ಕಾಂಗ್ರೆಸ್‌ನಿಂದ ಬೀದಿಗಿಳಿದು ಹೋರಾಟ: ಐವನ್ ಡಿಸೋಜಾ

Update: 2020-05-22 11:49 GMT

ಮಂಗಳೂರು, ಮೇ 22: ಪಿಎಂ ಕೇರ್ ನಿಧಿಯ ಬಗ್ಗೆ ದೇಶದ ಜನರಿಗೆ ಮಾಹಿತಿ ಕೊಡಿ ಎಂದು ಕೇಳಿದ ಕಾರಣಕ್ಕೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ ಮೇಲೆ ಎಫ್ಐ ಆರ್ ದಾಖಲಿಸಿರುವುದನ್ನು ಕಾಂಗ್ರೆಸ್ ಖಂಡಿಸುತ್ತದೆ. ಈ ರೀತಿ ಎಫ್‌ಐಆರ್ ದಾಖಲಿಸಿದವರ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಬೀದಿಗಿಳಿದು ಹೋರಾಟ ನಡೆಸುವುದಾಗಿ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಹೇಳಿದ್ದಾರೆ.

ದ.ಕ. ಜಿಲ್ಲಾ ಕಾಂಗ್ರೆಸ್‌ನಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ ನಡೆದ ಎಫ್ಐ ಆರ್‌ನಲ್ಲಿ ಸರಕಾರ ನೇರವಾಗಿ ಭಾಗಿಯಾಗಿರುವುದು ಸ್ಪಷ್ಟವಾಗಿದೆ. ಮಾತನಾಡುವವರ ಮಾತನ್ನೇ ದಮನ ಮಾಡುವುದಕ್ಕೆ ಕಾಂಗ್ರೆಸ್ ಯಾವತ್ತೂ ಅವಕಾಶ ನೀಡುವುದಿಲ್ಲ. ಇದರ ವಿರುದ್ಧ ನಿರಂತರ ಹೋರಾಟಕ್ಕೆ ಸಿದ್ಧತೆ ನಡೆಸಲಾಗಿದೆ. ತ‌ಕ್ಷಣವೇ ಕೇಸ್ ಅನ್ನು ವಾಪಾಸ್ ಪಡೆಯಬೇಕು ಹಾಗೂ ಕೇಸ್ ರಿಜಿಸ್ಟರ್ ಮಾಡಿದ ಪೊಲೀಸ್ ಅಧಿಕಾರಿಯ ಮೇಲೆ ತನಿಖೆಯಾಗಬೇಕು ಎಂದವರು ಆಗ್ರಹಿಸಿದರು.

ಪಿಎಂ ಕೇರ್ ಹಣ ಸಾರ್ವಜನಿಕ ದುಡ್ಡು. ಅದರಲ್ಲಿ ಎಷ್ಟು ಹಣವಿದೆ, ಹಣ ಹೇಗೆ ವಿನಿಯೋಗ ಮಾಡಲಾಗಿದೆ ಎಂಬುದನ್ನು ಕೇಳುವುದೇ ತಪ್ಪಾ? ಯಾರಿಗೆ ಯಾಕಾಗಿ ಬಳಕೆ ಆಗಿದೆ? ಎಂಬುದರ ವಿವರ ಕೊಡಲು ಏನು ಸಮಸ್ಯೆಯಿದೆ ಎಂದು ಪ್ರಶ್ನಿಸಿದ ಅವರು, ಸಿಎಂ ಕೇರ್ ನಿಧಿ ಇರುವಾಗ ಮತ್ತೆ ಪಿಎಂ ಕೇರ್ ಅಗತ್ಯವೇನಿದೆ ಎಂದರು.

ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಪ್ರಶ್ನಿಸುವವರ ಹಕ್ಕನ್ನು ಕಸಿಯುವ ಇಂತಹ ಘಟನೆ ದ್ವೇಷದ ರಾಜಕಾರಣಕ್ಕೆ ಸಾಕ್ಷಿ ಎಂದವರು ಹೇಳಿದರು.

ರಾಜ್ಯಸರಕಾರ ಖಾಸಗಿ ಬಸ್‌ಗಳ ಸಂಚಾರಕ್ಕೆ ಅವಕಾಶ ನೀಡಿದ್ದರೂ ದ.ಕ. ಜಿಲ್ಲೆಯಲ್ಲಿ ಖಾಸಗಿ ಬಸ್ ಸಂಚಾರ ಆರಂಭವಾಗಿಲ್ಲ. ಲಾಕ್‌ಡೌನ್‌ನಿಂದ ಸಂಕಷ್ಟದಲ್ಲಿರುವ ಬಸ್ ಮಾಲಕರ ಯಾವುದೇ ಬೇಡಿಕೆಯನ್ನು ಪೂರೈಸುವಲ್ಲಿ ರಾಜ್ಯ ಸರಕಾರ ಸಂಪೂರ್ಣ ವಿಫಲವಾಗಿದೆ. 6 ತಿಂಗಳ ತೆರಿಗೆ ಕೈಬಿಡುವಂತೆ ಖಾಸಗಿ ಬಸ್ ಮಾಲಕರು ಸರಕಾರವನ್ನು ಕೇಳಿದರೂ ಕೂಡ ಸರಕಾರ ಈ ಬಗ್ಗೆ ಕ್ಯಾರೇ ಅನ್ನುತ್ತಿಲ್ಲ. ದ.ಕ. ಜಿಲ್ಲೆಯಲ್ಲಿ ಸಂಸದರು, ಉಸ್ತುವಾರಿ ಸಚಿವರು, ಬಿಜೆಪಿ ಶಾಸಕರು ಕೂಡ ಮೌನವಾಗಿದ್ದಾರೆ. ಬಸ್‌ಗಳನ್ನೇ ನಂಬಿರುವ ಸಾವಿರಾರು ಜನರು ಇದೀಗ ಸಂಕಷ್ಟದಲ್ಲಿದ್ದಾರೆ. ಅವರಿಗೆ ಪ್ಯಾಕೇಜ್ ಕೂಡ ನೀಡಿಲ್ಲ. ರಿಕ್ಷಾ ಚಾಲಕರ ಪ್ಯಾಕೇಜ್ ಘೋಷಿಸಿದ್ದರೂ ಸೇವಾ ಸಿಂಧು ಆ್ಯಪ್‌ನಲ್ಲಿ ಅದರ ಫೈಲ್ ಹೇಗೆ ಮಾಡುವುದು ಎಂಬ ಬಗ್ಗೆಯೇ ಸರಕಾರ ಸ್ಪಷ್ಟತೆ ನೀಡಿಲ್ಲ. ಬೀಡಿ ಕಾರ್ಮಿಕರನ್ನು ಸರಕಾರ ಕೈಬಿಟ್ಟಿದೆ ಎಂದು ಐವನ್ ಡಿಸೋಜಾ ದೂರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News