ಕೊಲ್ಲೂರಿನ ಜನತೆಗೆ ಕ್ವಾರಂಟೈನ್ ಆತಂಕ

Update: 2020-05-22 13:02 GMT

ಕುಂದಾಪುರ, ಮೇ 22: ಹೊರರಾಜ್ಯಗಳಲ್ಲಿದ್ದ ಕನ್ನಡಿಗರು ಲಾಕ್‌ಡೌನ್ ವಿನಾಯಿತಿ ದೊರೆತ ಮೊದಲ ಅವಕಾಶದಲ್ಲಿ ತಾಯ್ನಾಡಿಗೆ ಬರಲು ಆರಂಭಿಸಿದ ಬಳಿಕ ಕರಾವಳಿಗೆ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದು ಜಿಲ್ಲೆಯ ಬೈಂದೂರು ತಾಲೂಕಿಗೆ. ಮೇ 4ರ ಬಳಿಕ 20ರವರೆಗೆ ಉಡುಪಿ ಜಿಲ್ಲೆಗೆ 15 ರಾಜ್ಯಗಳಿಂದ ಒಟ್ಟು 7355 ಮಂದಿ ಬಂದಿದ್ದು, ಇವರಲ್ಲಿ ಅತೀ ಹೆಚ್ಚು ಅಂದರೆ 2449 ಮಂದಿ ಬೈಂದೂರು ತಾಲೂಕೊಂದಕ್ಕೆ ಬಂದಿದ್ದಾರೆ.

ಅದರಲ್ಲೂ ಮುಂಬೈ ಸೇರಿದಂತೆ ಮಹಾರಾಷ್ಟ್ರ ರಾಜ್ಯವೊಂದರಿಂದಲೇ ಬೈಂದೂರಿಗೆ 2243 ಮಂದಿ ಆಗಮಿಸಿದ್ದು, ಹೀಗೆ ಬಂದವರನ್ನೆಲ್ಲಾ ಜಿಲ್ಲಾಡಳಿತ ತಾಲೂಕಿನಾದ್ಯಂತ ಕ್ವಾರಂಟೈನ್‌ನಲ್ಲಿರಿಸಿ ಅವರಿಗೆ ಇದ್ದಿರಬಹುದಾದ ಸೋಂಕು ಇತರರಿಗೆ ಹರಡದಂತೆ ಮುನ್ನೆಚ್ಚರಿಕೆ ವಹಿಸಿದೆ.

ಬೈಂದೂರಿನಲ್ಲಿ ಲಭ್ಯವಿರುವ ಶಾಲಾ-ಕಾಲೇಜು, ವಸತಿ ಗೃಹ, ಸರಕಾರಿ ಕಟ್ಟಡಗಳಲ್ಲಿ ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಇವರನ್ನು ಕ್ವಾರಂಟೈನ್ ನಲ್ಲಿರಿಸಲಾಗಿದೆ. ಇದರಲ್ಲಿ ಅತೀ ಹೆಚ್ಚು ಮಂದಿಯನ್ನು ಇರಿಸಿದ್ದು ಕೊಲ್ಲೂರಿನಲ್ಲಿ.

ಕೊಲ್ಲೂರಿನಲ್ಲಿ ಶಾಲಾ- ಕಾಲೇಜುಗಳ ಕಟ್ಟಡ, ಹಾಸ್ಟೆಲ್‌ಗಳು, ವಸತಿ ಗೃಹಗಳು ಅಧಿಕ ಸಂಖ್ಯೆಯಲ್ಲಿರುವುದರಿಂದ ಸುಮಾರು 970ಕ್ಕೂ ಅಧಿಕ ಮಂದಿಯನ್ನು ಕ್ವಾರಂಟೈನ್‌ನಲ್ಲಿರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಇದೀಗ ಕೊರೋನಾ ಮಹಾಮಾರಿಯ ಅಟ್ಟಹಾಸ ಜಿಲ್ಲೆಯಲ್ಲಿ ಜೋರಾಗಿಯೇ ಸದ್ದು ಮಾಡುತಿದ್ದು, ಸಹಜವಾಗಿ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ ರಸ್ತೆಯ ಜನ ಅತೀ ಹೆಚ್ಚು ಆತಂಕಕ್ಕೊಳಗಾಗುವಂತಾಗಿದೆ. ಇದಕ್ಕೆ ಪ್ರಮುಖ ಕಾರಣ ಮೂಕಾಂಬಿಕಾ ದೇವಸ್ಥಾನದ ಸುತ್ತಮುತ್ತ ಕ್ವಾರಂಟೈನ್ ಕೇಂದ್ರಗಳು ಅತೀ ಹೆಚ್ಚು ಇರುವುದು. ಇಲ್ಲಿ ವಸತಿ ಗೃಹ ಹಾಗೂ ಹಾಸ್ಟೆಲ್‌ಗಳು ಮಹಾರಾಷ್ಟ್ರದಿಂದ ಬಂದವರ ಕ್ವಾರಂಟೈನ್ ಕೇಂದ್ರಗಳಾಗಿವೆ.

ಜಿಲ್ಲೆಯಲ್ಲಿ ಸದ್ಯ ಅತೀ ಹೆಚ್ಚು ಪಾಸಿಟಿವ್ ಕೇಸು ಬಂದಿರುವುದು ಬೈಂದೂರು ಕ್ಷೇತ್ರದಿಂದ. ಅದರಲ್ಲೂ ಕೊಲ್ಲೂರಿನಲ್ಲಿ ಕ್ವಾರಂಟೈನ್‌ನಲ್ಲಿದ್ದವರಲ್ಲೇ ಅತೀ ಹೆಚ್ಚು ಪಾಸಿಟಿವ್ ಕೇಸುಗಳು ಬಂದಿವೆ. ಸಹಜವಾಗಿ ಇದು ಕೊಲ್ಲೂರಿನ ಜನರಲ್ಲಿ ಆತಂಕವನ್ನು ಮೂಡಿಸಿದೆ. ಹೀಗಾಗಿ ಜಿಲ್ಲಾಡಳಿತ ಈಗ ಕೊಲ್ಲೂರು ಆಸುಪಾಸಿನಲ್ಲಿ ಸೋಂಕು ಹರಡದಂತೆ ಬೇಕಾದ ಮುಂಜಾಗ್ರತಾಕ್ರಮಗಳನ್ನು ಕೈಗೊಳ್ಳುತ್ತಿದೆ.

ಈ ಹಿನ್ನೆಲೆಯಲ್ಲಿ ಕೊಲ್ಲೂರು ಮೂಕಾಂಬಿಕಾ ದೇಗುಲ ರಸ್ತೆಗೆ ರಾಸಾಯನಿಕಗಳ ಸಿಂಪಡಣೆ ಮಾಡಲಾಯಿತು. ಕೊಲ್ಲೂರು ದೇಗುಲದ ಹೊರ ಆವರಣ ಗೋಡೆಗೂ ಸ್ಯಾನಿಟೈಸೇಶನ್ ಮಾಡಿರುವ ಸ್ಥಳೀಯಾಡಳಿತ, ಸ್ವಚ್ಛತೆಗೆ ವಿಶೇಷ ಗಮನ ನೀಡಿದೆ. ಇಲ್ಲಿನ ವಿವಿಧ ಕ್ವಾರಂಟೈನ್ ಕೇಂದ್ರದ ಗೋಡೆ, ಕಿಟಕಿ, ಸುತ್ತಲ ರಸ್ತೆಗೂ ದ್ರಾವಣ ಸಿಂಪಡಣೆ ಮಾಡಲಾಯಿತು.

ಕೊಲ್ಲೂರು ದೇಗುಲದ ಸುತ್ತಮುತ್ತ ಅಂದಾಜು 962 ಜನರಿಗೆ ಕ್ವಾರಂಟೈನ್ ಮಾಡಲಾಗಿದೆ. ಇದರಿಂದ ಈ ಭಾಗದಲ್ಲಿ ಈಗ ಜನ ಓಡಾಡುವುದಕ್ಕೂ ಹಿಂದೆಮುಂದೆ ನೋಡುವಂತಾಗಿದೆ. ಜಿಲ್ಲೆಯಲ್ಲಿ ಈವರೆಗೆ 48 ಮಂದಿಯಲ್ಲಿ ಕೆವಿಡ್-19 ಸೋಂಕು ದೃಢಗೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News