ಪಂಚಾಯತ್‌ಗೆ ನಾಮಕರಣ ಮಾಡಿದರೆ ನಿರಂತರ ಚಳವಳಿ : ರಮಾನಾಥ ರೈ

Update: 2020-05-22 09:17 GMT

ಮಂಗಳೂರು, ಮೇ 22: ಸಾಮಾಜಿಕ ನ್ಯಾಯ ನೀಡುವ ಪಂಚಾಯತ್‌ಗಳಿಗೆ ನಾಮಕರಣಕ್ಕೆ ಸರಕಾರ ಮುಂದಾದರೆ ನಿರಂತರ ಚಳವಳಿ ನಡೆಸುವುದಾಗಿ ಮಾಜಿ ಸಚಿವ ಬಿ.ರಮಾನಾಥ ರೈ ಎಚ್ಚರಿಕೆ ನೀಡಿದ್ದಾರೆ.

ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಪಂಚಾಯತ್ ‌ರಾಜ್ ವ್ಯವಸ್ಥೆಯಲ್ಲಿ ಪಂಚಾಯತ್ ಗಳ ಅವಧಿ ಮುಗಿದ ತಕ್ಷಣ ಚುನಾವಣೆ ಮಾಡಬೇಕೆಂಬ ಕಾನೂನೇ ಇದೆ. ಆದರೆ ಕೊರೋನ ಕಾರಣಕ್ಕಾಗಿ ಚುನಾವಣೆ ಮುಂದೂಡುವುದು ಅನಿವಾರ್ಯ ಹೌದು. ಒಂದೋ ಆಡಳಿತಾಧಿಕಾರಿ ನೇಮಕ ಮಾಡಲಿ, ಇಲ್ಲದಿದ್ದರೆ ಈಗಿರುವ ಆಡಳಿತ ವ್ಯವಸ್ಥೆಯನ್ನೇ ಮುಂದುವರಿಬೇಕು ಎಂದು ಅವರು ಹೇಳಿದರು.

ಪಂಚಾಯತ್‌ಗಳಿಗೆ ನಾಮಕರಣ ಪ್ರಜಾಪ್ರಭುತ್ವಕ್ಕೆ ಮಾರಕ. ಪಂಚಾಯತ್ ರಾಜ್ ವ್ಯವಸ್ಥೆಯಡಿ ವಿವಿಧ ಯೋಜನೆಗಳಡಿ ಕೋಟ್ಯಂತರ ರೂ. ಹಣ ಬರುತ್ತಿದೆ. ಪಂಚಾಯತ್ ರಾಜ್ ತಿದ್ದುಪಡಿ ಬಳಿಕ ಬಹಳಷ್ಟು ಅನುದಾನದ ಜತೆಗೆ ದುರ್ಬಲ ವರ್ಗಕ್ಕೆ ಮೀಸಲಾತಿ ದೊರಕಿದೆ. ಪಂಚಾಯತ್‌ಗಳದ್ದು ಪಕ್ಷಾತೀತ ಸ್ವತಂತ್ರ ಆಡಳಿತ ವ್ಯವಸ್ಥೆ. ಭಾರತದ ಇತಿಹಾಸದಲ್ಲಿಯೇ ಈ ರೀತಿ ಪಂಚಾಯತ್‌ಗಳಿಗೆ ನಾಮಕರಣ ಮಾಡುವ ಪ್ರಕ್ರಿಯೆ ನಡೆದಿಲ್ಲ. ಪ್ರಜಾಪ್ರಭುತ್ವದ ಬಗ್ಗೆ ನಂಬಿಕೆ ಇರುವವರು ಇಂತಹ ಕಾರ್ಯ ಮಾಡಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.

ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಮಹಾತ್ವಾಕಾಂಕ್ಷೆಯ ಪಂಚಾಯತ್‌ರಾಜ್ ತಿದ್ದುಪಡಿಗೆ ಬಯಸಿದ್ದರು. ಆದರೆ ವಿಪಕ್ಷದ ವಿರೋಧದಿಂದ ಮಸೂದೆ ಮಂಜೂರಾಗಿರಲಿಲ್ಲ. ಬಳಿಕ ನರಸಿಂಹ ರಾವ್ ಪ್ರಧಾನಿಯಾಗಿದ್ದಾಗ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಮಸೂದೆ ತಿದ್ದುಪಡಿ ಮಾಡಿದ್ದರಿಂದಲೇ ಜಿಲ್ಲಾ ಪಂಚಾಯತ್‌ಗಳಿಗೆ ಕೋಟ್ಯಂತರ ರೂ. ಅನುದಾನ ಬಂದು ಅಭಿವೃದ್ಧಿ ಮಾಡಲು ಸಾಧ್ಯವಾಗಿದೆ. ಹಿಂದೆಯೂ ವಿರೋಧಿಸಿದ್ದ ಬಿಜೆಪಿಯವರಿಗೆ ಈ ವ್ಯವಸ್ಥೆಯಲ್ಲಿ ನಂಬಿಕೆ ಇಲ್ಲದಿದ್ದುದರಿಂದಲೇ ಈಗ ಪಂಚಾಯತ್ ‌ರಾಜ್ ವ್ಯವಸ್ಥೆ ನಾಶಗೊಳಿಸಲು ಮುಂದಾಗಿದ್ದಾರೆ ಎಂದು ರಮಾನಾಥ ರೈ ಆರೋಪಿಸಿದರು.

ಈಗ ಪಂಚಾಯ್ತಿಗಳಿಗೆ ನಾಮಕರಣ ಮಾಡುವುದರಿಂದ ಇಡೀ ವ್ಯವಸ್ಥೆಯೇ ದುರ್ಬಲವಾಗಲಿದೆ ಎಂದು ಎಚ್ಚರಿಸಿದ ಅವರು, ರಾಜ್ಯ ಸರ್ಕಾರಕ್ಕೆ ಕೊರೋನ ಸಮಸ್ಯೆಯ ತಲೆಬಿಸಿಯಿಲ್ಲ. ವ್ಯವಸ್ಥೆಯನ್ನು ಹಾಳುಗೆಡವಿ ರಾಜಕೀಯ ಮಾಡಲು ಹೊರಟಿದ್ದಾರೆ ಎಂದು ಎಂದು ದೂರಿದರು.

ಗೋಷ್ಠಿಯಲ್ಲಿ ಇಬ್ರಾಹೀಂ ಕೋಡಿಜಾಲ್, ಅಬುಲ್ ರವೂಫ್, ಶಶಿಧರ ಹೆಗ್ಡೆ, ಭಾಸ್ಕರ ಕೆ., ಶಾಹುಲ್ ಹಮೀದ್, ನವೀನ್ ಡಿಸೋಜಾ, ಅಶೋಕ್ ಡಿ.ಕೆ., ಅಪ್ಪಿ, ಜಯಶೀಲ ಅಡ್ಯಂತಾಯ, ಶುಭೋದ್ ಆಳ್ವ, ನಝೀರ್ ಬಜಾಲ್ ಉಪಸ್ಥಿತರಿದ್ದರು.

ನಳಿನ್ ವಿರುದ್ಧ ಸಾವಿರ ಎಫ್‌ಐಆರ್ ದಾಖಲಿಸಬಹುದು

ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ವಿರುದ್ಧ ಎಫ್‌ಐಆರ್ ದಾಖಲಿಸಿದ್ದನ್ನು ಖಂಡಿಸಿದ ಮಾಜಿ ಸಚಿವ ರಮಾನಾಥ ರೈ, ಹಾಗಿದ್ದರೆ ಸಂಸದ ನಳಿನ್ ಕುಮಾರ್ ವಿರುದ್ಧ ಸಾವಿರಾರು ಎಫ್‌ಐಆರ್ ದಾಖಲಿಸಬಹುದು.  ನಳಿನ್ ತಿಳುವಳಿಕೆಯಿಲ್ಲದೆ ಮಾತನಾಡುತ್ತಾರೆ, ಅವರ ಮಟ್ಟ ಅಷ್ಟೇ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News