ಜನವಸತಿ ಪ್ರದೇಶದಲ್ಲಿ ಕ್ವಾರಂಟೈನ್ ಬೇಡ : ನೀರುಮಾರ್ಗ ಗ್ರಾಮಸ್ಥರ ಆಗ್ರಹ

Update: 2020-05-21 16:42 GMT

ಮಂಗಳೂರು, ಮೇ 21: ವಿದೇಶದಿಂದ ಆಗಮಿಸುವವರಿಗೆ ನೀರುಮಾರ್ಗದ ಮೊರಾರ್ಜಿ ದೇಸಾಯಿ ಹಾಸ್ಟೆಲ್‌ನಲ್ಲಿ ಕ್ವಾರಂಟೈನ್‌ನಲ್ಲಿರಿಸಲು ಜಿಲ್ಲಾಡಳಿತ ಚಿಂತನೆ ನಡೆಸಿದ್ದು, ಇದಕ್ಕೆ ನೀರುಮಾರ್ಗ ಗ್ರಾಮಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಯಾವುದೇ ಕಾರಣಕ್ಕೂ ಜನವಸತಿ ಪ್ರದೇಶದಲ್ಲಿ ಕ್ವಾರಂಟೈನ್ ಮಾಡುವುದು ಬೇಡ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಕೊರೋನ ವೈರಸ್ ಈಗಾಗಲೇ ಮಕ್ಕಳಿಂದ ಹಿಡಿದು ಎಲ್ಲರನ್ನೂ ಭಯಭೀತರನ್ನಾಗಿಸಿದೆ. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಸದಾ ಜನನಿಬಿಡ ಪ್ರದೇಶವಾದ ನೀರುಮಾರ್ಗ ಜಂಕ್ಷನ್‌ನಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಕಟ್ಟಡದಲ್ಲಿ ಕ್ವಾರಂಟೈನ್‌ಗೆ ಮೀಸಲಿಡುವುದು ಸರಿಯಲ್ಲ. ಪ್ರತಿನಿತ್ಯ ಈ ಪ್ರದೇಶದಲ್ಲಿ ಸಾವಿರಾರು ಮಂದಿ ಓಡಾಡುತ್ತಿದ್ದಾರೆ. ಈಗಾಗಲೇ ಹೊರ ಜಿಲ್ಲೆ, ಹೊರರಾಜ್ಯ, ವಿದೇಶದಿಂದ ಬಂದವರಿಂದ ಜಿಲ್ಲೆಯಲ್ಲಿ ಕೊರೋನ ಸಂಖ್ಯೆ ಹೆಚ್ಚಳವಾಗಿದ್ದು, ಜಿಲ್ಲಾಡಳಿತ ಜನವಸತಿ ಪ್ರದೇಶದಲ್ಲಿ ಕ್ವಾರಂಟೈನ್ ಮಾಡಲು ಮುಂದಾಗಿ ಪ್ರಕರಣವನ್ನು ಮತ್ತಷ್ಟು ಹೆಚ್ಚಳ ಮಾಡುತ್ತಿದೆ. ವಿದೇಶದಿಂದ ಬಂದವರಿಗೆ ಜನವಸತಿಯಿಲ್ಲದ ಹಾಸ್ಟೆಲ್‌ಗಳನ್ನು ಗುರುತಿಸಿ ಕ್ವಾರಂಟೈನ್‌ಗೆ ಮೀಸಲಿರಿಸಲಿ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಕ್ವಾರಂಟೈನ್‌ಗೆ ವಿರೋಧಿಸಿ ಸುಮಾರು 182 ಮಂದಿ ಗ್ರಾಮಸ್ಥರು ಸಹಿ ಮಾಡಿದ್ದು, ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲು ಸಿದ್ಧತೆ ನಡೆಸಿದ್ದಾರೆ. ಗ್ರಾಮಸ್ಥರ ವಿರೋಧದ ಮಧ್ಯೆಯೂ ಜಿಲ್ಲಾಡಳಿತವು ನೀರುಮಾರ್ಗದಲ್ಲಿ ಕ್ವಾರಂಟೈನ್‌ಗೆ ಮುಂದಾದರೆ ಪ್ರತಿಭಟಿಸುವುದಾಗಿ ಗ್ರಾಮಸ್ಥರು ಎಚ್ಚರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News