ಉಡುಪಿ ಜಿಲ್ಲೆಗೆ 120 ಮಂದಿ ವಿದೇಶ, 7355 ಮಂದಿ ಹೊರರಾಜ್ಯದಿಂದ ಆಗಮನ

Update: 2020-05-21 16:18 GMT

ಉಡುಪಿ, ಮೇ 21: ಕೊರೋನ ವೈರಸ್ ನಿಯಂತ್ರಣಕ್ಕಾಗಿ ದೇಶಾದ್ಯಂತ ವಿಧಿಸಲಾಗಿದ್ದ ಲಾಕ್‌ಡೌನ್‌ನಲ್ಲಿ ಕೆಲವು ರಿಯಾಯಿತಿಗಳನ್ನು ನೀಡಿದ ಬಳಿಕ ಉಡುಪಿ ಜಿಲ್ಲೆಗಳಿಗೆ ವಿದೇಶಗಳಿಂದ 120 ಮಂದಿ ಹಾಗೂ ಹೊರರಾಜ್ಯಗಳಿಂದ ಒಟ್ಟು 7355 ಮಂದಿ ಆಗಮಿಸಿದ್ದಾರೆ ಅಥವಾ ಹುಟ್ಟೂರಿಗೆ ಮರಳಿದ್ದಾರೆ ಎಂದು ಜಿಲ್ಲಾಡಳಿತ ಬಿಡುಗಡೆಗೊಳಿಸಿದ ಅಧಿಕೃತ ಪಟ್ಟಿಯಲ್ಲಿ ತಿಳಿಸಲಾಗಿದೆ.

ಉಡುಪಿ ಜಿಲ್ಲೆಗೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಮೇ 13ರಂದು ಒಟ್ಟು 49 ಮಂದಿ ಆಗಮಿಸಿದ್ದರೆ, ಮೇ 18ರಂದು ಎರಡನೇ ಹಂತದಲ್ಲಿ 48 ಮಂದಿ ಆಗಮಿಸಿದ್ದರು. ಮೇ 20 ಮಂಗಳವಾರ ರಾತ್ರಿ ಮಸ್ಕತ್‌ನಿಂದ 23 ಮಂದಿ ಸೇರಿಗೆ ಒಟ್ಟು 120 ಮಂದಿ ಈಗಾಗಲೇ ಉಡುಪಿ ಜಿಲ್ಲೆಗೆ ಆಗಮಿಸಿ ಕ್ವಾರಂಟೈನ್‌ನಲ್ಲಿದ್ದಾರೆ. ಸದ್ಯ ಮೇ 31ರವರೆಗೆ ನಾಲ್ಕು ರಾಜ್ಯಗಳಿಂದ ಕರ್ನಾಟಕಕ್ಕೆ ಬರುವವರಿಗೆ ನಿರ್ಬಂಧ ವಿಧಿಸಲಾಗಿದೆ.

ಇನ್ನು ಹೊರರಾಜ್ಯಗಳಿಂದ ಸೇವಾ ಸಿಂಧು ಆ್ಯಪ್ ಮೂಲಕ ಉಡುಪಿ ಜಿಲ್ಲೆಗೆ ಆಗಮಿಸಲು ಅವಕಾಶ ನೀಡಿದ ಬಳಿಕ ಮೇ 4ರಿಂದ ಈವರೆಗೆ ಒಟ್ಟು 15 ರಾಜ್ಯಗಳಿಂದ 7355 ಮಂದಿ ಉಡುಪಿಗೆ ಆಗಮಿಸಿದ್ದು, ಜಿಲ್ಲೆಯಾದ್ಯಂತ ತೆರೆಯಲಾದ ವಿವಿಧ ಕ್ವಾರಂಟೈನ್ ಕೇಂದ್ರಗಳಲ್ಲಿ ತಂಗಿದ್ದಾರೆ ಎಂದು ತಿಳಿದು ಬಂದಿದೆ.

ಇವುಗಳಲ್ಲಿ ಉಡುಪಿ ತಾಲೂಕಿಗೆ 523 ಮಂದಿ, ಕಾಪು ತಾಲೂಕಿಗೆ 405, ಬ್ರಹ್ಮಾವರ ತಾಲೂಕಿಗೆ 479, ಕಾರ್ಕಳ ತಾಲೂಕಿಗೆ 2226, ಹೆಬ್ರಿ ತಾಲೂಕಿಗೆ 2, ಕುಂದಾಪುರ ತಾಲೂಕಿಗೆ 1271 ಹಾಗೂ ಬೈಂದೂರು ತಾಲೂಕಿಗೆ 2449 ಮಂದಿ ಬಂದಿದ್ದಾರೆ.

ಹೀಗೆ ಬಂದವರಲ್ಲಿ ಮಹಾರಾಷ್ಟ್ರ ರಾಜ್ಯದಿಂದ ಬಂದವರ ಸಂಖ್ಯೆ ಅತ್ಯಧಿಕ ವಾಗಿದೆ. ಮುಂಬಯಿ ಸೇರಿದಂತೆ ಮಹಾರಾಷ್ಟ್ರದಿಂದ ಒಟ್ಟು 6620 ಮಂದಿ ಈಗಾಗಲೇ ಜಿಲ್ಲೆಗೆ ಬಂದಿದ್ದಾರೆ. ಅತ್ಯಧಿಕ ಅಂದರೆ 2243 ಮಂದಿ ಬೈಂದೂರು ತಾಲೂಕಿಗೆ 2119 ಮಂದಿ ಕಾರ್ಕಳ ತಾಲೂಕಿಗೆ. 1028 ಮಂದಿ ಕುಂದಾಪುರ ತಾಲೂಕಿಗೆ, ಬ್ರಹ್ಮಾವರಕ್ಕೆ 439, ಉಡುಪಿಗೆ 414, ಕಾಪುವಿಗೆ 375 ಹಾಗೂ ಹೆಬ್ರಿ ಇಬ್ಬರು ಮಾತ್ರ ಆಗಮಿಸಿದ್ದಾರೆ ಎಂದು ಪ್ರಕಟಣೆಯಲ್ಲಿ ವಿವರಿಸಲಾಗಿದೆ.

ಉಳಿದಂತೆ ತಮಿಳುನಾಡಿನಿಂದ 75, ತೆಲಂಗಾಣದಿಂದ 408, ಆಂಧ್ರ ಪ್ರದೇಶದಿಂದ 40, ಗೋವಾದಿಂದ 50, ಗುಜರಾತ್‌ನಿಂದ 32, ಮಧ್ಯಪ್ರದೇಶದಿಂದ ಒಬ್ಬರು, ಹೊಸದಿಲ್ಲಿಯಿಂದ 16 ಮಂದಿ, ಹರ್ಯಾಣ, ಚಂಡೀಗಢ, ಒರಿಸ್ಸಾದಿಂದ ತಲಾ ಒಬ್ಬರು, ಪಶ್ಚಿಮ ಬಂಗಾಳದಿಂದ 6, ರಾಜಸ್ತಾನದಿಂದ 5, ಪಂಜಾಬ್‌ನಿಂದ 11 ಹಾಗೂ ಕೇರಳದಿಂದ 88 ಮಂದಿ ಉಡುಪಿ ಜಿಲ್ಲೆಗೆ ಆಮಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News