ಲಾಕ್ ಡೌನ್: ಕಿನ್ಝ್ ಫೌಂಡೇಶನ್ ನಿಂದ 6000ಕ್ಕೂ ಹೆಚ್ಚು ಕಿಟ್ ವಿತರಣೆ

Update: 2020-05-23 14:12 GMT

ಮಂಗಳೂರು, ಮೇ 23 : ಅನಿವಾಸಿ ಭಾರತೀಯ ಉದ್ಯಮಿ ಅಲ್ತಾಫ್ ಉಳ್ಳಾಲ್ ಸಾಕೋ ಅವರ ದಿ ಕಿನ್ಝ್ ಫೌಂಡೇಶನ್ ಲಾಕ್ ಡೌನ್ ಪ್ರಾರಂಭವಾದಂದಿನಿಂದ ಮೇ 23 ರವರೆಗೆ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧೆಡೆ ಸರ್ವಧರ್ಮೀಯರಿಗೆ 6000 ಕ್ಕೂ ಹೆಚ್ಚು ದಿನಸಿ ಸಾಮಗ್ರಿಗಳ ಕಿಟ್ ಅನ್ನು ವಿತರಿಸಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ. 

ಲಾಕ್ ಡೌನ್ ನಿಂದ ಬಡವರು, ಕೆಲ ಮಧ್ಯಮ ವರ್ಗದ ಜನರು ಸಂಕಟಕ್ಕೆ ಸಿಲುಕಿರುವುದನ್ನು ಅರಿತು  ಮಾರ್ಚ್ ಕೊನೆಯ ವಾರದಲ್ಲಿ ದಿ ಕಿನ್ಝ್ ಫೌಂಡೇಶನ್ ವತಿಯಿಂದ ಬೃಹತ್ ಕಿಟ್ ವಿತರಣಾ ಯೋಜನೆಯನ್ನು ಜಾರಿಗೆ ತರಲಾಯಿತು. ಅದರ ಪ್ರಕಾರ ಮೊದಲು ಉಳ್ಳಾಲ ಹಾಗು ಸುತ್ತಮುತ್ತಲ ಪ್ರದೇಶಗಳಲ್ಲಿ ಬಳಿಕ ಜಿಲ್ಲೆಯ ಬಂಟ್ವಾಳ, ಬೆಳ್ತಂಗಡಿ, ಚಾರ್ಮಾಡಿ ಪ್ರದೇಶಗಳಲ್ಲಿ ಅರ್ಹರನ್ನು ಗುರುತಿಸಿ ಅವರಿಗೆ ಆಹಾರ ಸಾಮಗ್ರಿಗಳ ಕಿಟ್ ಗಳನ್ನು ತಲುಪಿಸಲಾಗಿದೆ. ಅತ್ಯಂತ ವ್ಯವಸ್ಥಿತವಾಗಿ ಅರ್ಹ ಫಲಾನುಭವಿಗಳನ್ನು ಗುರುತಿಸಿ, ಅವರಿಗೆ ಗುಣಮಟ್ಟದ ಬಹುತೇಕ ಎಲ್ಲ  ದಿನಸಿ ಸಾಮಗ್ರಿಗಳ 6000 ಕ್ಕೂ ಹೆಚ್ಚು ಕಿಟ್ ಗಳನ್ನು ಒಟ್ಟುಗೂಡಿಸಿ, ಚೆನ್ನಾಗಿ ಪ್ಯಾಕ್ ಮಾಡಿ ಅವುಗಳನ್ನು ತಲುಪಿಸಲಾಗಿದೆ. ಇದರ ಜೊತೆಗೆ ಬಂಟ್ವಾಳದ ಬಂಟರ ಭವನದಲ್ಲಿ ತಂಗಿದ್ದ ಸಾವಿರಕ್ಕೂ ಹೆಚ್ಚು ಉತ್ತರ ಭಾರತದ ಕಾರ್ಮಿಕರಿಗೆ ಎರಡು ದಿನ ರಾತ್ರಿ ಊಟ, ಬಾಟಲಿ ನೀರು ಒದಗಿಸಲಾಗಿದೆ. ರಮಝಾನ್ ಉಪವಾಸ ಆಚರಿಸುವ ನೂರಾರು ಜನರಿಗೆ ಸಹರಿ ಊಟವನ್ನು ವಿತರಿಸಲಾಗಿದೆ.

ಒಟ್ಟು 8 ಟ್ರಕ್ ಗಳ ಮೂಲಕ ಕಿಟ್ ತಲುಪಿಸಿದ್ದು, ಆಯಾ ಪ್ರದೇಶದಲ್ಲಿ ಅಲ್ಲಿನ ಜನಪ್ರತಿನಿಧಿಗಳು, ಸಾಮಾಜಿಕ ಕಾರ್ಯಕರ್ತರು, ಮಸೀದಿ ಪದಾಧಿಕಾರಿಗಳ ಸಹಕಾರದಲ್ಲಿ ದಿ ಕಿನ್ಝ್ ಫೌಂಡೇಶನ್ನ 55ಕ್ಕೂ ಹೆಚ್ಚು   ಸ್ವಯಂಸೇವಕರು ಶಿಸ್ತುಬದ್ಧವಾಗಿ ಕಿಟ್ ವಿತರಣೆ ಮಾಡಿದ್ದಾರೆ.  ಇದನ್ನು   ನಾಲ್ವರು ಸೂಪರವೈಸರ್ ಗಳು ನೋಡಿಕೊಂಡಿದ್ದಾರೆ. ಕಿಟ್ ವಿತರಣೆ ಯೋಜನೆಯ ಪೂರ್ಣ ಉಸ್ತುವಾರಿಯನ್ನು ಸಂಸ್ಥೆಯ ಮಂಗಳೂರು ವ್ಯವಸ್ಥಾಪಕ ಮೂಸಾ ಫಾಝಿಲ್ ಅವರು ವಹಿಸಿದ್ದರು ಎಂದು ಸಂಸ್ಥೆಯ ಅಧ್ಯಕ್ಷ ಅಲ್ತಾಫ್ ಉಳ್ಳಾಲ್ ಸಾಕೋ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News