ಕೊರೋನ: ಉಡುಪಿಯಲ್ಲಿ ಗುರುವಾರ 128 ನೆಗೆಟಿವ್, 26 ಪಾಸಿಟಿವ್
ಉಡುಪಿ, ಮೇ 21: ನೋವೆಲ್ ಕೊರೋನ ವೈರಸ್ (ಕೋವಿಡ್- 19) ಸೋಂಕಿನ ಪರೀಕ್ಷೆಗಾಗಿ ಕಳುಹಿಸಿದ ಶಂಕಿತರ ಗಂಟಲು ದ್ರವದ ಮಾದರಿಗಳಲ್ಲಿ ಗುರುವಾರ 128 ವರದಿಗಳು ನೆಗೆಟಿವ್ ಆಗಿದ್ದರೆ, ಭರ್ಜರಿ 26 ಪಾಸಿಟಿವ್ ಫಲಿತಾಂಶ ನೀಡಿವೆ. ಇದರೊಂದಿಗೆ ಉಡುಪಿ ಜಿಲ್ಲೆಯಲ್ಲಿ ಪತ್ತೆಯಾದ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಈಗ 48ಕ್ಕೆ ನೆಗೆದಿದೆ ಎಂದು ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುಧೀರ್‌ಚಂದ್ರ ಸೂಡ ತಿಳಿಸಿದ್ದಾರೆ.
ಇಂದು ಪತ್ತೆಯಾದ 26 ಪಾಸಿಟಿವ್ ಪ್ರಕರಣಗಳಲ್ಲಿ 25 ಹೊರರಾಜ್ಯಗಳಿಂದ ಬಂದವರದ್ದಾದರೆ, ಒಂದು ಪ್ರಕರಣ ದುಬೈಯಿಂದ ಬಂದ ಯುವಕ ನದ್ದಾಗಿದೆ. ಉಡುಪಿ ಜಿಲ್ಲೆಯ ಬೈಂದೂರಿನ ತಾಯಿ-ಮಗು ತಾವು ಕ್ವಾರಂಟೈನ್‌ನಲ್ಲಿದ್ದ ಉತ್ತರ ಕನ್ನಡ ಜಿಲ್ಲೆ ಶಿರಸಿಯಲ್ಲಿ ಪಾಸಿಟಿವ್ ಬಂದಿದ್ದು, ಅವರನ್ನೀಗ ಕಾರವಾರದ ಕೋವಿಡ್ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಗುರುವಾರವೂ ಕೊರೋನ ಸೋಂಕು ವ್ಯಾಪಕವಾಗಿರುವ ಹೊರರಾಜ್ಯಗಳಿಂದ ಆಗಮಿಸಿದ 567 ಮಂದಿ ಸೇರಿದಂತೆ ಒಟ್ಟು 653 ಮಂದಿಯ ಗಂಟಲುದ್ರವದ ಸ್ಯಾಂಪಲ್‌ಗಳನ್ನು ಪರೀಕ್ಷೆಗಾಗಿ ಕಳುಹಿಸಿದ್ದು, ಇದರಿಂದ ಒಟ್ಟು 1487 ಸ್ಯಾಂಪಲ್‌ಗಳ ಪರೀಕ್ಷಾ ವರದಿ ಬರಲು ಬಾಕಿ ಇವೆ ಎಂದು ಡಾ.ಸೂಡ ತಿಳಿಸಿದರು.
ಕೊರೋನ ರೋಗದ ಗುಣಲಕ್ಷಣವಿರುವ 653 ಮಂದಿಯ ಗಂಟಲು ದ್ರವದ ಮಾದರಿಗಳನ್ನು ಗುರುವಾರ ಪರೀಕ್ಷೆಗೆ ಕಳುಹಿಸಲಾಗಿದ್ದು, ಇವುಗಳಲ್ಲಿ 64 ಮಂದಿ ಸೋಂಕಿತರ ಸಂಪರ್ಕಕ್ಕೆ ಬಂದವರು, 12 ಮಂದಿ ತೀವ್ರ ಉಸಿರಾಟ ತೊಂದರೆಯವರು, 10 ಮಂದಿ ಶೀತಜ್ವರದಿಂದ ಬಳಲುವವರು ಹಾಗೂ 567 ಮಂದಿ ಕೊರೋನ ಹಾಟ್‌ಸ್ಪಾಟ್‌ಗಳಿಂದ ಬಂದವರ ಸ್ಯಾಂಪಲ್‌ಗಳು ಸೇರಿವೆ ಎಂದು ಡಿಎಚ್‌ಓ ತಿಳಿಸಿದರು.
ಉಡುಪಿ ಜಿಲ್ಲೆಯಲ್ಲಿ ಗುರುವಾರ ಸಂಜೆಯವರೆಗೆ ಒಟ್ಟು 3765 ಮಂದಿಯ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗಾಗಿ ಪಡೆಯಲಾಗಿದೆ. ಇವುಗಳಲ್ಲಿ 2231 ನೆಗೆಟಿವ್ ಆಗಿವೆ. ಒಟ್ಟಾರೆಯಾಗಿ ಈವರೆಗೆ ಉಡುಪಿಯ 48 ವರದಿಗಳು ಪಾಸಿಟಿವ್ ಆಗಿ ಬಂದಿವೆ ಎಂದರು.
ಶಂಕಿತ ನೋವೆಲ್ ಕೊರೋನ ಸೋಂಕಿನ ಪರೀಕ್ಷೆಗಾಗಿ ಇಂದು 10 ಮಂದಿ ಆಸ್ಪತ್ರೆಗಳ ಐಸೋಲೇಶನ್ ವಾರ್ಡಿಗೆ ದಾಖಲಾಗಿದ್ದಾರೆ. ಇವರಲ್ಲಿ ಆರು ಮಂದಿ ಪುರುಷ ಹಾಗೂ ನಾಲ್ವರು ಮಹಿಳೆಯರಿದ್ದಾರೆ. ಆರು ಮಂದಿ ಕೊರೋನ ಶಂಕಿತರು, ಇಬ್ಬರು ತೀವ್ರತರದ ಉಸಿರಾಟ ತೊಂದರೆ ಹಾಗೂ ಇಬ್ಬರು ಶೀತಜ್ವರದ ಬಾಧೆಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ವಿವಿಧ ಆಸ್ಪತ್ರೆಗಳ ಐಸೋಲೇಶನ್ ವಾರ್ಡಿನಿಂದ ಇಂದು 9 ಮಂದಿ ಬಿಡುಗಡೆಗೊಂಡಿದ್ದು, 95 ಮಂದಿ ಇನ್ನೂ ವೈದ್ಯರ ನಿಗಾದಲ್ಲಿದ್ದಾರೆ ಎಂದು ಎಂದವರು ವಿವರಿಸಿದರು.
ಜಿಲ್ಲೆಯಲ್ಲಿ ಕೊರೋನ ಸೋಂಕಿನ ಗುಣಲಕ್ಷಣದಒಬ್ಬರು ಇಂದು ನೋಂದಣಿ ಗೊಂಡಿದ್ದು, ಈ ಮೂಲಕ ಜಿಲ್ಲೆಯಲ್ಲಿ ಈವರೆಗೆ ಒಟ್ಟು 4700 ಮಂದಿಯನ್ನು ಕೊರೋನ ತಪಾಸಣೆಗಾಗಿ ನೋಂದಣಿ ಮಾಡಿಕೊಂಡಂತಾಗಿದೆ. ಇವರಲ್ಲಿ 3391(ಇಂದು 34) ಮಂದಿ 28 ದಿನಗಳ ನಿಗಾವನ್ನೂ, 4230 (46) ಮಂದಿ 14 ದಿನಗಳ ನಿಗಾವನ್ನು ಪೂರ್ಣಗೊಳಿಸಿದ್ದಾರೆ.
ಜಿಲ್ಲೆಯಲ್ಲಿ ಈಗಲೂ 314 ಮಂದಿ ಹೋಮ್ ಕ್ವಾರಂಟೈನ್ ಹಾಗೂ 61 ಮಂದಿ ಆಸ್ಪತ್ರೆ ಕ್ವಾರಂಟೈನ್‌ನಲ್ಲಿದ್ದಾರೆ ಎಂದು ಡಾ.ಸುಧೀರ್ ಚಂದ್ರ ಸೂಡ ತಿಳಿಸಿದರು.