ವಲಸೆ ಕಾರ್ಮಿಕರಿಗೆ ಉಚಿತ ಆಹಾರಧಾನ್ಯ ವಿತರಣೆ: ಉಡುಪಿ ಜಿಲ್ಲಾಧಿಕಾರಿ

Update: 2020-05-22 13:09 GMT

ಉಡುಪಿ, ಮೇ 22: ಜಿಲ್ಲೆಯಲ್ಲಿ ಹೋಟೆಲ್, ಕಾರ್ಖಾನೆ, ಕಟ್ಟಡ ಕಾರ್ಮಿಕರು ಹಾಗೂ ಇನ್ನಿತರ ಯಾವುದೇ ಸಂಸ್ಥೆ ಕಚೇರಿಗಳಲ್ಲಿ ಕೆಲಸ ಮಾಡುತ್ತಿ ರುವ ವಲಸೆ ಕಾರ್ಮಿಕರಿಗೆ ಕೇಂದ್ರ ಸರಕಾರದ ಆತ್ಮ ಭಾರತ್ ನಿರ್ಭರ್ ಯೋಜನೆ ಅಡಿಯಲ್ಲಿ ಮೇ ಮತ್ತು ಜೂನ್ ತಿಂಗಳಲ್ಲಿ ಉಚಿತ ಆಹಾರಧಾನ್ಯವನ್ನು ಹತ್ತಿರದ ನ್ಯಾಯಬೆಲೆ ಅಂಗಡಿಯಲ್ಲಿ ವಿತರಿಸಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.

ಕೇಂದ್ರ ಸರಕಾರದ ಆದೇಶದಂತೆ, ಈ ಯೋಜನೆಯಡಿ ಬರುವ ವಲಸೆ ಕಾರ್ಮಿಕರು ರಾಜ್ಯದಲ್ಲಿ ಮತ್ತು ಬೇರಾವುದೇ ರಾಜ್ಯದಲ್ಲಿ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಪಡಿತರ ಚೀಟಿ ಹೊಂದಿರಬಾರದು. ಆಹಾರಧಾನ್ಯ ವಿತರಿಸುವಾಗ ಇದನ್ನು ಇಲಾಖಾ ತಂತ್ರಾಂಶ ಪರಿಶೀಲಿಸಿ ಖಾತ್ರಿ ಪಡಿಸಿಕೊಂಡು ಸಂಬಂಧಿಸಿದ ಫಲಾನುಭವಿಯ ಆಧಾರ್ ಸಂಖ್ಯೆಯ ಮುಖಾಂತರ ಅವರ ಮೊಬೈಲ್ ಸಂಖ್ಯೆ ನಮೂದಿಸಿ, ಓಟಿಪಿ ಬಂದ ನಂತರ ಆ ಓಟಿಪಿಯನ್ನು ದಾಖಲಿಸಿ ಉಚಿತವಾಗಿ ಪಡಿತರ ವಿತರಿಸಲಾಗುವುದು ಎಂದರು.

ಸಂಬಂಧಿಸಿದ ಫಲಾನುಭವಿ ಆಹಾರಧಾನ್ಯ ಪಡೆಯಲು ನ್ಯಾಯಬೆಲೆ ಅಂಗಡಿಗೆ ಬರುವಾಗ ಕಡ್ಡಾಯವಾಗಿ ತನ್ನ ಆಧಾರ್ ಕಾರ್ಡನ್ನು ತರಬೇಕು. ಮೇ-2020ರ ತಿಂಗಳ ಹಂಚಿಕೆಯನ್ವಯ, ಪ್ರತಿ ಫಲಾನುಭವಿಗೆ 5 ಕೆಜಿ ಅಕ್ಕಿಯನ್ನು ಮೇ 26ರಿಂದ 31ರವರೆಗೆ ಹಾಗೂ ಜೂನ್ ತಿಂಗಳಲ್ಲಿ ಜೂನ್ 1ರಿಂದ 10ರವರೆಗೆ ವಿತರಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಒಂದು ವೇಳೆ ಮೇ ತಿಂಗಳಿನಲ್ಲಿ ಆಹಾರ ಧಾನ್ಯವನ್ನು ಪಡೆಯದ ವಲಸೆ ಕಾರ್ಮಿಕ ಫಲಾನುಭವಿ ಜೂನ್ ತಿಂಗಳಲ್ಲಿ ಒಟ್ಟಿಗೆ 10 ಕೆಜಿ ಅಕ್ಕಿ ಮತ್ತು ಕಡಲೆ ಕಾಳನ್ನು ಉಚಿತವಾಗಿ ಪಡೆಯಲು ಅರ್ಹರಿರುತ್ತಾರೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News