ಕೊರೋನ ವಿರೋಧಿ ಹೋರಾಟದ ನಾಯಕತ್ವವನ್ನು ಮುಂದುವರಿಸುವೆ

Update: 2020-05-20 15:02 GMT

ಜಿನೀವ (ಸ್ವಿಟ್ಸರ್‌ಲ್ಯಾಂಡ್), ಮೇ 20: ಕೊರೋನ ವೈರಸ್ ವಿರುದ್ಧದ ಜಾಗತಿಕ ಹೋರಾಟದ ನೇತೃತ್ವ ವಹಿಸುವುದನ್ನು ನಾನು ಮುಂದುವರಿಸುತ್ತೇನೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ)ಯ ಮುಖ್ಯಸ್ಥ ಟೆಡ್ರಾಸ್ ಅದನಾಮ್ ಗೇಬ್ರಿಯೇಸಸ್ ಮಂಗಳವಾರ ಹೇಳಿದ್ದಾರೆ.

ಸಂಸ್ಥೆಗೆ ಅಮೆರಿಕ ನೀಡುತ್ತಿರುವ ದೇಣಿಗೆಯನ್ನು ನಿಲ್ಲಿಸುವುದಾಗಿ ಹಾಗೂ ಸಂಸ್ಥೆಯಿಂದಲೇ ಹೊರಬರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆದರಿಕೆ ಹಾಕಿದ ಬಳಿಕ ಅವರು ಈ ಹೇಳಿಕೆ ನೀಡಿದ್ದಾರೆ.

ಕೊರೋನ ವೈರಸ್ ಸಾಂಕ್ರಾಮಿಕಕ್ಕೆ ಸಂಬಂಧಿಸಿದ ನಿರ್ಣಯಕ್ಕೆ ಸಂಪೂರ್ಣ ಬೆಂಬಲ ನೀಡುವುದನ್ನು ಅಮೆರಿಕ ಮತ್ತೊಮ್ಮೆ ತಡೆಹಿಡಿದ ಬಳಿಕ, ಸಾಂಕ್ರಾಮಿಕದ ನಿರ್ವಹಣೆಯಲ್ಲಿ ಸಂಸ್ಥೆ ವಹಿಸಿದ ಪಾತ್ರವನ್ನು ಸಂಸ್ಥೆಯ ಮಹಾ ನಿರ್ದೇಶಕರು ಸಮರ್ಥಿಸಿಕೊಂಡಿದ್ದಾರೆ.

ಉತ್ತರದಾಯಿತ್ವ ನಿಗದಿಪಡಿಸುವುದು ಬೇರೆ ಯಾರಿಗಿಂತಲೂ ಹೆಚ್ಚು ನಮಗೇ ಬೇಕಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ 194 ಸದಸ್ಯ ದೇಶಗಳ ವೀಡಿಯೊ ಕಾನ್ಫರೆನ್ಸ್ ಸಮಾವೇಶದಲ್ಲಿ ಮಾತನಾಡಿದ ಅವರು ಹೇಳಿದರು. ಸಾಂಕ್ರಾಮಿಕದ ಜಾಗತಿಕ ಪ್ರತಿಕ್ರಿಯೆಯನ್ನು ಸಮನ್ವಯಗೊಳಿಸುವಲ್ಲಿ ನಾಯಕತ್ವ ನೀಡುವುದನ್ನು ನಾವು ಮುಂದುವರಿಸುತ್ತೇವೆ ಎಂದು ಅವರು ನುಡಿದರು.

ಸಾಂಕ್ರಾಮಿಕದ ಜಾಗತಿಕ ಪ್ರತಿಕ್ರಿಯೆ ಬಗ್ಗೆ ವಿಮರ್ಶೆ ನಡೆಯಬೇಕೆಂದು ಕರೆ ನೀಡುವ ನಿರ್ಣಯವು ಒಮ್ಮತದಿಂದ ಅಂಗೀಕಾರಗೊಳ್ಳಲು ಅಮೆರಿಕ ಅನುಮತಿ ನೀಡಿದೆ. ಆದರೆ, ಜನನ ಸಂಬಂಧಿ ಆರೋಗ್ಯ ಹಕ್ಕುಗಳಿಗೆ ಸಂಬಂಧಿಸಿದ ನಿರ್ಣಯ ಮತ್ತು ಪೇಟೆಂಟ್ ನಿಯಮಗಳಿಂದ ಬಡ ದೇಶಗಳಿಗೆ ವಿನಾಯಿತಿ ನೀಡುವುದಕ್ಕೆ ಸಂಬಂಧಿಸಿದ ನಿರ್ಣಯಗಳ ಭಾಷೆಗೆ ಅದು ಆಕ್ಷೇಪ ವ್ಯಕ್ತಪಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News