ವೇತನ ನೀಡಿಲ್ಲ ಎಂದು ಅಹ್ಮದಾಬಾದ್ ಐಐಎಂಗೆ ಕಾನೂನು ನೋಟಿಸ್ ಜಾರಿಗೊಳಿಸಿದ ವಲಸೆ ಕಾರ್ಮಿಕರು

Update: 2020-05-22 09:48 GMT

ಅಹ್ಮದಾಬಾದ್: ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್-ಅಹ್ಮದಾಬಾದ್‍ ನ ಹೊಸ ಕ್ಯಾಂಪಸ್‍ ನಲ್ಲಿ ನಿರ್ಮಾಣ ಕಾಮಗಾರಿಯಲ್ಲಿ ತೊಡಗಿದ್ದ ವಲಸಿಗ ಕಾರ್ಮಿಕರು ತಮಗೆ ಲಾಕ್ ಡೌನ್ ಸಂದರ್ಭ ಎರಡು ತಿಂಗಳ ವೇತನ ನೀಡಲಾಗಿಲ್ಲ ಎಂದು ಆರೋಪಿಸಿ ಸಂಸ್ಥೆಗೆ ಕಾನೂನು ನೋಟಿಸ್ ಜಾರಿಗೊಳಿಸಿದ್ದಾರೆ. ಆದರೆ ಈ ಆರೋಪ ನಿರಾಧಾರ ಎಂದು ಸಂಸ್ಥೆ ಹೇಳಿಕೊಂಡಿದೆ.

ಸುಮಾರು 100 ಕಾರ್ಮಿಕರು ಸಂಸ್ಥೆಯ ಸಮೀಪದ ರಸ್ತೆಯಲ್ಲಿ ಜಮಾಯಿಸಿ ತಮ್ಮನ್ನು ತಕ್ಷಣ ತಮ್ಮ ಊರುಗಳಿಗೆ ಕಳುಹಿಸಲು ಏರ್ಪಾಟು ಮಾಡುವಂತೆ ಕೋರಿದ್ದರು. ಈ ಸಂದರ್ಭ ಪೊಲೀಸರು ಪ್ರತಿಭಟನಾಕಾರರನ್ನು ಚದುರಿಸಲು ಅಶ್ರುವಾಯು ಪ್ರಯೋಗಿಸಿದ್ದರಲ್ಲದೆ ಕಾರ್ಮಿಕರು ತಮ್ಮತ್ತು ಕಲ್ಲು ತೂರಿದ್ದಾರೆಂದೂ ಆರೋಪಿಸಿದ್ದರು. ಘಟನೆ ನಂತರ ಹಲವು ಕಾರ್ಮಿಕರನ್ನು ವಶಕ್ಕೆ ಪಡೆದುಕೊಳ್ಳಲಾಗಿತ್ತು.

ಈ ಘಟನೆಯ ಮರುದಿನವೇ ಸಂಸ್ಥೆಯ ನಿರ್ದೇಶಕರು, ಗುಜರಾತ್ ಮುಖ್ಯ ಕಾರ್ಯದರ್ಶಿ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹಾಗೂ ಕಾರ್ಮಿಕ ಉಪ ಆಯುಕ್ತರಿಗೆ ವಲಸಿಗ ಕಾರ್ಮಿಕರು ಕಾನೂನು ನೋಟಿಸ್ ಜಾರಿಗೊಳಿಸಿದ್ದರಲ್ಲದೆ ಲಾಕ್ ಡೌನ್ ಹೊರತಾಗಿಯೂ ವೇತನ ನೀಡಬೇಕೆಂಬ ಕೇಂದ್ರದ ಸೂಚನೆಯ ಹೊರತಾಗಿಯೂ ತಮಗೆ ಎರಡು ತಿಂಗಳುಗಳಿಂದ ವೇತನ ನೀಡಿಲ್ಲ ಎಂದು ದೂರಿದ್ದರು.

ಆದರೆ ಐಐಎಂ ಆಡಳಿತ ಈ ಆರೋಪ ನಿರಾಕರಿಸದೆಯಲ್ಲದೆ ಕಾರ್ಮಿಕರಿಗೆ ಎಲ್ಲಾ ವೇತನ ನೀಡಲಾಗಿದೆ ಎಂದು ಹೇಳಿದೆ. ಕಾಮಗಾರಿಯನ್ನು ಮೇ 7ರಂದು ಕಾರ್ಮಿಕರ ಇಚ್ಛೆಯಂತೆ ನಿಲ್ಲಿಸಲಾಗಿದೆ. ಉತ್ತರ ಪ್ರದೇಶ ಮತ್ತು ಬಿಹಾರದ ಕಾರ್ಮಿಕರಿಗೆ ರೈಲಿನ ಏರ್ಪಾಟು ಮಾಡಲಾಗಿದ್ದರೆ ಅಧಿಕಾರಿಗಳು ಜಾರ್ಖಂಡ್ ಮತ್ತು ಪಶ್ಚಿಮ ಬಂಗಾಳದ ಕಾರ್ಮಿಕರಿಗೆ ರೈಲಿನ ಏರ್ಪಾಟು ಮಾಡಿರಲಿಲ್ಲ ಎಂದು ಸಂಸ್ಥೆ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News