ರವಿವಾರ ಕರ್ಫ್ಯೂ ಇದೆ ಎನ್ನುವ ಸರಕಾರ ‘ಮದುವೆಗೆ, ಮಾರುಕಟ್ಟೆಗೆ ಹೋಗಿ’ ಎಂದು ಗೊಂದಲ ಸೃಷ್ಟಿಸುವುದೇಕೆ?

Update: 2020-05-22 17:42 GMT

ಕರ್ಫ್ಯೂ ಇದ್ದರೆ ಅಗತ್ಯ ವಸ್ತುಗಳ ಖರೀದಿಗೆ ಮಾರುಕಟ್ಟೆಗೆ ಹೋಗುವುದು ಹೇಗೆ?

ಮಂಗಳೂರು: ರವಿವಾರದ ಕರ್ಫ್ಯೂ ಆದೇಶ ಒಂದೆಡೆಯಾದರೆ, ಇನ್ನೊಂದೆಡೆ ಸರಕಾರ ಅಗತ್ಯ ವಸ್ತು ಖರೀದಿ, ಮದುವೆಗೆ ಹೋಗಬಹುದೆಂಬ ಹೇಳಿಕೆ ನೀಡುತ್ತಿದೆ. ಸರಕಾರ ಇಂತಹ ಭಿನ್ನ ಹೇಳಿಕೆ ನೀಡಿ ಜನರನ್ನು ಗೊಂದಲಕ್ಕೀಡು ಮಾಡುವುದು ಯಾಕೆ ಎಂದು ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ವಿಜಯ ಭಾಸ್ಕರ್ ರನ್ನು ಶಾಸಕ ಯು.ಟಿ.ಖಾದರ್ ಪ್ರಶ್ನಿಸಿದ್ದಾರೆ.

ಶನಿವಾರ ಸಂಜೆ 7ರಿಂದ ಸೋಮವಾರ ಬೆಳಗ್ಗೆ 7ರ ತನಕ ಕರ್ಫ್ಯೂ ವಿಧಿಸಲಾಗಿದೆ. ಯಾರೂ ರಸ್ತೆಗೆ ಇಳಿಯಬಾರದು ಎಂದು ಸರಕಾರ ಹೇಳಿಕೆ ನೀಡಿದೆ. ಅದರ ಬೆನ್ನಲ್ಲೇ ಮತ್ತೊಂದೆಡೆ ಅಗತ್ಯ ವಸ್ತುಗಳಾದ ದಿನಸಿ, ತರಕಾರಿ, ಹಾಲು, ಔಷಧಿ ಪಡೆಯಬಹುದು, ಮದುವೆಗೆ ಹೋಗಬಹುದು ಎಂದೂ ಹೇಳುತ್ತಿದೆ. ಈ ಮೂಲಕ ಸರಕಾರ ಗೊಂದಲ ಸೃಷ್ಟಿಸುತ್ತಿದೆ. ಕರ್ಫ್ಯೂ ಇದ್ದರೆ ಮಾರುಕಟ್ಟೆಗೆ ಜನರು ಹೇಗೆ ಬರುತ್ತಾರೆ?, ಈ ಬಗ್ಗೆ ಸ್ಪಷ್ಟತೆ ನೀಡಬೇಕು ಎಂದು ಶಾಸಕ ಖಾದರ್ ಸರಕಾರದ ಮುಖ್ಯ ಕಾರ್ಯದರ್ಶಿಯವರನ್ನು ದೂರವಾಣಿ ಕರೆಯಲ್ಲಿ ಪ್ರಶ್ನಿಸಿದ್ದಾರೆ.

ಕರ್ಫ್ಯೂ ವಿಧಿಸಿದರೆ ಜನರು ರಸ್ತೆಗೆ ಇಳಿಯುವ ಹಾಗಿಲ್ಲ. ಈ ನಡುವೆ ಅಗತ್ಯ ವಸ್ತುಗಳು ಖರೀದಿಸಬಹುದು, ಮದುವೆಗೆ ಹೋಗಬಹುದು ಎಂಬ ಹೇಳಿಕೆ ನೀಡುತ್ತಿದ್ದೀರಿ. ಕರ್ಫ್ಯೂ ಆದರೆ ಖರೀದಿಸುವುದು ಹೇಗೆ?, ಜನರ ಓಡಾಟ ಹೇಗೆ?, ಭಿನ್ನ ಭಿನ್ನ ಹೇಳಿಕೆ ನೀಡುವುದು ಯಾಕೆ? ಎಂದು ಪ್ರಶ್ನಿಸಿರುವ ಯು.ಟಿ.ಖಾದರ್, ಈ ಬಗ್ಗೆ ಸ್ಪಷ್ಟನೆ ಅಗತ್ಯ. ಜೊತೆಗೆ ಗರಿಷ್ಟ ನಾಲ್ಕು ಜನರು ಓಡಾಟ ನಡೆಸಲು ಅನುಮತಿ ನೀಡಬೇಕು ಎಂದು ಮನವಿ ಮಾಡಿದ್ದಾರೆ. ಈ ಕುರಿತು ಅಧಿಕಾರಿಗಳ ಜೊತೆಗೆ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳುವುದಾಗಿ ವಿಜಯ ಭಾಸ್ಕರ್ ಯು.ಟಿ.ಖಾದರ್ ಗೆ ತಿಳಿಸಿದ್ದಾರೆ.

ರವಿವಾರ ಈದುಲ್ ಫಿತ್ರ್ ಆಚರಣೆ ಇರುವುದರಿಂದ ಮಾರುಕಟ್ಟೆ ಪ್ರವೇಶ ಹಾಗೂ ರಸ್ತೆಗಿಳಿಯಲು ಅನುಮತಿ ನೀಡುವಂತೆ ಸರಕಾರಕ್ಕೆ ವಿವರಿಸಲು ಶಾಸಕರಾದ ಯು.ಟಿ.ಖಾದರ್ ರಿಗೆ ಮಂಗಳೂರು ಎನ್.ಜಿ.ಓ. ಕೋರ್ಡಿನೇಶನ್ ತಂಡ ಮನವಿ ಮಾಡಿತ್ತು. ಈ ನಿಟ್ಟಿನಲ್ಲಿ ಯು.ಟಿ.ಖಾದರ್ ಗುರುವಾರ ದ.ಕ. ಜಿಲ್ಲಾಧಿಕಾರಿ ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿಯವರಿಗೆ ಮನವರಿಕೆ ಮಾಡಿದ್ದರು. ಶುಕ್ರವಾರ ಸರಕಾರದಿಂದ ಗೊಂದಲದ ಹೇಳಿಕೆಗಳು ಬಂದಿದ್ದು, ಈ ಬಗ್ಗೆ ಪುನಃ ಜಿಲ್ಲಾಧಿಕಾರಿಯನ್ನು ವಿಚಾರಿಸಿದಾಗ ಸರಕಾರದ ಆದೇಶ ಪ್ರಕಟಿಸಲಾಗಿದೆ ಎಂದಿದ್ದಾರೆ. ಇದನ್ನು ಪ್ರಶ್ನಿಸಿ ಯು.ಟಿ.ಖಾದರ್ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಜೊತೆ ಮಾತುಕತೆ ನಡೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News