ವಲಸೆ ಕಾರ್ಮಿಕರಿಗೆ ನ್ಯಾಯಬೆಲೆ ಅಂಗಡಿಗಳಲ್ಲಿ ಅಕ್ಕಿ, ಕಡಲೆಕಾಳು ವಿತರಣೆ

Update: 2020-05-22 17:11 GMT

ಮಂಗಳೂರು, ಮೇ 22: ಕೇಂದ್ರ ಸರಕಾರದ ಆತ್ಮ ನಿರ್ಭರ್ ಭಾರತ್ ಯೋಜನೆಯಡಿ ಕಾರ್ಮಿಕ ಇಲಾಖೆಯ ಅಂಕಿ ಅಂಶಗಳಿಗೆ ಅನುಗುಣವಾಗಿ ಹಾಗೂ ತಾಲೂಕಿನಲ್ಲಿರುವ ವಲಸೆ ಕಾರ್ಮಿಕರ ಸಂಖ್ಯೆಗೆ ಅನುಗುಣವಾಗಿ ಮೇ ಮತ್ತು ಜೂನ್ ತಿಂಗಳಿಗೆ ವಲಸೆ ಕಾರ್ಮಿಕರ ಕುಟುಂಬದ ಪ್ರತಿ ಸದಸ್ಯರಿಗೆ ಪ್ರತಿ ತಿಂಗಳು ತಲಾ 5 ಕೆಜಿಯಂತೆ ಅಕ್ಕಿ ಹಂಚಿಕೆಯಾಗಿರುತ್ತದೆ.

ರಾಜ್ಯದಲ್ಲಿ ಅಥವಾ ಬೇರಾವುದೇ ರಾಜ್ಯಗಳಲ್ಲಿ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಪಡಿತರ ಚೀಟಿಯನ್ನು ಹೊಂದದೆ ಇರುವ ವಲಸೆ ಕಾರ್ಮಿಕರು ಮಾತ್ರ ಈ ಯೋಜನೆಯಡಿ ಪಡಿತರವನ್ನು ಪಡೆಯಲು ಅರ್ಹರಾಗಿರುತ್ತಾರೆ. ಹೊರ ತಾಲ್ಲೂಕಿನ/ಜಿಲ್ಲೆಯ/ರಾಜ್ಯದ ವಲಸೆ ಕಾರ್ಮಿಕರು ತಮ್ಮ ಆಧಾರ್ ಕಾರ್ಡನ್ನು ಹಾಜರುಪಡಿಸಿ ನ್ಯಾಯಬೆಲೆ ಅಂಗಡಿಯ ಮೂಲಕ ಪ್ರತಿಯೊಬ್ಬರೂ 5 ಕೆಜಿ ಅಕ್ಕಿಯನ್ನು ಉಚಿತವಾಗಿ ಪಡೆದುಕೊಳ್ಳಬಹುದು.

ನ್ಯಾಯಬೆಲೆ ಅಂಗಡಿಗಳಲ್ಲಿ ಆಧಾರ ಸಂಖ್ಯೆಯನ್ನು ಆನ್‌ಲೈನ್ ತಂತ್ರಾಂಶದಲ್ಲಿ ಪರಿಶೀಲಿಸಿ ಅವರ ಮೊಬೈಲ್ ಸಂಖ್ಯೆಗೆ ಒಟಿಪಿ ಬಂದ ನಂತರ ಅದನ್ನು ದಾಖಲಿಸಿ ಪಡಿತರವನ್ನು ವಿತರಿಸಲಾಗುವುದು. 2020ರ ಮೇಯಲ್ಲಿ ಪ್ರತಿ ಫಲಾನುಭವಿಗೆ 5 ಕೆ.ಜಿ ಅಕ್ಕಿಯನ್ನು ಮೇ 26 ರಿಂದ 31ರವರೆಗೆ ಮತ್ತು ಜೂನ್ ತಿಂಗಳ ಪಡಿತರವನ್ನು ಜೂ.1ರಿಂದ 10ರವರೆಗೆ 5 ಕೆಜಿ ಅಕ್ಕಿಯನ್ನು ಹಾಗೂ ಕೇಂದ್ರ ಸರಕಾರವು ಹಂಚಿಕೆ ಮಾಡುವ ಕಡಲೆ ಕಾಳನ್ನು ವಿತರಿಸಲಾಗುವುದು. ಮೇ ತಿಂಗಳಿನಲ್ಲಿ ಆಹಾರಧಾನ್ಯವನ್ನು ಪಡೆಯದ ವಲಸೆ ಫಲಾನುಭವಿಗಳು ಜೂನ್‌ನಲ್ಲಿ ಒಟ್ಟಿಗೆ 10 ಕೆಜಿ ಅಕ್ಕಿ ಮತ್ತು ಕೇಂದ್ರ ಸರಕಾರದ ಹಂಚಿಕೆಯಂತೆ ಕಡಲೆ ಕಾಳನ್ನು ಪಡೆಯಲು ಅರ್ಹರಿರುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News