ಭ್ರಾತೃತ್ವದ ಸಂದೇಶ ಸಾರುವ ಈದ್-ಉಲ್-ಫಿತ್ರ್: ಎಂ.ಎ.ಗಫೂರ್
ಉಡುಪಿ, ಮೇ 23: ಜಗತ್ತಿನ ಮುಸ್ಲಿಮರು ಆಚರಿಸುವ ಈ ಈದ್- ಉಲ್-ಫಿತ್ರ್ ಹಬ್ಬದ ಸಂಭ್ರಮದಲ್ಲಿದ್ದಾರೆ. ಪರಸ್ಪರ ಸಡಗರ ಸಂತೋಷ ಹಂಚಿಕೊಳ್ಳಲು ಹಬ್ಬಗಳು ಪೂರಕ. ಜನರನ್ನು ಬೆಸೆಯುವ ಬಂಧವಾಗಿ, ಪ್ರೀತಿಯ ಪ್ರತೀಕವಾಗಿ ಸೌಹಾರ್ದತೆ, ಸೋದರತೆಯ ಭರವಸೆ ಇಮ್ಮಡಿಗೊಳಿಸೂದರ ಜೊತೆಗೆ ಕಷ್ಟ, ಸುಖ, ದುಃಖ, ದುಮ್ಮಾನಕ್ಕೆ ಆತ್ಮವಿಶ್ವಾಸ ಮೂಡಿಸುತ್ತದೆ ಎಂದು ಕರ್ನಾಟಕ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಎಂ.ಎ.ಗಫೂರ್ ಹೇಳಿದ್ದಾರೆ.
ಫಿತ್ರ್ ಝಕಾತ್ ಎಂಬ ದಾನ ವಿತರಿಸುವುದು ಕಡ್ಡಾಯ ಮತ್ತು ರಂಝಾನ್ ಹಬ್ಬದ ವೈಶಿಷ್ಟ್ಯ. ಬಡವರಿಗೆ, ಹಸಿವಿನವರಿಗೆ ಹಸಿವು ನೀಗಿಸುವ ಸಂಕೇತವೂ ಇದರಲ್ಲಿ ಅಡಗಿದೆ. ಈದ್ ದಿನದಂದು ಆಲಿಂಗನ ಹಸ್ತಲಾಗನ, ಕೀರ್(ಸಿಹಿ ತಿಂಡಿ) ತಿನಿಸುವುದು, ಮಾಂಸಾಹಾರ ಸೇವಿಸುವುದು ಬಗೆ ಬಗೆಯ ತಿಂಡಿ ತಿನಿಸುಗಳನ್ನು ತಯಾರಿಸುವುದು ಇತ್ಯಾದಿ ಪ್ರಮುಖವಾಗಿರುತ್ತದೆ. ಆ ಮೂಲಕ ಪರಸ್ಪರ ಸ್ನೇಹ ಸಂಭಂಧ ವೃದ್ಧಿಸುವುದರೊಂದಿಗೆ ಸಂತೋಷಪಡುವುದಾಗಿದೆ ಎಂದರು
ಇಂದು ಆಧುನಿಕ ಸಮಾಜದಲ್ಲಿ ನಮ್ಮ ಪ್ರೀತಿಯನ್ನು ಸಮುದಾಯದವರೊಂದಿಗೆ ಮತ್ತು ಸಮಾಜದವರೊಂದಿಗೆ ಹಂಚಿಕೊಳ್ಳಬಹುದಾಗಿದೆ. ಅತಿವೇಗದಲ್ಲಿ ಹರಡುತ್ತಿರುವ ಕೊರೋನವನ್ನು ನಿಯಂತ್ರಿಸಲು ಬದಲಾದ ದಿನಚರಿಯಲ್ಲಿ ಸಾಮಾಜಿಕ ಅಂತರ ಕಾಯಿದುಕೊಂಡು ಅನಗತ್ಯ ಮನೆಯಿಂದ ಹೊರಗೆ ಹೋಗದೆ ಸರಕಾರದ ಆದೇಶಗಳನ್ನು ಪಾಲಿಸುತ್ತಾ ಉಪವಾಸದ ವೃತಾಚರಣೆ ಎಲ್ಲ ಆರಾಧನೆಗಳನ್ನು ಮನೆಯಲ್ಲಿಯೇ ನಿರ್ವಹಿಸಿ ಸಂಯಮವನ್ನು ಮುಸ್ಲಿಂ ಸಮಾಜ ಪ್ರದರ್ಶಿಸಿದೆ ಎಂದು ಅವರು ಹೇಳಿದ್ದಾರೆ.
ಈದ್-ಉಲ್-ಫಿತ್ರ್ ರಮಝಾನ್ ತಿಂಗಳಲ್ಲಿ ಪ್ರದರ್ಶಿಸಿದ ತ್ಯಾಗ ಸಂಯಮ ಇಂದು ಮನೆಮಂದಿಯೊಂದಿಗೆ ಸಂಭ್ರಮಿಸಿ ಮನೆಯಲ್ಲಿಯೇ ಆಚರಿಸಿ ಸಮಾಜದ ಮತ್ತು ಸಮುದಾಯದ ನಮ್ಮೆಲ್ಲರ ಕರ್ತವ್ಯವಾಗಿದೆ. ರೋಗಿಗಳಿಗೆ ಕೋವಿಡ್ ವಾರಿಯರ್ಸ್ ಗಳಿಗೆ ವೈದ್ಯಕೀಯ ಸಿಬ್ಬಂದಿಗಳಿಗೆ ಪೊಲೀಸರಿಗೆ ಪ್ರಾರ್ಥಿಸುವುದು ನಮ್ಮೆಲ್ಲರ ಕರ್ತವ್ಯವೂ ಹೌದು.
ಕೆಡುಕನ್ನು ಒಳಿತಿನ ಮೂಲಕ ಎದುರಿಸಿ ಪರಸ್ಪರ ಪ್ರೀತಿ ವಿಶ್ವಾಸದ ಮೂಲಕ ಜಾಗತಿಕ ಮಟ್ಟದಲ್ಲಿ ಮನುಷ್ಯ-ಮನುಷ್ಯನ ನಡುವಿನ ಸಂಬಂಧ ವೃದ್ಧಿಗೆ ಪ್ರೇರಣೆಯಾಗಲು ಹಳಸಿದ ಸಂಬಂಧಗಳು ಮರು ಜೋಡಣೆಯಾಗ ಬೇಕಾಗಿದೆ. ಪ್ರೀತಿ, ವಿಶ್ವಾಸದ ಮೂಲಕ ಜಗತನ್ನೇ ಗೆದ್ದ ಪ್ರವಾದಿ ಮುಹಮ್ಮದ್ ಅವರ ಸಂದೇಶ ನಮಗೆಲ್ಲ ಮಾರ್ಗದರ್ಶನವಾಗಬೇಕಾಗಿದೆ ಎಂದು ಅವರು ತಮ್ಮ ಈದ್ ಸಂದೇಶದಲ್ಲಿ ತಿಳಿಸಿದ್ದಾರೆ.