ದಿಲ್ಲಿ: ಬಡ ಬೀದಿ ವ್ಯಾಪಾರಿಯ 30 ಸಾವಿರ ರೂ. ಮೌಲ್ಯದ ಮಾವಿನಹಣ್ಣುಗಳನ್ನು ದೋಚಿದ ಜನರು

Update: 2020-05-22 09:15 GMT

ಹೊಸದಿಲ್ಲಿ: ರಸ್ತೆ ಬದಿ ವ್ಯಾಪಾರಿಯೊಬ್ಬರಿಗೆ ಸೇರಿದ್ದ ಮಾವಿನಹಣ್ಣುಗಳನ್ನು ದಾರಿಹೋಕರು ಮುಗಿಬಿದ್ದು ದೋಚಿ ಪರಾರಿಯಾದ ಘಟನೆ ಉತ್ತರ ದಿಲ್ಲಿಯ ಜಗತ್ಪುರಿ ಪ್ರದೇಶದಿಂದ ವರದಿಯಾಗಿದೆ.

“ಹತ್ತಿರದ ಶಾಲೆ ಬಳಿ ಏನೋ ಜಗಳವಾಗುತ್ತಿದೆ. ನಿಮ್ಮ ತಳ್ಳುಗಾಡಿಯನ್ನು ಅತ್ತ ಕೊಂಡು ಹೋಗಿ'' ಎಂದು ಒಂದು ಗುಂಪು ಹಣ್ಣು ಮಾರಾಟಗಾರ ಛೋಟೆಯ ಬಳಿ ಬಂದು ಹೇಳಿತ್ತು. ಆಗ ಛೋಟೆ ಇನ್ನೊಂದೆಡೆ ನಿಲ್ಲಿಸಲು ತಳ್ಳುಗಾಡಿಯನ್ನು ಕೊಂಡು ಹೋಗಿದ್ದರು. ಈ ಸಂದರ್ಭ ಹಣ್ಣುಗಳು ತುಂಬಿದ್ದ ಕ್ರೇಟ್‍ಗಳು ಅಲ್ಲಿಯೇ ಇದ್ದವು. ಇದನ್ನು ಗಮನಿಸಿದ ಕೆಲ ದಾರಿಹೋಕರು ಹಾಗೂ ಅಲ್ಲಿದ್ದ ಹಲವಾರು ಮಂದಿ ಮುಗಿಬಿದ್ದು ಎಲ್ಲಾ ಹಣ್ಣುಗಳನ್ನು ಲೂಟಿಗೈದರು. ದಾರಿಯಲ್ಲಿ ಸಾಗುತ್ತಿದ್ದ ಕೆಲ ಬೈಕ್ ಸವಾರರೂ ವಾಹನ ನಿಲ್ಲಿಸಿ ಕೈಗೆ ಸಿಕ್ಕಿದಷ್ಟು ಮಾವಿನ ಹಣ್ಣುಗಳನ್ನು ಬಾಚಿಕೊಂಡರು. ಈ ಘಟನೆ ಸ್ಥಳದಲ್ಲಿ ಸ್ವಲ್ಪ ಹೊತ್ತು ಟ್ರಾಫಿಕ್ ಜಾಂ ಕೂಡ ಸೃಷ್ಟಿಸಿತ್ತು.

“ನನ್ನ ಬಳಿ ಸುಮಾರು ರೂ 30,000 ಮೌಲ್ಯದ 15 ಕ್ರೇಟ್ ಮಾವಿನಹಣ್ಣುಗಳಿದ್ದವು. ಎಲ್ಲವನ್ನೂ ತೆಗೆದುಕೊಂಡು ಹೋಗಿದ್ದಾರೆ'' ಎಂದು ಛೋಟೆ ನೋವಿನಿಂದ ಹೇಳುತ್ತಾರೆ. ಲಾಕ್ ಡೌನ್‍ನಿಂದಾಗಿ ಅದಾಗಲೇ ವ್ಯಾಪಾರದಲ್ಲಿ ನಷ್ಟವಿತ್ತು, ಇದೀಗ ಈ ಘಟನೆ ಇನ್ನಷ್ಟು ಸಂಕಷ್ಟ ತಂದೊಡ್ಡಿದೆ ಎಂದು ಹೇಳುವ ಅವರು ತಾನು ಪೊಲೀಸ್ ದೂರು ನೀಡಿದ್ದರೂ ಪೊಲೀಸರು ಇನ್ನೂ ಕ್ರಮ ಕೈಗೊಂಡಿಲ್ಲ ಎಂದು ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News