​ ಲಾಕ್‌ಡೌನ್ ನಡುವೆ ಪ್ರಾಯೋಗಿಕ ‘ದರ್ಶನ’ವನ್ನು ಯಶಸ್ವಿಯಾಗಿ ನಡೆಸಿದ ತಿರುಪತಿ ದೇಗುಲ

Update: 2020-05-20 14:50 GMT

ಹೈದರಾಬಾದ್,ಮೇ 20: ಕೋವಿಡ್-19 ಲಾಕ್‌ಡೌನ್ ನಡುವೆಯೇ ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಆಡಳಿತವು ಮಂಗಳವಾರ ಪ್ರಾಯೋಗಿಕ ‘ದರ್ಶನ ’ವನ್ನು ನಡೆಸಿದ್ದು ಆಯ್ದ ಸಂಖ್ಯೆಯ ಭಕ್ತರಿಗಾಗಿ ಶ್ರೀ ವೆಂಕಟೇಶ್ವರ ದೇಗುಲದ ದ್ವಾರಗಳನ್ನು ತೆರೆಯಲಾಗಿತ್ತು. ಹೆಚ್ಚಿನ ಭಕ್ತರು ಟಿಟಿಡಿ ಸಿಬ್ಬಂದಿಗಳ ಕುಟುಂಬ ಸದಸ್ಯರಾಗಿದ್ದರು,ಜೊತೆಗೆ ಕೆಲವು ಸ್ಥಳೀಯರಿಗೂ ದರ್ಶನ ಅವಕಾಶವನ್ನು ಕಲ್ಪಿಸಲಾಗಿತ್ತು. ಟಿಟಿಡಿ ಅಧಿಕಾರಿಯೋರ್ವರು ಈ ವಿಷಯವನ್ನು ಸುದ್ದಿಸಂಸ್ಥೆಗೆ ದೃಢಪಡಿಸಿದ್ದಾರೆ.

 ಭಕ್ತರು ಸುರಕ್ಷಿತ ಅಂತರವನ್ನು ಕಾಯ್ದುಕೊಂಡಿದ್ದರು.ದೇವಸ್ಥಾನ ಸಂಕೀರ್ಣವನ್ನು ಸೋಂಕುಮುಕ್ತಗೊಳಿಸಲಾಗಿದ್ದು,ಇತರ ಕೋವಿಡ್-19 ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಲಾಗುತ್ತಿದೆ. ಮಂಗಳವಾರದ ಪ್ರಾಯೋಗಿಕ ದರ್ಶನವು ಯಶಸ್ವಿಯಾಗಿದ್ದು ಲಾಕ್‌ಡೌನ್ ಸ್ಥಿತಿಯಲ್ಲಿ ಸುಧಾರಣೆಯನ್ನು ಅವಲಂಬಿಸಿ ಅಂತಿಮ ನಿರ್ಧಾರವನ್ನು ಕೈಗೊಳ್ಳುವ ಮುನ್ನ ಜುಲೈವರೆಗೂ ಪ್ರತಿ ತಿಂಗಳ ಮೊದಲ ಮಂಗಳವಾರ ಮತ್ತು ಕೊನೆಯ ಶನಿವಾರಗಳಂದು ಪ್ರಾಯೋಗಿಕ ನೆಲೆಯಲ್ಲಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ. ಇದಕ್ಕಾಗಿ ಸ್ಥಳೀಯರು ತಮ್ಮ ಆಧಾರ್ ಕಾರ್ಡ್‌ಗಳನ್ನು ಹಾಜರುಪಡಿಸಿ ಟೋಕನ್‌ಗಳನ್ನು ಪಡೆದುಕೊಳ್ಳಬೇಕಾಗುತ್ತದೆ ಮತ್ತು ಅವರಿಗೆ ಸಮಯವನ್ನು ನಿಗದಿಗೊಳಿಸಲಾಗುತ್ತದೆ ಎಂದು ಅಧಿಕಾರಿ ತಿಳಿಸಿದರು.

ಲಾಕ್‌ಡೌನ್‌ನಿಂದಾಗಿ ತಿರುಪತಿ ದೇಗುಲವನ್ನು ಮುಚ್ಚಲಾಗಿದ್ದರೂ ಸೀಮಿತ ಸಂಖ್ಯೆಯ ಸಿಬ್ಬಂದಿಗಳೊಂದಿಗೆ ಆಗಮ ಶಾಸ್ತ್ರಗಳಿಗೆ ಅನುಗುಣವಾಗಿ ಎಲ್ಲ ದೈನಂದಿನ ವಿಧಿಗಳನ್ನು ಪಾಲಿಸಲಾಗುತ್ತಿದೆ. ಲಾಕ್‌ಡೌನ್ ಇದ್ದರೂ ಎಪ್ರಿಲ್‌ನಲ್ಲಿ ದೇಗುಲದ ಬೊಕ್ಕಸಕ್ಕೆ 90 ಕೋ.ರೂ.ಗಳಷ್ಟು ಕಾಣಿಕೆಗಳು ಆನ್‌ಲೈನ್ ಮೂಲಕ ಹರಿದುಬಂದಿದೆ ಎನ್ನಲಾಗಿದೆ. ಈ ತಿಂಗಳೂ ಇಷ್ಟೇ ಮೊತ್ತದ ಕಾಣಿಕೆಗಳನ್ನು ನಿರೀಕ್ಷಿಲಾಗಿದೆ.

ಟಿಟಿಡಿ ತನ್ನೆಲ್ಲ ಸಿಬ್ಬಂದಿಗಳಿಗೆ ಎಪ್ರಿಲ್‌ನ ಪೂರ್ಣ ವೇತನಗಳನ್ನು ಪಾವತಿಸಿದ್ದು,ಮೇ ಮತ್ತು ಜೂನ್ ತಿಂಗಳಿಗೂ ಇದನ್ನು ಪಾಲಿಸಲಿದೆ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News