ಡಬ್ಲ್ಯುಎಚ್‌ಒ ಕಾರ್ಯಕಾರಿ ಮಂಡಳಿಯ ಅಧ್ಯಕ್ಷರಾಗಿ ಕೇಂದ್ರ ಸಚಿವ ಹರ್ಷವರ್ಧನ್ ಅಧಿಕಾರ ಸ್ವೀಕಾರ

Update: 2020-05-22 16:04 GMT

ಹೊಸದಿಲ್ಲಿ, ಮೇ 22: ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಅವರು ಶುಕ್ರವಾರ 34 ಸದಸ್ಯರ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ)ಯ ಕಾರ್ಯಕಾರಿ ಮಂಡಳಿಯ ಅಧ್ಯಕ್ಷರಾಗಿ ಅಧಿಕಾರವನ್ನು ಸ್ವೀಕರಿಸಿದರು. ಹರ್ಷವರ್ಧನ ಜಪಾನಿನ ಡಾ.ಹಿರೋಕಿ ನಕಾಟನಿ ಅವರ ಉತ್ತರಾಧಿಕಾರಿಯಾಗಿದ್ದಾರೆ.

ಮಂಗಳವಾರ 194 ದೇಶಗಳ ವಿಶ್ವ ಆರೋಗ್ಯ ಅಧಿವೇಶನವು ಕಾರ್ಯಕಾರಿ ಮಂಡಳಿಗೆ ಭಾರತದ ಪ್ರತಿನಿಧಿಯ ನೇಮಕದ ಪ್ರಸ್ತಾವಕ್ಕೆ ಸಹಿ ಹಾಕಿತ್ತು. ಕಳೆದ ವರ್ಷ ಡಬ್ಲ್ಯುಎಚ್‌ಒದ ಆಗ್ನೇಯ ಏಷ್ಯಾ ಗುಂಪು ಕಾರ್ಯಕಾರಿ ಮಂಡಳಿಗೆ ಮೂರು ವರ್ಷಗಳ ಅವಧಿಗೆ ಭಾರತದ ಪ್ರತಿನಿಧಿಯನ್ನು ಆಯ್ಕೆ ಮಾಡಲು ಸರ್ವಾನುಮತದಿಂದ ನಿರ್ಧರಿಸಿತ್ತು.

ಆಧ್ಯಕ್ಷ ಹುದ್ದೆಯು ಪ್ರತಿ ವರ್ಷ ಪ್ರಾದೇಶಿಕ ಗುಂಪುಗಳ ನಡುವೆ ಆವರ್ತನಗೊಳ್ಳುತ್ತದೆ. ಭಾರತದ ಪ್ರತಿನಿಧಿ ಮೊದಲ ವರ್ಷ ಕಾರ್ಯಕಾರಿ ಮಂಡಳಿ ಅಧ್ಯಕ್ಷರಾಗಿರುತ್ತಾರೆ ಎನ್ನುವುದನ್ನು ಕಳೆದ ವರ್ಷ ನಿರ್ಧರಿಸಲಾಗಿತ್ತು.

ಈ ಹುದ್ದೆಯು ಪೂರ್ಣಕಾಲಿಕ ಕಾರ್ಯಭಾರವಲ್ಲ ಮತ್ತು ಹರ್ಷವರ್ಧನ ಅವರು ಕಾರ್ಯಕಾರಿ ಮಂಡಳಿಯ ಸಭೆಗಳಲ್ಲಿ ಭಾಗವಹಿಸಬೇಕಾಗುತ್ತದೆಯಷ್ಟೇ ಎಂದು ಅಧಿಕಾರಿಯೋರ್ವರು ತಿಳಿಸಿದರು. ಮಂಡಳಿಯು ವರ್ಷಕ್ಕೆ ಕನಿಷ್ಠ ಎರಡು ಸಲ ಸಭೆ ಸೇರುತ್ತದೆ.

ವಿಶ್ವ ಆರೋಗ್ಯ ಅಧಿವೇಶನದ ನಿರ್ಧಾರಗಳು ಮತ್ತು ನೀತಿಗಳ ಅನುಷ್ಠಾನ,ಅದಕ್ಕೆ ಸಲಹೆ ಮತ್ತು ಸಹಕಾರ ನೀಡುವುದು ಕಾರ್ಯಕಾರಿ ಮಂಡಳಿಯ ಮುಖ್ಯ ಕೆಲಸಗಳಾಗಿವೆ.

ಚೀನಾದ ವುಹಾನ್ ನಗರದಲ್ಲಿ ಕೊರೋನ ವೈರಸ್ ಹೇಗೆ ಆರಂಭಗೊಂಡಿತು ಮತ್ತು ನಂತರದ ಚೀನಾ ಸರಕಾರದ ಕ್ರಮಗಳ ಬಗ್ಗೆ ತನಿಖೆ ನಡೆಯಬೇಕೆಂದು ಅಮೆರಿಕ ಸೇರಿದಂತೆ ಹಲವು ದೇಶಗಳು ಆಗ್ರಹದ ನಡುವೆಯೇ ಭಾರತವು ಕಾರ್ಯಕಾರಿ ಮಂಡಳಿಯ ಅಧ್ಯಕ್ಷತೆಯನ್ನು ವಹಿಸಿಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News