×
Ad

ಮುಂಬೈಯಿಂದ ಬಂದ 6 ಮಂದಿಗೆ ಕೊರೋನ ಪಾಸಿಟಿವ್

Update: 2020-05-20 20:11 IST

ಉಡುಪಿ, ಮೇ 20: ಮಾ.29ರ ಬಳಿಕ ಸತತ 47 ದಿನಗಳ ಕಾಲ ಯಾವುದೇ ಕೊರೋನ ಪಾಸಿಟಿವ್ ಪ್ರಕರಣಗಳಿಲ್ಲದೇ ಹಸಿರು ವಲಯದಲ್ಲಿ ಸ್ಥಾನ ಪಡೆದು ನೆಮ್ಮದಿಯಾಗಿದ್ದ ಉಡುಪಿ ಜಿಲ್ಲೆ, ಹೊರರಾಜ್ಯದ ಸ್ಥಳೀಯರಿಗೆ ಊರಿಗೆ ಮರಳಲು ಅವಕಾಶ ನೀಡಿದ ಬಳಿಕ ಇದೀಗ ಪ್ರತಿದಿನ ವೆಂಬಂತೆ ಕೊರೋನ ಪಾಸಿಟಿವ್ ಕೇಸುಗಳನ್ನು ಕಾಣುತಿದ್ದು, ಬುಧವಾರ ಜಿಲ್ಲೆಯಲ್ಲಿ ಹೊಸದಾಗಿ ಆರು ಪಾಸಿಟಿವ್ ಪ್ರಕರಣಗಳು ವರದಿ ಯಾಗಿವೆ.ಇವೆಲ್ಲವೂ ಮಹಾರಾಷ್ಟ್ರದ ಮುಂಬಯಿಯಿಂದ ಉಡುಪಿ ಜಿಲ್ಲೆಗೆ ಆಗಮಿಸಿದವರದ್ದಾಗಿದೆ.

ಪಾಸಿಟಿವ್ ಪತ್ತೆಯಾದವರಲ್ಲಿ 4 ವರ್ಷ ಪ್ರಾಯದ ಹೆಣ್ಣು ಮಗು ಹಾಗೂ 15 ವರ್ಷ ಪ್ರಾಯದ ಬಾಲಕಿ ಕುಂದಾಪುರ ತಾಲೂಕಿನವರಾಗಿದ್ದು ಕುಂದಾಪುರದಲ್ಲೇ ಕ್ವಾರಂಟೈನ್‌ನಲ್ಲಿದ್ದರು. 31 ವರ್ಷ ಪ್ರಾಯ ಹಾಗೂ 47 ವರ್ಷ ಪ್ರಾಯದ ಇಬ್ಬರು ಮಹಿಳೆಯರು ಹೆಬ್ರಿಯವರಾಗಿದ್ದು, ಹೆಬ್ರಿಯಲ್ಲೇ ಕ್ವಾರಂಟೈನ್‌ನಲ್ಲಿದ್ದರು. ಮತ್ತಿಬ್ಬರು 74 ವರ್ಷ ಪ್ರಾಯ ಹಾಗೂ 55 ವರ್ಷ ಪ್ರಾಯದ ಪುರುಷರು. ಇವರಿಬ್ಬರೂ ಬೈಂದೂರು ತಾಲೂಕಿನವರಾಗಿದ್ದು, ಬೈಂದೂರಿನಲ್ಲೇ ಕ್ವಾರಂಟೈನ್‌ನಲ್ಲಿದ್ದರು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುಧೀರ್ ‌ಚಂದ್ರ ಸೂಡ ತಿಳಿಸಿದ್ದಾರೆ.

4 ವರ್ಷ ಪ್ರಾಯದ ಹೆಣ್ಣು ಮಗು ಹಾಗೂ 15 ವರ್ಷ ಪ್ರಾಯದ ಬಾಲಕಿ, ಕಳೆದ ಮೇ 13ರಂದು ಊರಿಗೆ ಬಂದು ಹೃದಯಾಘಾತದಿಂದ ಮಣಿಪಾಲ ಕೆಎಂಸಿಯಲ್ಲಿ ಮೃತಪಟ್ಟ ಬಳಿಕ ಕೋವಿಡ್ ಸೋಂಕು ಪತ್ತೆಯಾದ 54ರ ಹರೆಯದ ವ್ಯಕ್ತಿಯೊಂದಿಗೆ ಊರಿಗೆ ಬಂದಿದ್ದು ಅವರ ಪ್ರಾಮಿಕ ಸಂಪರ್ಕಕ್ಕೆ ಒಳಗಾದವರು.

74 ಮತ್ತು 55 ವರ್ಷ ಪ್ರಾಯ ಇಬ್ಬರು ಪುರುಷರು ಬೈಂದೂರಿನವರಾಗಿದ್ದು, ಇಬ್ಬರೂ ಮುಂಬಯಿಯಿಂದ ಊರಿಗೆ ಬಂದವರಾಗಿದ್ದಾರೆ. ಇವ ರಿಬ್ಬರೂ ಬೈಂದೂರಿನಲ್ಲಿ ಕ್ವಾರಂಟೈನ್‌ನಲ್ಲಿದ್ದರು. ಇದೀಗ ಎಲ್ಲರನ್ನೂ ಉಡುಪಿಯ ಡಾ.ಟಿಎಂಎ ಪೈ ಕೋವಿಡ್ ಆಸ್ಪತ್ರೆಗೆ ವರ್ಗಾಯಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಇವರಲ್ಲಿ ಇಬ್ಬರು ಮಕ್ಕಳಿಗೆ ಒಟ್ಟು 24 ಮಂದಿ ಪ್ರಾಥಮಿಕ ಸಂಪರ್ಕಿತರನ್ನು ಗುರುತಿಸಲಾಗಿದೆ. 74ರ ವೃದ್ಧರಿಗೆ 30 ಮಂದಿ, 55ರ ಪುರುಷರಿಗೆ 30, 31 ವರ್ಷ ಪ್ರಾಯದ ಮಹಿಳೆಗೆ 24 ಮಂದಿ ಹಾಗೂ 47 ವರ್ಷ ಪ್ರಾಯದ ಮಹಿಳೆಗೆ ಒಟ್ಟು 12 ಮಂದಿ ಪ್ರಾಥಮಿಕ ಸಂಪರ್ಕಿತರನ್ನು ಗುರುತಿಸಲಾಗಿದ್ದು, ಎಲ್ಲರನ್ನೂ ಕ್ವಾರಂಟೈನ್ ಮಾಡಿ ಗಂಟಲು ದ್ರವ ಪರೀಕ್ಷೆಗೆ ಕ್ರಮ ತೆಗೆದುಕೊಳ್ಳ ಲಾಗಿದೆ ಎಂದು ಡಾ.ಸೂಡ ತಿಳಿಸಿದರು.

ಜಿಲ್ಲೆಯಲ್ಲಿ ನಿನ್ನೆಯವರೆಗೆ 15 ಪ್ರಕರಣಗಳು ವರದಿಯಾಗಿದ್ದು, ಇಂದಿನ 6 ಸೇರಿದಂತೆ ಒಟ್ಟು 21 ಪ್ರಕರಣಗಳು ವರದಿಯಾದಂತಾಗಿದೆ. ಜಿಲ್ಲೆಯಲ್ಲಿ ನಿನ್ನೆ ವರದಿಯಾದ ಇನ್ನೊಂದು ಪ್ರಕರಣದಲ್ಲಿ ಚಿತ್ರದುರ್ಗದಿಂದ ಕ್ಯಾನ್ಸರ್ ಚಿಕಿತ್ಸೆ ಗೆಂದು ಮೇ 16ರಂದು ಕೆಎಂಸಿಗೆ ದಾಖಲಾದ 17ರ ಹರೆಯದ ಬಾಲಕಿಯಲ್ಲಿ ಕೊರೋನ ಸೋಂಕು ಪತ್ತೆಯಾಗಿತ್ತು. ಇದೀಗ ಆಕೆಗೆ ಕೆಎಂಸಿಯಲ್ಲೇ ಚಿಕಿತ್ಸೆ ಮುಂದುವರಿಸಲಾಗಿದೆ ಎಂದು ಅವರು ಹೇಳಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News