ಬೆಳ್ತಂಗಡಿ: ಎಪಿಎಂಸಿ ಕಾಯ್ದೆಗೆ ಸುಗ್ರಿವಾಜ್ಞೆಯನ್ನು ಜಾರಿಗೊಳಿಸಿರುವುದನ್ನು ವಾಪಸ್ ಪಡೆಯಲು ಮನವಿ

Update: 2020-05-23 16:38 GMT

ಬೆಳ್ತಂಗಡಿ: ರಾಜ್ಯ ಸರ್ಕಾರ ಎಪಿಎಂಸಿ ಕಾಯ್ದೆಗೆ ಸುಗ್ರಿವಾಜ್ಞೆಯನ್ನು ಜಾರಿಗೊಳಿಸಿರುವುದನ್ನು ವಾಪಸ್ ಪಡೆಯಲು ಒತ್ತಾಯಿಸಿ ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್ ವಾದಿ) ಸಿಪಿಐ(ಎಂ) ನ ನೇತೃತ್ವದಲ್ಲಿ ಶುಕ್ರವಾರ ಬೆಳ್ತಂಗಡಿ ತಹಶಿಲ್ದಾರರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಸಿಪಿಐ(ಎಂ) ತಾಲೂಕು ಕಾರ್ಯದರ್ಶಿ, ನ್ಯಾಯವಾದಿ ಶಿವಕುಮಾರ್ ಎಸ್, ಎಂ ವಿದೇಶಿ ವಸ್ತುಗಳನ್ನು ಬಹಿಷ್ಕಾರಕ್ಕೆ ಕರೆ ನೀಡುವ ಕೇಂದ್ರ, ರಾಜ್ಯ ಸರ್ಕಾರಗಳು ಗುಪ್ತವಾಗಿ ಬಹುರಾಷ್ಟ್ರೀಯ ಕಂಪನಿಗಳಿಗೆ ರತ್ನಗಂಬಳಿ ಹಾಸುವ ಮೂಲಕ ದೇಶದ ಅನ್ನದಾತ ರೈತರ ಪಾಲಿಗೆ ಮರಣ ಶಾಸನ ಬರೆಯುತ್ತಿದೆ ಎಂದು ಆರೋಪಿಸಿದರು. ಎಪಿಎಂಸಿ ಕಾಯ್ದೆ ಸೇರಿದಂತೆ ಕಾರ್ಮಿಕ ವಿರೋಧಿ ಕಾನೂನುಗಳನ್ನು ಹಿಂಪಡೆಯದಿದ್ದರೆ ದೇಶದಾದ್ಯಂತ ಜನರು ದಂಗೆ ಏಳಬಹುದು ಎಂದರು. 

ಬಹುರಾಷ್ಟ್ರೀಯ ಕಂಪನಿಗಳ ಲೂಟಿಗೆ ನೆರವಾಗುವ ಎಪಿಎಂಸಿ ಕಾಯ್ದೆಗೆ ಸುಗ್ರಿವಾಜ್ಞೆ ಮೂಲಕ ಮಾಡಿರುವ ತಿದ್ದುಪಡಿಯನ್ನು ಕೂಡಲೇ ಹಿಂಪಡೆಯಬೇಕು. ಬಂಡವಾಳಗಾರರು ಹಾಗೂ ಬಹುರಾಷ್ಟ್ರೀಯ ಕಂಪನಿಗಳಿಗೆ ಕಾರ್ಮಿಕ ಕಾಯ್ದೆಗಳಿಂದ ವಿನಾಯಿತಿ ನೀಡುವ ಮತ್ತು ಕಾರ್ಮಿಕರ ದುಡಿಮೆಯ ಅವಧಿಯನ್ನು ಹೆಚ್ಚಿಸಬಾರದು, ಪ್ರತಿಗಾಮಿ ವಿದ್ಯುತ್ಚಕ್ತಿ ಮಸೂದೆ 2020 ಹಿಂಪಡೆಯಬೇಕು, ಗ್ರಾಮ ಪಂಚಾಯತ್ ಗಳಿಗೆ ಆಡಳಿತ ಸಮಿತಿಗಳನ್ನು ನೇಮಕ ಮಾಡುವುದನ್ನು ಕೂಡಲೇ ನಿಲ್ಲಿಸಬೇಕು, ಲಾಕ್ ಡೌನ್ ನಿಂದ ಸಂಕಷ್ಟಕ್ಕೊಳಗಾದ ದಿನನಿತ್ಯದ ದುಡಿಮೆಯನ್ನು ಆಧಾರಿತ ಎಲ್ಲಾ ಬಡವರಿಗೆ, ರೈತರಿಗೆ ,‌ಕೃಷಿ ಕೂಲಿಕಾರರು ಹಾಗೂ ಕಾರ್ಮಿಕರಿಗೆ ಲಾಕ್ ಡೌನ್ ಅವಧಿಯ ಮತ್ತು ಮುಂದಿನ 3 ತಿಂಗಳಿಗೆ ಅಗತ್ಯವಾದ ಸಮಗ್ರ ಆಹಾರ ಧಾನ್ಯಗಳನ್ನು ಹೊಂದಿದ ಆಹಾರ ಪಡಿತರ ಕಿಟ್ ಒದಗಿಸಬೇಕು, ಹಾಗೆ ಎಲ್ಲರಿಗೂ ಪ್ರತಿ ತಿಂಗಳು ತಲಾ ರೂ. 7500 ಗಳ ನೆರವು ನೀಡಬೇಕು. ರೈತರ ಬೆಳೆ ನಷ್ಟ, ನಿರುದ್ಯೋಗ, ಆರ್ಥಿಕ ಸಂಕಷ್ಟದ ಕಾರಣದಿಂದ ರೈತರ, ಗೇಣಿದಾರರ, ಮಹಿಳೆಯರ ಸಾಲಗಳನ್ನು, ಮೈಕ್ರೋ ಸಂಸ್ಥೆಗಳ ಸಾಲಗಳನ್ನು ಮನ್ನಾ ಮಾಡಬೇಕು ಮತ್ತು ಬೆಳೆ ನಷ್ಟ ಪರಿಹಾರ ತಲಾ 10,000 ವನ್ನು ಪ್ರತಿ ಎಕರೆ ಜಮೀನಿಗೆ ನೀಡಬೇಕು, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಕಾರ್ಮಿಕರಿಗೆ ಲಾಕ್ ಡೌನ್ ಅವಧಿಯ ಬಾಕಿ ವೇತನವನ್ನು ಸರ್ಕಾರವೇ ಭರಿಸಬೇಕು ಮತ್ತು ಅವರಿಗೆ ಉದ್ಯೋಗ ಭದ್ರತೆ ಒದಗಿಸಬೇಕು, ನಿರುದ್ಯೋಗಿಗಳಿಗೆ ಮಾಸಿಕ ವೇತನ ರೂ. 10,000 ನಿರುದ್ಯೋಗ ಭತ್ಯೆ ನೀಡಬೇಕು. ನಗರದ ಬಡವರು ಸೇರಿದಂತೆ ಉದ್ಯೋಗ ಖಾತರಿ ಅಡಿಯಲ್ಲಿ ರಾಜ್ಯಾದ್ಯಂತ ವ್ಯಾಪಕ ಉದ್ಯೋಗವನ್ನು ಒದಗಿಸಬೇಕು ಮುಂತಾದ ಬೇಡಿಕೆಗಳ ಮನವಿಯನ್ನು ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಸಿಪಿಎಂ ತಾಲೂಕು ಸಮಿತಿ ಸದಸ್ಯರಾದ ವಸಂತ ನಡ, ಶೇಖರ್ ಲಾಯಿಲ, ನ್ಯಾಯವಾದಿ ಸುಕನ್ಯಾ ಹೆಚ್, ರೈತ ಮುಖಂಡರಾದ ಸುಜೀತ್ ಉಜಿರೆ, ಸಾಂತಪ್ಪ ಗೌಡ ದಡ್ಡು, ಕಾರ್ಮಿಕ ಮುಖಂಡ ಕೃಷ್ಣ ನೆರಿಯ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News