರವು ಪಡೆದು ಜಮಾಅತ್‌ನಲ್ಲಿರುವ ಸುಮಾರು 450ಕ್ಕೂ ಅಧಿಕ ಮನೆಗಳಿಗೆ ಅಂದಾಜು 1,500 ರೂ. ಮೌಲ್ಯದ ದಿನಸಿ ಕಿಟ್ ವಿತರಣೆಗೆ ಮುಂದಾದರು. ಕೆಲವರು ತಮಗೆ ಇದರ ಅಗತ್ಯವಿಲ್ಲ. ಅರ್ಹರಿಗೆ ತಲುಪಿಸಿ ಎಂದು ಕಿಟ್ ಪಡೆಯದಿರುವ ಮೂಲಕ ಔದಾರ್ಯ ಮೆರೆದದ್ದೂ ಇದೆ. ಒಟ್ಟಿನಲ್ಲಿ ಲಾಕ್‌ಡೌನ್ ಆರಂಭದಿಂದ ಈವರೆಗೆ ಸುಮಾರು 12 ಲಕ್ಷ ರೂ. ವೆಚ್ಚದಲ್ಲಿ ಮೂರನೇ ಹಂತದ ಕಿಟ್‌ಗಳನ್ನು ಅರ್ಹರಿಗೆ ವಿತರಿಸಲಾಗಿದೆ.

ತೋಡಾರು ಜಮಾಅತ್‌ನಲ್ಲಿ 450 ಮುಸ್ಲಿಂ ಮನೆಗಳಲ್ಲದೆ 1ಸಾವಿರಕ್ಕೂ ಅಧಿಕ ಮುಸ್ಲಿಮೇತರರ ಮನೆಗಳಿವೆ. ಕಿಟ್ ಪಡೆಯಲು ಅರ್ಹರಿರುವ 100ಕ್ಕೂ ಅಧಿಕ ಮುಸ್ಲಿಮೇತರ ಮನೆಗಳಿಗೆ ಕಿಟ್ ನೀಡಲಾಗಿದೆ. ಅಂದರೆ ಇಲ್ಲಿನ ಸೇವೆಯು ನಿರ್ದಿಷ್ಟ ಸಮುದಾಯಕ್ಕೆ ಸೀಮಿತವಾಗಿಲ್ಲ. ಲಾಕ್‌ಡೌನ್‌ನಿಂದ ಯಾರು ಹಸಿವಿನಿಂದಿರಬಾರದು ಎಂಬ ಉದ್ದೇಶದಿಂದ ಕಿಟ್ ವಿತರಿಸಲಾಗಿದೆ.

ಈ ಮಧ್ಯೆ ಮೆಡಿಕಲ್ ಸೇವೆಯನ್ನೂ ಕೂಡ ಈ ತಂಡ ಮಾಡಿದೆ. ಲಾಕ್‌ಡೌನ್ ಎಷ್ಟು ದಿನ ವಿಸ್ತರಣೆಯಾಗಲಿದೆಯೋ ಅಷ್ಟು ದಿನ ದಿನಸಿ ಸಾಮಗ್ರಿಯ ಕಿಟ್ ವಿತರಿಸಲಾಗುವುದು. ವಿತರಣಾ ಕಾರ್ಯದ ಜವಾಬ್ದಾರಿಯನ್ನು ತೋಡಾರಿನ ಎಸ್ಕೆಎಸ್ಸೆಸ್ಸೆಫ್ ಸಂಘಟನೆಗೆ ನೀಡಲಾಗಿದೆ.
ಕಿಟ್ ವಿತರಣೆಗಾಗಿ ನಿರ್ದಿಷ್ಟ ಸಮಿತಿಯೇ ಇಲ್ಲದ, ಮುಂಚೂಣಿ ನಾಯಕರೂ ಇಲ್ಲದ ಇಲ್ಲಿ ದಾನಿಗಳ ಹೆಸರನ್ನು ಕೂಡ ಗೌಪ್ಯವಾಗಿಡಲಾಗಿದೆ.

ವೈಯಕ್ತಿಕ ಹೆಸರಿಗೆ ಆದ್ಯತೆ, ಕಿಟ್ ವಿತರಣೆಯ ಫೋಟೋ ತೆಗೆಯುವುದು, ವೀಡಿಯೋ ಮಾಡುವ ಪರಿಪಾಠ ಕೂಡ ಇಲ್ಲಿಲ್ಲ. ಒಟ್ಟಿನಲ್ಲಿ ಎಲ್ಲರೂ ಪ್ರಚಾರದಿಂದ ದೂರ. ಬಲಗೈಯಲ್ಲಿ ಕೊಟ್ಟದ್ದು ಎಡಗೈಗೂ ಗೊತ್ತಾಗಬಾರದು ಎಂಬ ನಾಣ್ನುಡಿಯಂತೆ ಎಲ್ಲವೂ ಸದ್ದಿಲ್ಲದೆ ನಡೆಯುತ್ತಿದೆ.
‘ಹಸಿವು ಮುಕ್ತ ತೋಡಾರು’ ಎಂಬ ಘೋಷಣೆಯೊಂದಿಗೆ ಇಲ್ಲಿನ ಉತ್ಸಾಹಿ ಯುವಕರು, ಊರಿನ ಹಿರಿಯರ ಮಾರ್ಗದರ್ಶನದಲ್ಲಿ ಒಗ್ಗಟ್ಟಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಅಷ್ಟೇ ಅಲ್ಲ, ಲಾಕ್‌ಡೌನ್ ಸಡಿಲಿಕೆಯ ಬಳಿಕವೂ ಸಂಕಷ್ಟದಲ್ಲಿರುವ ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಉಚಿತ ಪುಸ್ತಕ ವಿತರಿಸುವ ಚಿಂತನೆಯೂ ಇದೆ ಎಂದು ಯುವಕರು ಹೇಳಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News