ಬೀಟ್ ಪೊಲೀಸ್ ವಾಟ್ಸ್‌ಆ್ಯಪ್ ಗ್ರೂಪ್‌ನಲ್ಲಿ ಮುಸ್ಲಿಮರ ಅವಹೇಳನ ಆರೋಪ : ಮುಲ್ಕಿ ಠಾಣೆಗೆ ದೂರು

Update: 2020-05-21 17:21 GMT

ಮಂಗಳೂರು, ಮೇ 21: ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ‘ಬೀಟ್ ಪೊಲೀಸ್ ನಂ.2’ ವಾಟ್ಸ್‌ಆ್ಯಪ್ ಗ್ರೂಪ್‌ನಲ್ಲಿ ವ್ಯಕ್ತಿಯೊಬ್ಬ ಮುಸ್ಲಿಮ್ ರನ್ನು ಅವಹೇಳನಗೈದ ಸಂದೇಶ ರವಾನಿಸಿದ ಆರೋಪ ಕೇಳಿ ಬಂದಿದ್ದು, ಈ ಬಗ್ಗೆ ಮುಲ್ಕಿಯ ಪಿಎಫ್‌ಐ ಸಂಘಟನೆಯ ಸದಸ್ಯ ಕಾರ್ನಾಡ್‌ನ ಮುಹಮ್ಮದ್ ಹಾರಿಸ್ ಎಂಬವರು ದೂರು ನೀಡಿದ್ದಾರೆ.

ಮಂಗಳೂರು ಪೊಲೀಸ್ ಆಯುಕ್ತ ಡಾ. ಹರ್ಷ ಪ್ರತಿಯೊಂದು ಠಾಣಾ ವ್ಯಾಪ್ತಿಯಲ್ಲಿ ಹಲವು ‘ಬೀಟ್ ಪೊಲೀಸ್’ ಗ್ರೂಪನ್ನು ರಚಿಸಿದ್ದು, ಇದರ ಆ್ಯಡ್ಮಿನ್ ಆಗಿ ಪೊಲೀಸರೇ ಕಾರ್ಯನಿರ್ವಹಿಸುತ್ತಾರೆ. ಪ್ರತಿಯೊಂದು ಕೇರಿಯ ವಿವಿಧ ಸಮಾಜದ ಪ್ರಮುಖರನ್ನು ಈ ಗ್ರೂಪ್‌ಗೆ ಸೇರಿಸಲಾ ಗುತ್ತದೆ. ಆಯಾ ಪ್ರದೇಶದ ಆಗು-ಹೋಗುಗಳನ್ನು ಈ ಗ್ರೂಪ್‌ನಲ್ಲಿ ಹಂಚಿಕೊಳ್ಳಬಹುದು.ಅಪರಾಧ ಮುಕ್ತ ಸಮಾಜ ಕಟ್ಟುವುದು ಇಂತಹ ಗ್ರೂಪ್‌ಗಳ ಸೃಷ್ಟಿಯ ಉದ್ದೇಶವಾಗಿದೆ.

ಆದರೆ ಮುಲ್ಕಿ ಠಾಣಾ ವ್ಯಾಪ್ತಿಯ ‘ಬೀಟ್ ಪೊಲೀಸ್ ನಂ.2’ನಲ್ಲಿ ಧನಂಜಯ್ ಪುತ್ತನ್ ಎಂಬಾತ ಮುಸ್ಲಿಮರನ್ನು ನಿಂದಿಸುವ ಮತ್ತು ಕೋಮು ಪ್ರಚೋದಿತ ಸಂದೇಶವನ್ನು ರವಾನಿಸಿದ್ದಾನೆ. ಈ ಬಗ್ಗೆ ಹಿರಿಯ ಅಧಿಕಾರಿಗಳ ಗಮನ ಸೆಳೆದು ಸೂಕ್ತ ಕ್ರಮ ಜರುಗಿಸಬೇಕಿದ್ದ ಗ್ರೂಪ್‌ನ ಆ್ಯಡ್ಮಿನ್ ಆಗಿರುವ ಪೊಲೀಸರು ಮೌನ ವಹಿಸಿದ್ದಾರೆ ಎಂದು ಪಿಎಫ್‌ಐ ಸದಸ್ಯ ಮುಹಮ್ಮದ್ ಹಾರಿಸ್ ಮುಲ್ಕಿ ಠಾಣೆಗೆ ದೂರು ನೀಡಿದ್ದಾರೆ.

ಖಂಡನೆ: ಪೊಲೀಸರೇ ಆ್ಯಡ್ಮಿನ್ ಆಗಿರುವ ಗ್ರೂಪ್‌ನಲ್ಲಿ ಇಂತಹ ಪ್ರಚೋದನಕಾರಿ ಸಂದೇಶ ರವಾನಿಸಿರುವ ಧನಂಜಯ ಪುತ್ರನ್‌ನ ಕೃತ್ಯವನ್ನು ಮುಲ್ಕಿ ವಲಯ ಪಿಎಫ್‌ಐ ತೀವ್ರವಾಗಿ ಖಂಡಿಸಿದೆ. ಅಲ್ಲದೆ ತಕ್ಷಣ ಕ್ರಮ ಜರುಗಿಸಬೇಕಾಗಿದ್ದ ಗ್ರೂಪ್‌ನ ಆ್ಯಡ್ಮಿನ್ ಆಗಿರುವ ಪೊಲೀಸರ ಮೌನವನ್ನು ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News