ಅಂಫಾನ್ ಚಂಡಮಾರುತ: ವೈಮಾನಿಕ ಸಮೀಕ್ಷೆ ನಡೆಸಿ 1,000 ಕೋ.ರೂ.ನೆರವು ಘೋಷಿಸಿದ ಪ್ರಧಾನಿ ಮೋದಿ

Update: 2020-05-22 18:21 GMT

ಹೊಸದಿಲ್ಲಿ, ಮೇ 22: ಅಂಫಾನ್ ಚಂಡಮಾರುತವು ಉಂಟು ಮಾಡಿರುವ ವಿನಾಶವನ್ನು ಶುಕ್ರವಾರ ವೀಕ್ಷಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ಪ.ಬಂಗಾಳಕ್ಕೆ 1,000 ಕೋ.ರೂ. ಮತ್ತು ಒಡಿಶಾಕ್ಕೆ 500 ಕೋ.ರೂ.ಗಳ ಮುಂಗಡ ಮಧ್ಯಂತರ ನೆರವನ್ನು ಪ್ರಕಟಿಸಿದ್ದಾರೆ.

ಪ.ಬಂಗಾಳದಲ್ಲಿ ಚಂಡಮಾರುತ ಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆಯನ್ನು ನಡೆಸಿದ ಮೋದಿ ಬಳಿಕ ಉತ್ತರ 24 ಪರಗಣಗಳ ಜಿಲ್ಲೆಯ ಬಸೀರಹಾಟ್‌ನಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರೊಂದಿಗೆ ಪುನರ್‌ಪರಿಶೀಲನೆ ಸಭೆಯಲ್ಲಿ ಭಾಗವಹಿಸಿದ್ದರು.

ನಂತರ ಒಡಿಶಾಗೆ ತೆರಳಿದ ಮೋದಿ ಚಂಡಮಾರುತ ಪೀಡಿತ ಭದ್ರಕ್ ಮತ್ತು ಬಾಲಾಸೋರ್‌ಗಳಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದರು.

ಉಭಯ ರಾಜ್ಯಗಳಲ್ಲಿ ಚಂಡಮಾರುತದಿಂದ ಮೃತಪಟ್ಟವರ ಕುಟುಂಬಗಳಿಗೆ ತಲಾ ಎರಡು ಲ.ರೂ ಮತ್ತು ಗಾಯಾಳುಗಳಿಗೆ ತಲಾ 50,000 ರೂ.ಗಳ ಪರಿಹಾರವನ್ನು ಮೋದಿ ಘೋಷಿಸಿದರು.

ಕೋವಿಡ್-19 ಪಿಡುಗಿನ ನಿರ್ವಹಣೆಯ ಜೊತೆಯೇ ಚಂಡಮಾರುತವನ್ನು ನಿಭಾಯಿಸಲು ರಾಜ್ಯ ಆಡಳಿತವನ್ನು ಹುರಿದುಂಬಿಸುವಲ್ಲಿ ಬ್ಯಾನರ್ಜಿಯವರ ಪ್ರಯತ್ನಗಳನ್ನು ಪ್ರಶಂಸಿಸಿದ ಅವರು,ಇಡೀ ದೇಶವೇ ಪ.ಬಂಗಾಳದ ಜೊತೆಯಲ್ಲಿದೆ ಎಂದರು.

ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಬ್ಯಾನರ್ಜಿ, ಚಂಡಮಾರುತದಿಂದಾಗಿ ರಾಜ್ಯದಲ್ಲಿ ಒಂದು ಲ.ಕೋ.ರೂ.ಗೂ ಅಧಿಕ ನಷ್ಟ ಸಂಭವಿಸಿದೆ. ಪ್ರಧಾನಿಯವರು 1,000 ಕೋ.ರೂ.ತುರ್ತು ನೆರವನ್ನು ಪ್ರಕಟಿಸಿದ್ದಾರೆ. ಪ್ಯಾಕೇಜ್ ಏನಿದೆ ಎನ್ನುವುದು ತನಗೆ ತಿಳಿದಿಲ್ಲ. ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳಿಗಾಗಿ ಕೇಂದ್ರ ಸರಕಾರವು ರಾಜ್ಯಕ್ಕೆ ಬಾಕಿಯಿಟ್ಟಿರುವ 53,000 ಕೋ.ರೂ.ಗಳ ಬಗ್ಗೆಯೂ ತಾನು ಪ್ರಧಾನಿಯವರಿಗೆ ನೆನಪಿಸಿದ್ದೇನೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News