ಮೇ 25ರಿಂದ ಉಚಿತ ಸಿಟಿ ಬಸ್ ಸೇವೆ: ಶಾಸಕ ರಘುಪತಿ ಭಟ್

Update: 2020-05-23 15:49 GMT

ಉಡುಪಿ, ಮೇ 23: ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿ ಕಡಿಯಾಳಿ ಹಾಗೂ ಆಸರೆ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಮೇ 25ರಿಂದ ಮೇ 30 ರವರೆಗೆ ನಗರದ 7 ಮಾರ್ಗಗಳಲ್ಲಿ ಉಚಿತ ಸಿಟಿಬಸ್ ಸೇವೆಯನ್ನು ಆರಂಭಿಸಲಾಗುವುದೆಂದು ಉಡುಪಿ ಶಾಸಕ ಕೆ.ರಘುಪತಿ ಭಟ್ ತಿಳಿಸಿದ್ದಾರೆ.

ಉಡುಪಿ ಶಾಸಕರ ಕಚೇರಿಯಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗ್ಗೆ 7 ರಿಂದ ಸಂಜೆವರೆಗೆ ಈ ಉಚಿತ ಬಸ್ ಸೇವೆ ನಡೆಯಲಿದೆ. ಪ್ರತಿ ಬಸ್‌ಗೆ ಚಾಲಕನ ಸಂಬಳ ಸಹಿತ ಡೀಸೆಲ್ ಖರ್ಚಿಗೆ ಸುಮಾರು 5000 ರೂ. ಖರ್ಚು ಬರಲಿದೆ. ಬಸ್‌ನಲ್ಲಿ ನಿರ್ವಾಹಕರು ಇರುವುದಿಲ್ಲ. ಗಣೇಶೋತ್ಸವ ಸಮಿತಿ ಕಾರ್ಯಕರ್ತರು, ಸ್ಥಳೀಯ ಜನಪ್ರತಿನಿಧಿಗಳು ಸಹಕರಿಸುತ್ತಾರೆ ಎಂದರು.

ಸಿಟಿ ಬಸ್ ಮಾಲಕರ ಸಂಘದ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಮಾತನಾಡಿ, ರಾಜ್ಯದಲ್ಲೇ ಮೊದಲ ಬಾರಿಗೆ ಉಡುಪಿ ಸಿಟಿ ಬಸ್ ಮಾಲಕರ ಸಂಘ ಮುಂಬೈಯ ಚಲೋ ಕಂಪನಿಯ ಮೂಲಕ ಚಲೋ ಟ್ರಾವೆಲ್ ಕಾರ್ಡ್‌ಯನ್ನು ಪ್ರಯಾಣಿಕರಿಗೆ ಪರಿಚಯಿಸಲಿದೆ. ಉಚಿತ ಬಸ್ ಸೇವೆ ಸಂದರ್ಭ ಬರುವ ಪ್ರಯಾಣಿಕರಿಗೆ ಉಚಿತವಾಗಿ ನೀಡಲಾಗುವುದು ಎಂದರು.

ಮೇ 30ರವರೆಗೆ ಉಚಿತವಾಗಿ ಪ್ರಯಾಣಿಸಬಹುದು. ಆ ಬಳಿಕ ಈ ಕಾರ್ಡ್‌ಗೆ ಪ್ರಯಾಣಿಕರೇ ರಿಚಾರ್ಜ್ ಮಾಡಿಕೊಳ್ಳಬೇಕು. ಒಮ್ಮೆ ರಿಚಾರ್ಜ್ ಮಾಡಿದರೆ ಹಣ ಮುಗಿಯುವ ತನಕ ಪ್ರಯಾಣಿಸಬಹುದು. ಬಸ್ ನಿರ್ವಾಹಕ, ಹೋಟೆಲ್, ಪಾಸ್ ಸೆಂಟರ್, ಅಂಗಡಿಗಳಲ್ಲೂ ರಿಚಾರ್ಜ್ ಮಾಡ ಬಹುದಾಗಿದೆ. ಸುಮಾರು 500 ಕಾರ್ಡ್‌ಗಳನ್ನು ಮುದ್ರಿಸಲಾಗಿದೆ ಎಂದು ಅವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ರಾಘವೇಂದ್ರ ಕಿಣಿ, ಗಿರೀಶ್ ಅಂಚನ್, ಸಂದೀಪ್, ವಾದಿರಾಜ್, ಚಂದನ್, ಗಣನಾಥ್ ಹೆಗ್ಡೆ ಉಪಸ್ಥಿತರಿದ್ದರು.

ಬಸ್ ಸಂಚರಿಸುವ ಮಾರ್ಗಗಳು:  ಮಲ್ಪೆ-ಗರಡಿಮಜಲು-ಸಂತೆಕಟ್ಟೆ-ಉಡುಪಿ, ಉಡುಪಿ- ಸಂತೆಕಟ್ಟೆ-ಗರಡಿ ಮಜಲು-ಮಲ್ಪೆ, ಅಲೆವೂರು- ಕೊರಂಗ್ರಪಾಡಿ -ಉಡುಪಿ-ಮಣಿಪಾಲ- ಡಿಸಿ ಕಚೇರಿ, ಉಡುಪಿ ಸಿಟಿ-ಡಯಾನಾ -ಅಲೆವೂರು, ಹೂಡೆ-ತೊಟ್ಟಂ- ಮಲ್ಪೆ-ಆದಿ ಉಡುಪಿ- ಅಜ್ಜರಕಾಡು- ಉಡುಪಿ ಸಿಟಿ- ಮಣಿಪಾಲ- ಪರ್ಕಳ, ಪರ್ಕಳ-ಉಡುಪಿ ಸಿಟಿ-ಆದಿ ಉಡುಪಿ-ಮಲ್ಪೆ-ತೊಟ್ಟಂ-ಹೂಡೆ, ಸಂಪಿಗೆನಗರ- ಕಡೆಕಾರು- ಅಂಬಲಪಾಡಿ- ಅಜ್ಜರಕಾಡು- ಉಡುಪಿ ಸಿಟಿ- ಮಣಿಪಾಲ- ಪರ್ಕಳ, ಪರ್ಕಳ- ಮಣಿಪಾಲ- ಉಡುಪಿ ಸಿಟಿ- ಅಜ್ಜರ ಕಾಡು-ಅಂಬಲಪಾಡಿ-ಸಂಪಿಗೆ ನಗರ, ಪ್ರಗತಿನಗರ- ಮಣಿಪಾಲ- ಉಡುಪಿ -ದೊಡ್ಡಣಗುಡ್ಡೆ-ಪೆರಂಪಳ್ಳಿ ಚರ್ಚ್, ಪೆರಂಪಳ್ಳಿ ಚರ್ಚ್- ದೊಡ್ಡಣಗುಡ್ಡೆ- ಉಡುಪಿ- ಮಣಿಪಾಲ- ಪ್ರಗತಿನಗರ, ಕಳತ್ತೂರು- ಸಂತೆಕಟ್ಟೆ- ಚೇರ್ಕಾಡಿ -ಪೇತ್ರಿ-ಬ್ರಹ್ಮಾವರ, ಬ್ರಹ್ಮಾವರ- ಪೇತ್ರಿ- ಚೇರ್ಕಾಡಿ -ಸಂತೆಕಟ್ಟೆ ಕಳತ್ತೂರು, ಹೂಡೆ- ಕೆಮ್ಮಣ್ಣು- ಸಂತೆಕಟ್ಟೆ- ಅಂಬಾಗಿಲು- ಗುಂಡಿಬೈಲು- ಕಲ್ಸಂಕ- ಉಡುಪಿ, ಉಡುಪಿ ಸಿಟಿ-ಕರಾವಳಿ ಬೈಪಾಸ್- ನಿಟ್ಟೂರು- ಸಂತೆಕಟ್ಟೆ -ಕೆಮ್ಮಣ್ಣು-ಹೂಡೆ ಮಾರ್ಗಗಳಲ್ಲಿ ಬಸ್ ಸಂಚಾರಿಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News