ಮೈಲುಗಲ್ಲು ಆಗಿ ಪರಿವರ್ತನೆಯಾಗಲಿರುವ ಶಿಲಾಶಾಸನ ಪತ್ತೆ!
ಉಡುಪಿ, ಮೇ 21: ಆತ್ರಾಡಿ-ಮೂಡುಬೆಳ್ಳೆ ರಸ್ತೆಯ ಗುಂಡುಪಾದೆ ಬಸ್‌ನಿಲ್ದಾಣ ಸಮೀಪ ಇರುವ ಪ್ರಾಚೀನ ಶಿಲಾಶಾಸನವೊಂದು ಮೈಲಿಗಲ್ಲು ಆಗಿ ಪರಿವರ್ತನೆಯಾಗುವ ಹಂತದಲ್ಲಿರುವುದು ಕಂಡು ಬಂದಿದೆ.
ರಸ್ತೆ ಬದಿಯಲ್ಲಿನ ಮೈಲಿಗಲ್ಲಿಗೆ ಹಚ್ಚುವ ಬಿಳಿ ಬಣ್ಣವನ್ನು ಈ ಶಿಲಾಶಾಸನಕ್ಕೆ ಹಚ್ಚಲಾಗಿದೆ. ಈ ಶಾಸನದ ಮೇಲ್ಭಾಗದಲ್ಲಿ ಸೂರ್ಯ ಚಂದ್ರ, ಮಧ್ಯದಲ್ಲಿ ದೊಡ್ಡದಾದ ಶಿವಲಿಂಗ ಕಾಣಸಿಗುತ್ತದೆ. ಆದರೆ ಶಿಲಾಶಾಸನದಲ್ಲಿ ಬರೆಯುವ ಭಾಗದಲ್ಲಿ ಸಿಮೆಂಟ್ ಹಚ್ಚಿದಂತೆ ಕಂಡುಬರುತ್ತದೆ. ಇದರಿಂದ ಬರಹ ಮರೆ ಯಾಗಿದೆ. ಅಂದಾಜು ಎರಡುವರೆ ಅಡಿ ಉದ್ದ, ಒಂದುವರೆ ಅಡಿ ಅಗಲ ಇರುವ ಈ ಶಾಸನ ಪತ್ತೆಯಾಗಿರುವ ಸ್ಥಳದಿಂದ ಸುಮಾರು ಎರಡು ಕಿಲೋ ಮೀಟರ್ ಅಂತರದಲ್ಲಿ ಪರ್ಣಂಕಿಲ ಮಹಾಗಣಪತಿ ಈಶ್ವರನ ದೇವಸ್ಥಾನ ಇದೆ.
ಈ ಶಾಸನವು ಮುಂದಿನ ದಿನಗಳಲ್ಲಿ ಮೈಲುಗಲ್ಲಾಗಿ ಪರಿವರ್ತನೆಯಾಗುವ ಸಾಧ್ಯತೆ ಇದ್ದು, ಆದುದರಿಂದ ಮುಂದಿನ ಪೀಳಿಗೆಗೆ ದೊರಕಿಸಿ ಕೊಡುವ ನಿಟ್ಟಿನಲ್ಲಿ ಈ ಶಾಸನದ ರಕ್ಷಣೆಯಾಗಬೇಕು. ಈ ನಿಟ್ಟಿನಲ್ಲಿ ಸಂಬಂಧಪಟ್ಟ ಇಲಾಖೆಯವರು ಇತ್ತ ಗಮನಹರಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತ ಗಣೇಶ್ರಾಜ್ ಸರಳೇಬೆಟ್ಟು ಒತ್ತಾಯಿಸಿದ್ದಾರೆ.