×
Ad

ಉಡುಪಿ: ಕೊನೆಗೂ ರೈಲಿನಲ್ಲಿ ಜಾರ್ಖಂಡ್‌ನತ್ತ ಪ್ರಯಾಣ ಬೆಳೆಸಿದ ಕಾರ್ಮಿಕರು

Update: 2020-05-20 21:08 IST

ಉಡುಪಿ, ಮೇ 20: ಕಷ್ಟಪಟ್ಟು ದುಡಿದು ತಮ್ಮ ಹಲವು ಕನಸುಗಳನ್ನು ನನಸು ಮಾಡುವ ಆಶಾವಾದದೊಂದಿಗೆ ಉಡುಪಿಗೆ ಆಗಮಿಸಿದ್ದ ಜಾರ್ಖಂಡ್ ರಾಜ್ಯದ ವಲಸೆ ಕಾರ್ಮಿಕರು ಇದೀಗ, ಸತತ ಪ್ರಯತ್ನಗಳ ಬಳಿಕ ಭಗ್ನ ಕನಸುಗಳೊಂದಿಗೆ ಇಂದು ಸಂಜೆ ಶ್ರಮಿಕ್ ವಿಶೇಷ ರೈಲಿನಲ್ಲಿ ಜಾರ್ಖಂಡ್‌ನತ್ತ ಪ್ರಯಾಣ ಬೆಳೆಸಿದರು.

ಲಾಕ್‌ಡೌನ್ ಹಿನ್ನೆಲೆಯಲ್ಲಿ ಉಡುಪಿಯಲ್ಲಿ ಸಿಕ್ಕಿಹಾಕಿಕೊಂಡಿದ್ದ ಇವರು ಊರು ಸೇರುವ ತವಕದಲ್ಲಿ 50ಕ್ಕೂ ಅಧಿಕ ಮಂದಿ ಮೂರು ದಿನಗಳ ಹಿಂದೆ ಮಣಿಪಾಲದಿಂದ ಮಂಗಳೂರು ರೈಲ್ವೆ ನಿಲ್ದಾಣಕ್ಕೆ ಕಾಲ್ನಡಿಗೆಯಲ್ಲೇ ಹೊರಟಿದ್ದು, ಮಾರ್ಗ ಮಧ್ಯದಲ್ಲಿ ಕಾಪು ಬಳಿ ಅಧಿಕಾರಿಗಳಿಂದ ತಡೆಹಿಡಿಯಲ್ಪಟ್ಟು ಮರಳಿ ತಮ್ಮ ಊರು ಸೇರಿದ್ದರು.

ಉಡುಪಿ-ಮಣಿಪಾಲಗಳಲ್ಲಿ ಜಾರ್ಖಂಡ್ ರಾಜ್ಯಕ್ಕೆ ಸೇರಿದ ಸುಮಾರು 1600ಕ್ಕೂ ಅಧಿಕ ಮಂದಿ ವಲಸೆ ಕಾರ್ಮಿಕರಿದ್ದಾರೆ. ಇವರು ಕೆಲವು ವರ್ಷಗಳಿಂದ ಇಲ್ಲಿ ದುಡಿಯುತಿದ್ದಾರೆ. ಇವರಲ್ಲಿ ಬಹುಪಾಲು ಮಂದಿ ಬುಡಕಟ್ಟು ಜನಾಂಗಕ್ಕೆ ಸೇರಿದವರು. ಸತತ ಪ್ರಯತ್ನಗಳ ಬಳಿಕ ಇವರಿ ಗಾಗಿ ಉಡುಪಿಯಿಂದ ಹೊರಡಿಸಿದ ವಿಶೇಷ ಶ್ರಮಿಕ್ ವಿಶೇಷ ರೈಲಿನಲ್ಲಿ (ರೈಲು ನಂ.01642) ಒಟ್ಟು 1104 ಮಂದಿ ಬುಧವಾರ ಸಂಜೆ 5:45ಕ್ಕೆ ಜಾರ್ಖಂಡ್ ರಾಜ್ಯದ ಹಟಿಯಾಕ್ಕೆ ಪ್ರಯಾಣ ಬೆಳೆಸಿದರು. ಈ ರೈಲು ಮೇ 22ರ ಬೆಳಗ್ಗೆ 7:15ಕ್ಕೆ ಹಟಿಯಾ ತಲುಪುವ ನಿರೀಕ್ಷೆ ಇದೆ.

ಇದರಲ್ಲಿ ಕುಂದಾಪುರ ತಾಲೂಕಿನಿಂದ 210 ಮಂದಿ, ಕಾರ್ಕಳ ದಿಂದ 110 ಮಂದಿ , ಉಡುಪಿಯಿಂದ 628 ಮಂದಿ ಹಾಗು ದ.ಕ. ಜಿಲ್ಲೆಯ ಕಡಬ ತಾಲೂಕಿನಿಂದ 150 ಮಂದಿ ಸೇರಿ ಒಟ್ಟು 1104 ಮಂದಿ ಪ್ರಯಾಣ ಬೆಳೆಸಿದ್ದಾರೆ.

ಜಾರ್ಖಂಡ್‌ನ ಈ ಮಂದಿ ಉಡುಪಿ, ಮಣಿಪಾಲ ಆಸುಪಾಸುಗಳಲ್ಲಿ ಮುಖ್ಯವಾಗಿ ಕಟ್ಟಡ ಕಾಮಗಾರಿ, ರಸ್ತೆ ಕಾಮಗಾರಿ, ನಿರ್ಮಾಣ ಕಾಮಗಾರಿ ಗಳಲ್ಲಿ ಕೆಲಸ ಮಾಡುತ್ತಿದ್ದರು. ಮಂಗಳೂರಿನಿಂದ ರೈಲಿನ ವ್ಯವಸ್ಥೆ ಮಾಡಲಾಗಿದೆ ಎಂಬ ಸುದ್ದಿಯನ್ನು ನಂಬಿ ಒಂದು ಗುಂಪು ತಮ್ಮ ಊರಿಗೆ ತೆರಳಲು ರವಿವಾರ ಬೆಳಗಿನ ಜಾವ ಕಾಲ್ನಡಿಗೆಯಲ್ಲಿ ಮಂಗಳೂರಿಗೆ ಹೊರಟಿದ್ದರು.

ಕಾಪು ಕೊಪ್ಪಲಂಗಡಿ ಸಮೀಪ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ತೆರಳುತ್ತಿದ್ದ ಇವರನ್ನು ಕಂಡ ಸ್ಥಳೀಯರು, ಕಾಪು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಬಂದ ಪೊಲೀಸರು ಇವರನ್ನು ವಿಚಾರಿಸಿ ಮರಳಿ ಉಡುಪಿಗೆ ರವಾನಿಸಿದ್ದರು. ಒಂದು ವಾರದಿಂದ ಪಡಿತರವಿಲ್ಲದೇ ತಮಗೆ ಊಟಕ್ಕೆ ತೀವ್ರ ತೊಂದರೆಯಾಗಿದೆ ಎಂದು ಅವರು ಅವಲತ್ತುಕೊಂಡಿದ್ದರು.

ತಮ್ಮ ಸತತ ಬೇಡಿಕೆಗಳ ಬಳಿಕ ಇದೀಗ ತಮ್ಮ ಊರಿಗೆ ತೆರಳಲು ಶ್ರಮಿಕ್ ರೈಲಿನ ವ್ಯವಸ್ಥೆ ಮಾಡಿದ್ದು, ಈಡೇರದ ಕನಸುಗಳೊಂದಿಗೆ ತಾವು ಊರಿಗೆ ಮರಳುತ್ತಿರುವುದಾಗಿ ಹೆಚ್ಚಿನ ಯುವಕರು ಕಣ್ಣೀರುಗೆರೆಯುತ್ತಾ ತಿಳಿಸಿದರು.

ಲಾಕ್‌ಡೌನ್ ಬಳಿಕ ಕೆಲಸವಿಲ್ಲದೇ, ಕೈಯಲ್ಲಿ ದುಡ್ಡಿಲ್ಲದೇ ಕಂಗಾಲಾಗಿದ್ದೆವು. ಸರಕಾರ ನಮಗೆ ಯಾವುದೇ ರೀತಿಯ ನೆರವಿನ ಹಸ್ತ ನೀಡಲಿಲ್ಲ. ಕೆಲವಾರು ಸಂಘ, ಸಂಸ್ಥೆಗಳು ನಮಗೆ ಆಹಾರ ಸೇರಿದಂತೆ ಅಗತ್ಯ ವಸ್ತುಗಳನ್ನು ನೀಡಿದವು. ಅವರ ಈ ಸಹಾಯವನ್ನು ನಾವು ಯಾವತ್ತೂ ಮರೆಯುವುದಿಲ್ಲ ಎಂದು ಅವರು ಕೃತಜ್ಞತಾ ಭಾವನೆಗಳಿಂದ ನುಡಿದರು.

ಮನೆಯಲ್ಲೇ ಸಾಯುವೇ!:  ‘ನಾನು ಕಳೆದ ಮೂರು ವರ್ಷಗಳಿಂದ ವಿವಿಧ ಗುತ್ತಿಗೆ ಕಾಮಗಾರಿಗಳಲ್ಲಿ ದುಡಿದು ಸಂಪಾದಿಸಿ ಉಳಿಸಿದ್ದ ಹಣವೆಲ್ಲಾ ಖರ್ಚಾಗಿದೆ. ಇನ್ನೂ ಲಾಕ್‌ಡೌನ್ ಮುಂದುವರಿದರೆ ಇಲ್ಲಿ ಬದುಕುವುದು ಕಷ್ಟ. ಜೀವನದಲ್ಲಿ ಹಿಂದೆಂದೂ ಕಾಣದ ಕಷ್ಟವನ್ನು ಈ ಕೊರೋನ ತಂದಿದೆ. ಹೀಗಾಗಿ ಊರಿಗೆ ತೆರಳಿ ಮನೆಯಲ್ಲಿದ್ದರೆ ಒಂದು ಹೊತ್ತಿನ ಗಂಜಿ ಕುಡಿದು ಬದುಕುವೆ. ಸಾಯುವುದಾದರೆ ಮನೆಯಲ್ಲೇ ಸಾಯುತ್ತೇನೆ.’ ಎಂದವರು ಉಡುಪಿ- ಮಣಿಪಾಲಗಳಲ್ಲಿ ಕಾರ್ಮಿಕರಾಗಿದ್ದ ಯುವಕ ವಿಶ್ವಾಸ್.

‘ಮೇ 30ರಂದು ತಂಗಿ ಮದುವೆ ನಿಗದಿಯಾಗಿತ್ತು. ಹಣ ಹೊಂದಿಸುವ ಉದ್ದೇಶದಿಂದ ನಾನು ಸ್ನೇಹಿತರೊಂದಿಗೆ ಜನವರಿಯಲ್ಲಿ ಉಡುಪಿಗೆ ಬಂದೆ. ಎರಡುವರೆ ತಿಂಗಳು ಕೆಲಸ ಮಾಡಿದೆ. ಎಲ್ಲಿತ್ತೋ ಈ ಕೊರೋನ ಉಡುಪಿಗೂ ಒಕ್ಕರಿಸಿತು. ಇದರಿಂದಾಗಿ ಕೆಲಸ ಸಿಗುವುದೇ ನಿಂತು ಹೋಗಿದೆ. ನಾನು ಮತ್ತೆ ನಿರುದ್ಯೋಗಿಯಾದೆ. ದಾನಿಗಳು ರೇಷನ್, ಆಹಾರ ನೀಡಿದ್ದಾರೆ. ಇರುವ ಹಣ ಖಾಲಿಯಾಗಿದೆ. ತಂಗಿ ಮದುವೆ ಹೇಗೆ ಮಾಡಲಿ  ? ಮನೆಯಲ್ಲಿ ಹೇಗಾದರೂ ಮಾಡಿ ಮನೆಗೆ ಬಂದರೆ ಸಾಕು ಎನ್ನುತ್ತಿದ್ದಾರೆ. ಅಂದು ಸಾವಿರಾರು ಕನಸುಗಳೊಂದಿಗೆ ಇಲ್ಲಿಗೆ ಬಂದೆ. ಇಂದು ಈಡೇರದ ಕನಸುಗಳೊಂದಿಗೆ ಹೋಗುತಿದ್ದೇನೆ ಎಂದು ಕಾರ್ಮಿಕ ಬಿಸ್ರಾ ಪ್ರಸಾದ್.

ಹೆತ್ತವರು ಕರೆಯುತಿದ್ದಾರೆ: ಊರಿನಲ್ಲಿ ತಂದೆ-ತಾಯಿ ನನಗಾಗಿ ಕಾಯುತ್ತಿದ್ದಾರೆ. ಕೊರೋನ ಸುದ್ದಿ ಕೇಳಿದ ಬಳಿಕ ಮನೆಗೆ ಬರುವಂತೆ ಹಠ ಮಾಡುತ್ತಿದ್ದಾರೆ. ಚಿಂತೆಯಲ್ಲಿ ತಂದೆ ಹಾಸಿಗೆ ಹಿಡಿದಿದ್ದಾರೆ. ಊರಿಗೆ ತೆರಳಲು ಎರಡು ತಿಂಗಳಿನಿಂದ ಪ್ರಯತ್ನಿಸುತಿದ್ದೇನೆ. ಆಗುತ್ತಿಲ್ಲ. ಈಗ 950ರೂ. ನೀಡಿ ಟಿಕೇಟ್ ಪಡೆದು ಮನೆಗೆ ಹೊರಟಿದ್ದೇನೆ. ಕೊರೋನ ಕಡಿಮೆಯಾದರೆ ಮತ್ತೆ ಉಡುಪಿಗೆ ಬರುವೆ ಎಂದರು ಮತ್ತೊಬ್ಬ ಕಾರ್ಮಿಕ ರಬೀಂದ್ರ.

ಇಂದು ತಮ್ಮನ್ನು ಕರೆದೊಯ್ಯುವ ರೈಲು ಬರುವುದನ್ನು ಅಪರಾಹ್ನದಿಂದಲೇ ಕಾಯುತ್ತಾ ಕುಳಿತ ಬಹುಮಂದಿಯ ಕತೆ ಹೀಗೇ ಇದೆ. ಬದುಕು ಕಟ್ಟುವ, ಭವಿಷ್ಯ ರೂಪಿಸಿಕೊಳ್ಳುವ ಬಣ್ಣಬಣ್ಣದ ಕನಸುಗಳೊಂದಿಗೆ ಬಂದ ಈ ಬಡ ಕಾರ್ಮಿಕರು, ಕೊರೋನದಿಂದಾಗಿ ಚಿಂದಿಯಾಗಿ, ಕತ್ತಲು ಆವರಿಸಿದ ಬದುಕನ್ನು ಅರಸುತ್ತಾ ಮರಳಿಗೂಡನ್ನು ಸೇರಲು ಹೊರಟಿದ್ದಾರೆ.

ಉಡುಪಿಗೆ ಮತ್ತೆ ಬರುವೆ !

‘ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ, ಅವರಿಗೆ ಒಳ್ಳೆಯ ಶಿಕ್ಷಣ ನೀಡಬೇಕೆಂಬ ಸದ್ದುದ್ದೇಶದೊಂದಿಗೆ ಐದು ವರ್ಷಗಳ ಹಿಂದೆ ಉಡುಪಿಗೆ ಬಂದೆ. ನಮ್ನೂರಿ ನಲ್ಲಿ ಅತೀ ಕಡಿಮೆ ಕೂಲಿ. ಉಡುಪಿ-ಮಣಿಪಾಲದಲ್ಲಿಹೆಚ್ಚು ಕೂಲಿ ನೀಡುತ್ತಾರೆ ಎಂಬುದನ್ನು ಕೇಳಿ ಬದುಕು ಕಟ್ಟಿಕೊಳ್ಳಲು ಬಂದ್ದಿದ್ದೇನೆ. ಒಬ್ಬ ಮಗಳು 10 ಹಾಗೂ ಇನ್ನೊಬ್ಬಾಕೆ 8ನೇ ತರಗತಿ ಓದುತ್ತಿದ್ದಾಳೆ. ಜೂನ್-ಜುಲೈ ತಿಂಗಳಿನಲ್ಲಿ ಫೀಸ್ ಕಟ್ಟಬೇಕು. ಇರುವ ಹಣ ಖಾಲಿ ಯಾಗಿದೆ. ಊರಿನ ಜಮೀನು ಒತ್ತೆ ಇರಿಸಿ ಮಕ್ಕಳಿಗೆ ಶಿಕ್ಷಣ ನೀಡಬೇಕಾಗಿದೆ. ಲಾಕ್‌ಡೌನ್‌ಗಳೆಲ್ಲಾ ಮುಗಿದ ಬಳಿಕ ಮತ್ತೆ ಉಡುಪಿಗೆ ಬರುತ್ತೇನೆ.’

-ಜಾರ್ಖಂಡ್‌ನ ಕಾರ್ಮಿಕ ಅನೂಪ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News