ಬಂಟ್ವಾಳ: ಸೀಲ್ ಡೌನ್ ನಿಂದ ಮುಕ್ತಗೊಳಿಸಬೇಕೆಂದು ಒತ್ತಾಯಿಸಿ ಪ್ರತಿಭಟನೆ

Update: 2020-05-21 16:34 GMT

ಬಂಟ್ವಾಳ: ಕೊರೋನಾ ಸೋಂಕು ಪತ್ತೆಯಾದ ಹಿನ್ನಲೆಯಲ್ಲಿ ಸೀಲ್ ಡೌನ್ ಮಾಡಲಾದ ಬಂಟ್ವಾಳ ರಥಬೀದಿಯನ್ನು ಸೀಲ್ ಡೌನ್ ನಿಂದ ಮುಕ್ತಗೊಳಿಸಬೇಕೆಂದು ಆಗ್ರಹಿಸಿ ಪುರವಾಸಿಗಳು ಹಠಾತ್ ಪ್ರತಿಭಟನೆ ನಡೆಸಿದ ಘಟನೆ ಗುರುವಾರ ನಡೆಯಿತು.

ಪುರಸಭೆಯ ಹಿರಿಯ ಸದಸ್ಯ ಗೋವಿಂದ ಪ್ರಭು ಅವರ  ನೇತೃತ್ವದಲ್ಲಿ ಸೀಲ್ ಡೌನ್ ಮತ್ತು ಲಾಕ್ ಡೌನ್ ವ್ಯಾಪ್ತಿಯ ನಾಗರಿಕರು ಬಂಟ್ವಾಳ ಸಮುದಾಯ ಆರೋಗ್ಯ ಕೇಂದ್ರದ ಬಳಿ ರಸ್ತೆಯನ್ನು ಮುಚ್ಚಲಾದ ಬ್ಯಾರಿಕೇಡ್ ಸಮೀಪ ಪ್ರತಿಭಟನೆ ನಡೆಸಿದರು.ಮಹಿಳೆಯರು ಸೇರಿದಂತೆ ನೂರಾರು ಮಂದಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಸುದ್ದಿ ತಿಳಿದು ಸ್ಥಳಕ್ಕಾಮಿಸಿದ ತಹಶೀಲ್ದಾರ್ ರಶ್ಮೀ ಎಸ್.ಆರ್.ಅವರನ್ನು ಪುರಸಭಾ ಸದಸ್ಯ ಗೋವಿಂದಪ್ರಭು ಸಹಿತ ಪ್ರತಿಭಟನಾಕಾರರು ತೀವ್ರ ತರಾಟೆಗೆ ತೆಗೆದುಕೊಂಡರು. ಬಂಟ್ವಾಳ ನಗರ ಠಾಣೆಯ ಎಸ್ ಐ ಅವಿನಾಶ್ ಮತ್ತು ಸಿಬ್ಬಂದಿಗಳು ಪ್ರತಿಭಟನಾಕಾರರನ್ನು ಮನವೊಲಿಸಲು ಯತ್ನಿಸಿದರಾದರೂ ಯಾರು ಕೂಡ ಸ್ಥಳದಿಂದ ಕದಲಿಲ್ಲ ಪರಿಸ್ಥಿತಿ ಕೈ ಮೀರುವ ಹಂತ ತಲುಪುದನ್ನು ಅರಿತ ಪೋಲಿಸರು ಹೆಚ್ಚುವರಿ ಪೋಲಿಸರನ್ನು ಸ್ಥಳಕ್ಕೆ ಕರೆಸಲಾಯಿತು. ಕೊನೆಗೆ ತಹಶೀಲ್ದಾರರು ಸಂಜೆ5 ಗಂಟೆಗೆ ಸೀಲ್ ಡೌನ್ ಮುಕ್ತಗೊಳಿಸುವ ಕುರಿತು ಸ್ಪಷ್ಟಪಡಿಸುವುದಾಗಿ ನೀಡಿದ ಭರವಸೆಯಂತೆ ಪ್ರತಿಭಟನಾಕಾರರು ಮನೆಯತ್ತ ತೆರಳಿದರು.

ಎ.19 ಬಂಟ್ವಾಳ ಪೇಟೆ ಮಧ್ಯದಲ್ಲಿರುವ ಕಾಮತ್ ಲೇನ್ ನ ಗೃಹಿಣಿ ಕೊರೋನ ಸೋಂಕಿಗೆ ಬಲಿಯಾದ ಹಿನ್ನಲೆಯಲ್ಲಿ ಅಂದು ಮಧ್ಯ ರಾತ್ರಿ ರಥಬೀದಿಯನ್ನು ಸಂಪೂರ್ಣ ಸೀಲ್ ಡೌನ್ ಮಾಡಲಾಗಿತ್ತು, ಭಾಮಿ ಜಂಕ್ಷನ್, ಕೊಟ್ರಮಣಗಂಡಿ, ತ್ಯಾಗರಾಜರಸ್ತೆ, ವೈದ್ಯನಾಥ ರಸ್ತೆ ಸಮುದಾಯ ಆರೋಗ್ಯ ಕೇಂದ್ರದ ಬಳಿ ಮಣ್ಣು,ಬ್ಯಾರಿಕೇಡ್ ಹಾಕಿ ರಸ್ತೆಯನ್ನು ಮುಚ್ಚಲಾಗಿತ್ತು. ಆ ಬಳಿಕ ಗೃಹಿಣಿಯ ಅತ್ತೆ ಪಕ್ಕದ ಮನೆಯ ವೃದ್ದೆ ಕೊರೋನಾ ಸೋಂಕಿಗೆ ಬಲಿಯಾದರೆ ವೃದ್ದೆಯ ಪುತ್ರಿ,ಗೃಹಿಣಿಯ ಪುತ್ರಿ ಹಾಗೂ ಶಾಲಾರಸ್ತೆಯ ಒಂದೇ ಮನೆಯ ನಾಲ್ವರಿಗೆ ಕೊರೋನ ಸೋಂಕು ಪತ್ತೆಯಾಗಿತ್ತು‌.

ಇದೀಗ ಒಂದೇ ಮನೆಯ ಮೂವರು ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು,ಮೂವರು ಗುಣಮುಖರಾಗಿ ಮನೆಗೆ ಬಂದಿದ್ದಾರೆ.ಹಾಗೆಯೇ   ಕ್ವಾರಂಟೈನ್ ನಲ್ಲಿದ್ದ ಈ ಮನೆಯ ಮತ್ತುಅಕ್ಕ- ಪಕ್ಕದ ಮನೆಯ ಸದಸ್ಯರು ಕ್ವಾರೆಂಟೈನ್ ಮುಗಿಸಿ ಮನೆಗಾಗಮಿಸಿದ್ದಾರೆ. ಈ ನಡುವೆ ರಥಬೀದಿ ಯನ್ನು ಸೀಲ್ ಡೌನ್  ಮಾಡಿ 32 ದಿನಗಳು ಕಳೆದರೂ ತೆರವುಗೊಳಿಸದ  ಅಧಿಕಾರಿಗಳ ಕ್ರಮಕ್ಕೆ ನಾಗರಿಕರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದಲ್ಲದೆ  ಅವೈಜ್ಞಾನಿಕವಾಗಿ ಸೀಲ್ ಡೌನ್ ಮಾಡಲಾಗಿದೆ ಎಂಬ ಆರೋಪವು ನಾಗರಿಕರಿಂದ ಕೇಳಿಬಂದಿದೆ.

ಸಿಎಂ ಜತೆ ಚರ್ಚೆ : ಶಾಸಕ ನಾಯ್ಕ್

ಬಂಟ್ವಾಳ ಪೇಟೆಯ ಸೀಲ್‌ಡೌನ್ ತೆರವುಗೊಳಿಸುವಂತೆ ಬುಧವಾರ ರಾತ್ರಿ ಮುಖ್ಯಮಂತ್ರಿಯೊಂದಿಗೆ ಚರ್ಚಿಸಿದ್ದೇನೆ. ಗುರುವಾರ ಬೆಳಿಗ್ಗೆ ಡಿಸಿಎಂ ಜೊತೆಗೂ ಮಾತುಕತೆ ನಡೆಸಲಾಗಿದೆ. ಇಲ್ಲಿನ ಒಟ್ಟು ಸ್ಥಿತಿಗತಿಯ ಬಗ್ಗೆ ಸರಕಾರದ ಮುಖ್ಯ ಕಾರ್ಯದರ್ಶಿಯವರಿಗೂ ಮನವರಿಕೆ ಮಾಡಲಾಗಿದೆ. ಈ ಬಗ್ಗೆ ಸಿಎಸ್ ಅವರು ನೋಟಿಫೀಕೇಶನ್ ಮಾಡುವುದಾಗಿ ತಿಳಿಸಿದ್ದಾರೆ

- ರಾಜೇಶ್ ನಾಯ್ಕ್.  ಶಾಸಕರು ಬಂಟ್ವಾಳ

ಅವೈಜ್ಞಾನಿಕ ಸೀಲ್ ಡೌನ್ : ರೈ

ಬಂಟ್ವಾಳ ಪೇಟೆಯನ್ನು ಅವೈಜ್ಞಾನಿಕವಾಗಿ ಸೀಲ್‌ಡೌನ್ ಮಾಡಲಾಗಿದೆ ಎಂದು ಇಲ್ಲಿನ ನಾಗರಿಕರು ಹೇಳುತ್ತಿದ್ದಾರೆ. ಅದನ್ನು ಮೇಲಾಧಿಕಾರಿ ಗಳು ಪರಿಶೀಲಿಸಿ ನಿರ್ದಿಷ್ಟವಾದ ತೀರ್ಮಾನವನ್ನು ತೆಗೆದುಕೊಳ್ಳಬೇಕು. ಈ ಗೊಂದಲವನ್ನು ಸರಿಪಡಿಸಬೇಕು.

- ಬಿ.ರಮನಾಥ ರೈ ಮಾಜಿ  ಸಚಿವರು  

ಮುಂದುವರಿದ ಪ್ರತಿಭಟನೆ: ಸಂಜೆಯ ವರೆಗೂ ತಹಶೀಲ್ದಾರ್ ಸೀಲ್ ಡೌನ್ ತೆರವಿನ ಬಗ್ಗೆ ಸ್ಪಷ್ಟಪಡಿಸದ ಹಿನ್ನಲೆಯಲ್ಲಿ ಸಂಜೆ 5 ಗಂಟೆಯ ಬಳಿಕ ಮತ್ತೆ ಪ್ರತಿಭಟನೆ ಮುಂದುವರಿಯಿತು. ವೃದ್ದರು,ಮಹಿಳೆಯರು ಸಹಿತ ನೂರಾರು ಸಂಖ್ಯೆಯಲ್ಲಿ ಜಮಾಯಿಸಿದರು. ಸ್ಥಳಕ್ಕಾಗಮಿಸಿದ ಸಹಾಯಕ ಕಮಿಷನರ್ ಮದನ್ ಮೋಹನ್ ,ಎಸ್ ಐ ಅವಿನಾಶ್ ಅವರನ್ನು ತರಾಟೆಗೂ ತೆಗೆದುಕೊಂಡರು. ಕೆಲವರಂತು ಅಧಿಕಾರಿಗಳಿಗೆ ಸ್ಥಳದಲ್ಲಿಯೇ ಹಿಡಿಶಾಪ ಕೂಡ ಹಾಕಿದರು.  ಯಾವುದಕ್ಕು ಬಗ್ಗದ  ಎ.ಸಿ.,ಪೊಲೀಸ್ ಅಧಿಕಾರಿಗಳು ಶುಕ್ರವಾರ ಸಂಜೆ 5 ಗಂಟೆಯ ವರೆಗೆ ಕಾಲಾವಕಾಶ ನೀಡುವಂತೆ ಪ್ರತಿಭಟನಾಕಾರರಲ್ಲಿ ಕೋರಿದರು. ಬಳಿಕ ಕೆಲ ಹಿರಿಯರ ಕೋರಿಕೆಯಂತೆ ಪ್ರತಿಭಟನಾಕಾರರು ಸ್ಥಳದಿಂದ ನಿರ್ಗಮಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News