ಬಾಂಬೆಯಿಂದ ಡಾನ್‌ಗಳಂತೆ ಕರೆ ಮಾಡಿದರೆ ಜೈಲು: ಉಡುಪಿ ಡಿಸಿ ಜಗದೀಶ್ ಎಚ್ಚರಿಕೆ

Update: 2020-05-22 12:11 GMT

ಕುಂದಾಪುರ, ಮೇ 22: ಕ್ವಾರಂಟೇನ್ ವಿಚಾರವಾಗಿ ಬಹಳಷ್ಟು ಮಂದಿ ಮುಂಬೈಯಲ್ಲಿ ಕುಳಿತು ಕೊಂಡು ಡಾನ್ ರೀತಿ ಕರೆ ಮಾಡುತ್ತಿದ್ದಾರೆ. ಇದೆಲ್ಲ ಜಿಲ್ಲಾಡಳಿತದ ಮುಂದೆ ನಡೆಯುವುದಿಲ್ಲ. ಅಂತಹ ಕಿಡಿಗೇಡಿಗಳನ್ನು ಮುಂಬೈ ಯಿಂದ ಹೇಗೆ ಕರೆದು ಕೊಂಡು ಬರಬೇಕು ಎಂಬುದು ಜಿಲ್ಲಾಡಳಿತಕ್ಕೆ ಗೊತ್ತಿದೆ. ಅಂತಹವರನ್ನು ನಾವು ಬಿಡುವುದಿಲ್ಲ. ಈ ರೀತಿ ಮಾಡಿದರೆ ನಾಳೆಯಿಂದ ಇವರು ಜೈಲಿನಲ್ಲಿ ಇರುತ್ತಾರೆ ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಕುಂದಾಪುರ ತಾಪಂ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಸಂಸದೆ ಶೋಭಾ ಕರಂದ್ಲಾಜೆ ಅಧ್ಯಕ್ಷತೆಯಲ್ಲಿ ಕರೆಯಲಾದ ಕೋವಿಡ್-19 ತಡೆಗಟ್ಟುವ ನಿಟ್ಟಿನಲ್ಲಿ ಕುಂದಾಪುರ ತಾಲೂಕಿನಲ್ಲಿ ತೆಗೆದುಕೊಂಡಿರುವ ಮುಂಜಾಗೃತಾ ಕ್ರಮ ಹಾಗೂ ಕ್ವಾರಂಟೇನ್ ಕೇಂದ್ರಗಳ ಕುರಿತ ಸಭೆಯಲ್ಲಿ ಅವರು ಮಾತನಾಡುತಿದ್ದರು.

ಕೆಲವೊಂದು ಕಿಡಿಗೇಡಿಗಳು ಸುಮ್ಮನೆ ಕರೆ ಮಾಡಿ ವಾಯ್ಸ ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುತ್ತಿದ್ದಾರೆ. ಅದು ಇಂದಿಗೆ ಕೊನೆಯಾಗಬೇಕು. ನಾಳೆಯಿಂದ ಯಾರಾದರೂ ಈ ರೀತಿ ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದರೆ ಅವರನ್ನು ಜೈಲಿಗೆ ಕಳುಹಿಸಲಾಗುವುದು ಎಂದರು.

ನಾವು ಕಳೆದ ಮೂರು ತಿಂಗಳಿನಿಂದ ಹಗಲು ರಾತ್ರಿ ಊಟ ತಿಂಡಿ ಬಿಟ್ಟು ಕೆಲಸ ಮಾಡುತ್ತಿದ್ದೇವೆ. ಅದನ್ನು ಕಿಡಿಗೇಡಿಗಳು ನೆನಪಿಟ್ಟುಕೊಳ್ಳಬೇಕು. ನಾವು ಇಷ್ಟೆಲ್ಲ ಕೆಲಸ ಅವರಿಗೋಸ್ಕರ ಮಾಡುತ್ತಿದ್ದೇವೆ ಎಂಬುದು ಅವರಿಗೆ ಅರ್ಥ ಆಗಬೇಕು. ಅದು ಬಿಟ್ಟು ಸುಮ್ಮನೆ ಡಿಸಿ, ಎಸಿ, ಎಸ್ಪಿ, ಎಂಪಿ ಎಂಎಲ್‌ಎಗಳಿಗೆ ಬೈಯುವುದಲ್ಲ. ಇದೆಲ್ಲ ಆಟ ನಡೆಯುವುದಿಲ್ಲ. ಎಷ್ಟು ದೊಡ್ಡ ಜನ ಆದರೂ ಜೈಲಿಗೆ ಅಟ್ಟಿಸುವ ಕೆಲಸ ಮಾಡಲಾಗುವುದು ಎಂದು ಅವರು ತಿಳಿಸಿದರು.

ಸಭೆಯಲ್ಲಿ ಬೈಂದೂರು ಶಾಸಕ ಸುಕುಮಾರ್ ಶೆಟ್ಟಿ, ಜಿಲ್ಲಾ ಪೊಲೀಸ್ ಅಧೀಕ್ಷಕ ವಿಷ್ಣುವರ್ಧನ್, ಕುಂದಾಪುರ ಉಪವಿಭಾಗಾಧಿಕಾರಿ ರಾಜು ಮೊದಲಾದವರು ಉಪಸ್ಥಿತರಿದ್ದರು.

'ಹೊರಗಡೆಯಿಂದ ಊಟ, ಬಟ್ಟೆಗೆ ಅವಕಾಶ ಇಲ್ಲ'
ಕ್ವಾರಂಟೇನ್‌ನಲ್ಲಿರುವವರಿಗೆ ಮನೆಯಿಂದ ಊಟ, ತಿಂಡಿ, ಬಟ್ಟೆ ತಂದು ಕೊಡಲು ಅವಕಾಶ ನೀಡದಕ್ಕೆ ಕೆಲವರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಯಾರು ಏನೇ ಹೇಳಿದರು ಇದಕ್ಕೆಲ್ಲ ಅವಕಾಶ ನೀಡಲು ಆಗುವುದಿಲ್ಲ. ಬಟ್ಟೆ, ಊಟದ ಪಾತ್ರೆ ಜೊತೆಗೆ ಕೊರೋನ ವೈರಸ್ ಕೂಡ ಮನೆಗಳಿಗೆ ತಲುಪಲಿದೆ. ಆದುದರಿಂದ ಜಿಲ್ಲಾಡಳಿತ ಹೊರಗಿನಿಂದ ಬಂದವರಿಗೆ ಚಿಕಿತ್ಸೆ ನೀಡುವುದರ ಜೊತೆಗೆ ಇಲ್ಲಿರುವ 13ಲಕ್ಷ ಮಂದಿಯ ರಕ್ಷಣೆ ಕೂಡ ಮುಖ್ಯವಾಗಿದೆ ಎಂದು ಜಿಲ್ಲಾಧಿಕಾರಿ ಜಗದೀಶ್ ತಿಳಿಸಿದರು.

ಈ ವೈರಸ್ ಇಲ್ಲಿರುವವರಿಗೆ ಹರಡದಂತೆ ಹೆಚ್ಚಿನ ಕಾಳಜಿ ವಹಿಸಲಾಗಿದೆ. ಕೆಲವರು ಅದನ್ನು ತಪ್ಪು ಎಂಬ ರೀತಿಯಲ್ಲಿ ಮಾತನಾಡುತ್ತಿದ್ದಾರೆ. ಟಿಪನ್ ಬಾಕ್ಸ್ ಮೂಲಕ ಮನೆಗಳಿಗೆ ವೈರಸ್ ತೆಗೆದುಕೊಂಡು ಹೋಗಬಾರದೆಂಬ ಉದ್ದೇಶದಿಂದ ಕ್ವಾರಂಟೇನ್ ಕೇಂದ್ರಗಳಿಗೆ ಹೊರಗಿನಿಂದ ಯಾವುದೇ ಊಟ, ಬಟ್ಟೆ ಸರಬರಾಜು ಮಾಡದಂತೆ ಕ್ರಮಕೈಗೊಳ್ಳಬೇಕೆಂದು ಅಧಿಕಾರಗಿಳಿಗೆ ಸೂಚನೆ ನೀಡಲಾಗಿದೆ ಎಂದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News