ಉಡುಪಿ: ಮೂರು ರಾಜ್ಯಗಳಿಂದ ಬಂದ 27 ಮಂದಿಗೆ ಕೊರೋನ ಪಾಸಿಟಿವ್
ಉಡುಪಿ, ಮೇ 21: ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಕ್ವಾರಂಟೈನ್ ನಲ್ಲಿರುವ ತಾಯಿ ಮತ್ತು ಮಗು ಸೇರಿದಂತೆ ಉಡುಪಿ ಜಿಲ್ಲೆಯ ಒಟ್ಟು 27 ಮಂದಿಯಲ್ಲಿ ಗುರುವಾರದ ಬೆಳಗಿನ ವರದಿಯಲ್ಲಿ ಕೊರೋನ ಸೋಂಕು ಕಂಡುಬಂದಿದೆ. ಇವರು ಮಹಾರಾಷ್ಟ್ರ, ತೆಲಂಗಾಣ ಹಾಗೂ ಕೇರಳದಿಂದ ಜಿಲ್ಲೆಗೆ ಆಗಮಿಸಿದವರಾಗಿದ್ದಾರೆ.
ಇಂದು ಕೊರೋನಕ್ಕೆ ಪಾಸಿಟಿವ್ ಆದವರಲ್ಲಿ 16 ಮಂದಿ ಮಕ್ಕಳು ಸೇರಿದ್ದಾರೆ. ಉಳಿದಂತೆ ಆರು ಮಂದಿ ಪುರುಷರು ಹಾಗೂ ಐವರು ಮಹಿಳೆಯರಲ್ಲೂ ಕೊರೋನ ಸೋಂಕು ಕಂಡುಬಂದಿದೆ. ಇವರಲ್ಲಿ ಮಹಾರಾಷ್ಟ್ರದಿಂದ ಬಂದವರು 23 ಮಂದಿಯಾದರೆ, ಮೂವರು ತೆಲಂಗಾಣದವರು. ಇನ್ನೊಬ್ಬರು ಕೇರಳದಿಂದ ಮಣಿಪಾಲದ ಕೆಎಂಸಿಯಲ್ಲಿ ಚಿಕಿತ್ಸೆಗಾಗಿ ಪತಿಯೊಂದಿಗೆ ಬಂದ ಮಹಿಳೆ ಯಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.
ಜಿಲ್ಲೆಯಲ್ಲಿರುವ 25 ಮಂದಿ ಕೊರೋನ ಸೋಂಕಿತರಲ್ಲಿ 15 ಮಂದಿ ಬೈಂದೂರು ತಾಲೂಕಿನವರು, ಐವರು ಕುಂದಾಪುರ ತಾಲೂಕಿನವರು, ಮೂವರು ಕಾರ್ಕಳ ಹಾಗೂ ಇಬ್ಬರು ಉಡುಪಿ ತಾಲೂಕಿನವರು. ಶಿರಸಿಯಲ್ಲಿ ಕ್ವಾರಂಟೈನ್‌ನಲ್ಲಿದ್ದು ಪಾಸಿಟಿವ್ ಬಂದಿರುವವರು ಬೈಂದೂರು ತಾಲೂಕಿನ ಶಿರೂರಿನವರು ಎಂದು ತಿಳಿದುಬಂದಿದೆ.
ಕೊರೋನ ಪಾಸಿಟಿವ್ ಬಂದ 27 ಮಂದಿಯಲ್ಲಿ 24 ಮಂದಿಯನ್ನು ಉಡುಪಿ ನಗರದಲ್ಲಿರುವ ಡಾ.ಟಿಎಂಎ ಪೈ ಕೋವಿಡ್ ಆಸ್ಪತ್ರೆಗೆ ಸ್ಥಳಾಂತರಿ ಸಲಾಗುತ್ತಿದೆ. ಕೇರಳದಿಂದ ಚಿಕಿತ್ಸೆಗೆ ಬಂದ ಪತಿ ಕೊರೋನಕ್ಕೆ ನೆಗೆಟಿವ್ ಆದರೆ, ಪತ್ನಿ ಪಾಸಿಟಿವ್ ಆಗಿದ್ದಾರೆ. ಇವರನ್ನು ಮಣಿಪಾಲ ಕೆಎಂಸಿ ಆಸ್ಪತ್ರೆಯ ಐಸೋಲೇಷನ್ ವಾರ್ಡಿಗೆ ಸೇರಿಸಲಾಗಿದೆ. ಶಿರಸಿಯಲ್ಲಿ ಕ್ವಾರಂಟೈನ್‌ನಲ್ಲಿದ್ದು, ಕೊರೋನ ಸೋಂಕು ಪತ್ತೆಯಾಗಿರುವ ತಾಯಿ-ಮಗುವನ್ನು ಕಾರವಾರದ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ ಎಂದೂ ಜಿಲ್ಲಾಧಿಕಾರಿ ತಿಳಿಸಿದರು.