ಒಂಟಿ ಮನೆಗಳಲ್ಲಿ ಕ್ವಾರಂಟೈನ್; ಪರಿಶೀಲಿಸಿ ಸರಕಾರಕ್ಕೆ ಮನವಿ: ಶೋಭಾ ಕರಂದ್ಲಾಜೆ

Update: 2020-05-22 15:08 GMT

ಕುಂದಾಪುರ, ಮೇ 22: ಕ್ವಾರಂಟೈನ್ ಕೇಂದ್ರಗಳಲ್ಲಿ ಕೊರೋನ ಹರಡುವುದನ್ನು ತಪ್ಪಿಸಲು ಗ್ರಾಮೀಣ ಭಾಗದಲ್ಲಿರುವ ಒಂಟಿ ಮನೆಗಳಲ್ಲಿ ಸರಕಾರದ ನಿಯಮಾವಳಿಯಂತೆ ಕ್ವಾರಂಟೈನ್ ಮಾಡಲು ಅವಕಾಶ ನೀಡುವ ಬಗ್ಗೆ ಪರಿಶೀಲನೆ ನಡೆಸಲಾಗುವುದು. ಈ ಬಗ್ಗೆ ಅಗತ್ಯ ಕ್ರಮಕೈಗೊಳ್ಳುವಂತೆ ಮುಖ್ಯಮಂತ್ರಿ ಹಾಗೂ ಮುಖ್ಯ ಕಾರ್ಯದರ್ಶಿಗೆ ಮನವಿ ಮಾಡಲಾಗುವುದು ಎಂದು ಉಡುಪಿ ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

ಕೊರೊನ ನಿಯಂತ್ರಣಕ್ಕೆ ಸಂಬಂಧಿಸಿ ಕುಂದಾಪುರ ತಾಪಂ ಸಭಾಂಗಣದಲ್ಲಿ ಶುಕ್ರವಾರ ನಡೆದ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು. ಮಾನವೀಯ ನೆಲೆಯಲ್ಲಿ ಸರಕಾರಕ್ಕೆ ಮನವಿ ಮಾಡಿ ಹೊರ ರಾಜ್ಯಗಳಲ್ಲಿರುವ ನಮ್ಮವರನ್ನು ಜಿಲ್ಲೆಗೆ ಕರೆಸಿಕೊಳ್ಳಲಾಗಿದೆ. ಕುಂದಾಪುರ ಹಾಗೂ ಬೈಂದೂರು ತಾಲೂಕಿನಲ್ಲಿಯೇ ಕ್ವಾರಂಟೈನ್ ಕೇಂದ್ರಗಳಲ್ಲಿ ಈಗಾಗಲೇ 4,013 ಮಂದಿ ಇದ್ದಾರೆ. ಈ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ. ಗಲ್ಫ್ ಹಾಗೂ ಐರೋಪ್ಯ ರಾಷ್ಟ್ರಗಳಿಂದ ಬರುವವರನ್ನು ಆಯಾ ವಿಮಾನ ನಿಲ್ದಾಣ ಕೇಂದ್ರಗಳ ಸಮೀಪದಲ್ಲಿಯೇ ಕ್ವಾರಂಟೈನ್‌ಗೆ ವ್ಯವಸ್ಥೆ ಮಾಡಲಾಗುತ್ತಿದೆ ಎಂದರು.

ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಮಾತನಾಡಿ, ಪ್ರಸ್ತುತ ವೆನ್ಲಾಕ್, ಯೆನೆಪೋಯ ವೈದ್ಯಕೀಯ ಕಾಲೇಜು ಹಾಗೂ ಮಣಿಪಾಲದ ಕೆಎಂಸಿಯಲ್ಲಿ ಗಂಟಲು ದ್ರವ ಪರೀಕ್ಷೆ ನಡೆಯುತ್ತಿದೆ. ಪ್ರತಿ ದಿನ ಗರಿಷ್ಠ 400 ಮಂದಿಯ ಪರೀಕ್ಷಾ ವರದಿ ಪಡೆಯಲು ಪ್ರಯತ್ನ ಮಾಡಲಾಗುತ್ತಿದೆ. ಜಿಲ್ಲೆಯ ಬೇಡಿಕೆಗೆ ಪೂರಕವಾಗಿ ಎರಡು ಕೋಟಿ ರೂ. ವೆಚ್ಚದಲ್ಲಿ ಜಿಲ್ಲಾಸ್ಪತ್ರೆಯಲ್ಲಿಯೇ ಪ್ರಯೋ ಗಾಲಯಕ್ಕೆ ಆರಂಭಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದರು.

ಸಭೆಯಲ್ಲಿ ಬೈಂದೂರು ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್, ಉಪ ವಿಭಾಗಾಧಿಕಾರಿ ಕೆ.ರಾಜು, ಎಎಸ್‌ಪಿ ಹರಿರಾಂ ಶಂಕರ್, ತಾಲೂಕು ಆರೋಗ್ಯಾಧಿಕಾರಿ ಡಾ.ನಾಗಭೂಷಣ ಉಡುಪ, ತಹಶೀಲ್ದಾರ್‌ಗಳಾದ ತಿಪ್ಪೇಸ್ವಾಮಿ, ಕಿರಣ್ ಗೋರಯ್ಯ, ತಾಪಂ ಉಪಾಧ್ಯಕ್ಷ ರಾಮ್‌ಕಿಶನ್ ಹೆಗ್ಡೆ ಉಪಸ್ಥಿತರಿದ್ದರು.

'ಹೊರರಾಜ್ಯದ ಶೇ.10 ಮಂದಿಯಲ್ಲಿ ಸೋಂಕು ಸಾಧ್ಯತೆ'
ಉಡುಪಿ ಜಿಲ್ಲೆಗೆ ಹೊರರಾಜ್ಯದಿಂದ ಬಂದಿರುವ 7,872 ಜನರ ಪೈಕಿ ಮಹಾರಾಷ್ಟ್ರದಿಂದ 6,800, ತೆಲಂಗಾಣದಿಂದ 450 ಮಂದಿ ಬಂದಿದ್ದಾರೆ. ಹೊರ ರಾಜ್ಯದಿಂದ ಬರುವವರಲ್ಲಿ ಶೇ.10 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಳ್ಳಬಹುದು ಎಂದು ಅಂದಾಜಿಸಲಾಗಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.

ಇದಕ್ಕಾಗಿ ಉಡುಪಿ, ಕುಂದಾಪುರ, ಉದ್ಯಾವರ ಹಾಗೂ ಕಾರ್ಕಳದಲ್ಲಿ 400 ಹಾಸಿಗೆಗಳಿಗೆ ಅವಕಾಶವಿರುವ ಆಸ್ಪತ್ರೆಗಳನ್ನು ಗುರುತಿಸಲಾಗಿದೆ. ಕೊರೊನ ಆಸ್ಪತ್ರೆಗಳಿಗಾಗಿ ಪ್ರತ್ಯೇಕ ವೈದ್ಯರು ಹಾಗೂ ಸಿಬಂದಿ ನಿಯೋಜನೆ ಮಾಡಲಾಗುತ್ತಿದೆ. ಖಾಸಗಿ ವೈದ್ಯರ ನೆರವನ್ನು ಪಡೆದುಕೊಳ್ಳಲಾಗುತ್ತಿದೆ. ಕೆಲ ಗಂಭೀರ ಪ್ರಕರಣಗಳ ಚಿಕಿತ್ಸೆ ಕುರಿತು 12 ತಜ್ಞ ವೈದ್ಯರ ಸಮಿತಿಯಿಂದ ಸಲಹೆ ಪಡೆದುಕೊಳ್ಳಲಾಗುತ್ತಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News