ವೃದ್ಧ ಕೊರೋನ ಸೋಂಕಿತರನ್ನು ವೆಂಟಿಲೇಟರ್‌ನಲ್ಲಿಟ್ಟರೂ ಬದುಕುವ ಸಾಧ್ಯತೆ ಕಡಿಮೆ

Update: 2020-05-21 16:04 GMT

ವಾಶಿಂಗ್ಟನ್, ಮೇ 21: ಕೊರೋನ ವೈರಸ್ ಸೋಂಕಿಗೆ ಒಳಗಾಗಿರುವ ಹೆಚ್ಚಿನ ವೃದ್ಧರು, ಅದರಲ್ಲೂ ಮುಖ್ಯವಾಗಿ ಅತಿ ರಕ್ತದೊತ್ತಡ, ಮಧುಮೇಹ, ಹೃದಯದ ಕಾಯಿಲೆ ಮತ್ತು ಬೊಜ್ಜಿನಿಂದ ಬಳಲುತ್ತಿರುವವರನ್ನು ವೆಂಟಿಲೇಟರ್ (ಕೃತದ ಉಸಿರಾಟ ವ್ಯವಸ್ಥೆ)ನಲ್ಲಿ ಇಟ್ಟರೂ ಅವರು ಬದುಕಿ ಉಳಿಯುವ ಸಾಧ್ಯತೆ ಕಡಿಮೆ ಎಂದು ಅಧ್ಯಯನವೊಂದು ತಿಳಿಸಿದೆ.

ನ್ಯೂಯಾರ್ಕ್‌ನ ಎರಡು ಆಸ್ಪತ್ರೆಗಳ ವೆಂಟಿಲೇಟರ್‌ಗಳಲ್ಲಿ ಇಡಲ್ಪಟ್ಟ ಹೆಚ್ಚಿನ ವಯೋವೃದ್ಧರು ಬದುಕಿ ಉಳಿದಿಲ್ಲ ಎಂದು ಲ್ಯಾನ್ಸೆಟ್ ಪತ್ರಿಕೆಯಲ್ಲಿ ಪ್ರಕಟಗೊಂಡಿರುವ ಅಧ್ಯಯನವು ತಿಳಿಸಿದೆ ಎಂದು ವಾಶಿಂಗ್ಟನ್ ಪೋಸ್ಟ್ ವರದಿ ಮಾಡಿದೆ.

ಈ ಕಾಯಿಲೆಯು ಎಷ್ಟು ಭಯಾನಕವಾಗಿರಬಹುದು ಎಂಬ ಕಲ್ಪನೆಯೇ ನಮಗಿರಲಿಲ್ಲ ಎಂದು ಅಧ್ಯಯನದ ಹಿರಿಯ ಲೇಖಕ ಹಾಗೂ ಕೊಲಂಬಿಯ ವಿಶ್ವವಿದ್ಯಾನಿಲಯ ಇರ್ವಿಂಗ್ ಮೆಡಿಕಲ್ ಸೆಂಟರ್‌ನಲ್ಲಿ ಪಲ್ಮನಾಲಜಿಸ್ಟ್ (ಶ್ವಾಸಕೋಶ ತಜ್ಞ)ರೂ ಆಗಿರುವ ಮ್ಯಾಕ್ಸ್ ಒಡೊನೆಲ್ ಹೇಳಿದ್ದಾರೆ ಎಂದು ಪತ್ರಿಕೆ ತಿಳಿಸಿದೆ.

ಈ ಎರಡು ಆಸ್ಪತ್ರೆಗಳಲ್ಲಿ 30 ವರ್ಷಕ್ಕಿಂತ ಕೆಳಗಿನ ಗಂಭೀರ ಸ್ಥಿತಿಯಲ್ಲಿದ್ದ ರೋಗಿಗಳ ಪೈಕಿ ಯಾರೂ ಮೃತಪಟ್ಟಿಲ್ಲ ಹಾಗೂ ಅವರ ಪೈಕಿ ಕೆಲವರನ್ನು ಮಾತ್ರ ವೆಂಟಿಲೇಟರ್‌ನಲ್ಲಿ ಇಡಬೇಕಾಗಿ ಬಂತು ಎಂದು ಒಡೊನೆಲ್ ತಿಳಿಸಿದರು. ಆದರೆ, ವೆಂಟಿಲೇಟರ್‌ಗಳಲ್ಲಿ ಇಡಲ್ಪಟ್ಟ 80 ವರ್ಷಕ್ಕಿಂತ ಹೆಚ್ಚಿನ ರೋಗಿಗಳ ಪೈಕಿ 80 ಶೇಕಡಕ್ಕಿಂತಲೂ ಅಧಿಕ ಮಂದಿ ಬದುಕುಳಿಯಲಿಲ್ಲ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News