ಭಕ್ತರ ಅನುಕೂಲಕ್ಕೆ ಆನ್‌ಲೈನ್ ಸೇವೆ ಆರಂಭ: ಸಚಿವ ಕೋಟ

Update: 2020-05-23 14:47 GMT

ಉಡುಪಿ, ಮೇ 23: ಮುಜರಾಯಿ ಇಲಾಖೆಯ ದೇವಸ್ಥಾನಗಳಲ್ಲಿ ಆನ್‌ಲೈನ್ ಸೇವೆ ಬಗ್ಗೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆನ್‌ಲೈನ್ ಸೇವೆ ನಮ್ಮ ಇಲಾಖೆಯಲ್ಲಿ ಈ ಮೊದಲೇ ಇವೆ. ಈಗ ಮತ್ತಷ್ಟು ದೇವಸ್ಥಾನಗಳನ್ನು ಆನ್‌ಲೈನ್ ಸೇವೆಯ ವ್ಯಾಪ್ತಿಗೆ ಇಲಾಖೆ ತರುತ್ತಿದೆ ಎಂದು ಮುಜುರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಉಡುಪಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೊಲ್ಲೂರು ದೇವಸ್ಥಾನದಲ್ಲಿ ಕಳೆದ ವರ್ಷ ಮೂರು ಸಾವಿರ ಆನ್‌ಲೈನ್ ಸೇವೆ ಗಳು ಬಂದಿವೆ. ಮೈಸೂರು ಚಾಮುಂಡೇಶ್ವರಿ ದೇವಸ್ಥಾನದಲ್ಲೂ ಆನ್‌ಲೈನ್ ಸೇವೆ ಇದೆ. ಕಳೆದ ವರ್ಷ ಈ ಆನ್‌ಲೈನ್ ಸೇವೆಯಿಂದ 49.50 ಲಕ್ಷ ರೂ. ಜಮಾ ಆಗಿದೆ ಎಂದರು.

ಲಾಕ್‌ಡೌನ್‌ನಿಂದ ಭಕ್ತರಿಗೆ ದೇವಸ್ಥಾನಕ್ಕೆ ಹೋಗಲು ಸಾಧ್ಯವಾಗುತ್ತಿಲ್ಲ. ಹರಕೆ ಹೊತ್ತ ಭಕ್ತರಿಗೆ ಆನ್‌ಲೈನ್ ಸೇವೆಯಿಂದ ಅನುಕೂಲವಾಗಲಿದೆ. ಭಕ್ತರಿಗೆ ನೆಮ್ಮದಿ ಸಿಗಲಿ ಎಂಬ ಕಾರಣಕ್ಕೆ ಆನ್‌ಲೈನ್ ಸೇವೆ ಆರಂಭಿಸಿದ್ದೇವೆ. ಲಾಕ್‌ಡೌನ್‌ವರೆಗಾದರೂ ಆನ್‌ಲೈನ್ ಸೇವೆ ಅಗತ್ಯವಿದೆ. ಭಕ್ತರ ಕೋರಿಕೆ ಹಿನ್ನೆಲೆಯಲ್ಲಿ ಈ ಸೇವೆ ಆರಂಭವಾಗಿದೆ ಎಂದು ಅವರು ತಿಳಿಸಿದರು.

ಎಲ್ಲಾ ದೇವಸ್ಥಾನಗಳಲ್ಲಿ ಸಾಂಪ್ರದಾಯಿಕ ಪೂಜೆ ನಡೆಯುತ್ತಿದೆ. ತ್ರಿಕಾಲ, ಕಾಲಮಿತಿಯ ಪೂಜೆಗಳು ನಡೆಯುತ್ತಿವೆ. ದೇವಸ್ಥಾನದಲ್ಲೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಅನಿವಾರ್ಯತೆ ಇರುವುದರಿಂದ ಲಾಕ್‌ಡೌನ್ ಮುಗಿದ ನಂತರವೇ ದೇವಸ್ಥಾನ ತೆರೆಯಲಾಗುವುದು ಎಂದು ಸಚಿವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News