ಭಟ್ಕಳ: ಈದುಲ್ ಫಿತ್ರ್ ಶಾಂತಿಯುತವಾಗಿ ಆಚರಿಸುವಂತೆ ಸಹಾಯಕ ಆಯುಕ್ತ ಕರೆ

Update: 2020-05-23 16:46 GMT

ಭಟ್ಕಳ: ಈದುಲ್ ಫಿತ್ರ್ ಹಬ್ಬದ ನಿಮಿತ್ತ ಶನಿವಾರ ಸಂಜೆ ಇಲ್ಲಿನ ಸಹಾಯಕ ಆಯುಕ್ತರ ಕಚೇರಿಯಲ್ಲಿ ಎಲ್ಲಾ ಸಮುದಾಯದ ಮುಖಂಡರೊಂದಿಗೆ ಶಾಂತಿ ಸಭೆ ನಡೆಯಿತು.  

ಅಧ್ಯಕ್ಷತೆ ವಹಿಸಿ ಮಾತನಾಡಿದ ಸಹಾಯಕ ಆಯುಕ್ತ ಭರತ್ ಎಸ್., ಹಬ್ಬವನ್ನು ಅತ್ಯಂತ ಶಾಂತಿ ಸುವ್ಯವಸ್ಥೆಯಿಂದ ಆಚರಿಸುವಂತೆ ಕರೆ ನೀಡಿದರು.  ಕೋವಿಡ್-19 ಸಂದರ್ಭದಲ್ಲಿ ಇಲಾಖೆಯೊಂದಿಗೆ ಸಹಕರಿಸಿದ ಎಲ್ಲರಿಗೂ ಅವರು ಧನ್ಯವಾದ ಹೇಳಿದರು. 

ಎ.ಎಸ್.ಪಿ. ನಿಖಿಲ್ ಬಿ., ಅವರು ಮಾತನಾಡಿ ಭಟ್ಕಳದಲ್ಲಿ ಸದಾ ಶಾಂತಿ ಇದೆ. ಎಲ್ಲರೂ ಕೂಡಾ ಹಬ್ಬವನ್ನು ಶಾಂತಿಯಿಂದ ಆಚರಿಸಬೇಕು. ಈ ಬಾರಿ ಕೋವಿಡ್-19 ಇರುವುದರಿಂದ ತಮ್ಮ ತಮ್ಮ ಮನೆಗಳಲ್ಲಿಯೇ ಹಬ್ಬವನ್ನು ಆಚರಿಸಿಕೊಳ್ಳುವಂತೆ ಕೋರಿದರು. 

ಸಭೆಯಲ್ಲಿ ಮಾತನಾಡಿದ ತಂಝೀಮ್ ಉಪಾಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ ಹಬ್ಬದ ದಿನದಂದು ಪ್ರತಿಯೋರ್ವರೂ ಕೂಡಾ ಹಂಚಿ ತಿನ್ನುವುದು ನಮ್ಮ ಪದ್ದತಿಯಾಗಿತ್ತು. ಆದರೆ ಈ ಬಾರಿ ಲಾಕ್‍ಡೌನ್ ಇರುವುದರಿಂದ ಕನಿಷ್ಟ ಅಕ್ಕಪಕ್ಕದ ಮನೆಗೆ ಹಂಚಿ ತಿನ್ನಲಿಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಕೋರಿದರು. 

ಶಾಂತಾರಾಮ ಭಟ್ಕಳ ಮಾತನಾಡಿ, ಕೋವಿಡ್-19 ಆರಂಭದಿಂದಲೂ ಸರಕಾರದ ಬುಲೆಟಿನ್‍ನಲ್ಲಿ ಭಟ್ಕಳ ಎಂದು ಬರುತ್ತಿತ್ತು. ಆದರೆ ಇತ್ತೀಚೆಗೆ ಉತ್ತರ ಕನ್ನಡದ ಎಲ್ಲಾ ತಾಲೂಕುಗಳಲ್ಲಿ ಕೋವಿಡ್-19 ಪ್ರಕರಣ ಪತ್ತೆಯಾಗಲು ಆರಂಭವಾದ ನಂತರ ಉತ್ತರ ಕನ್ನಡ ಎಂದು ಬರುತ್ತಿದೆ. ಹಿಂದೆ ಕೇವಲ ಭಟ್ಕಳದ ಹೆಸರು ಮತ್ತಷ್ಟು ಪ್ರಚಾರಕ್ಕೆ ಬರಲಿ ಎಂದು ಭಟ್ಕಳ ಎಂತಾ ಹಾಕಲಾಗುತ್ತಿತ್ತೆ. ಈಗಲೂ ಆಯಾಯ ತಾಲೂಕಿನ ಹೆಸರು ಹಾಕಬೇಕು ಎಂದು ಆಗ್ರಹಿಸಿದರು.

ಅಲ್ಲದೇ ಎರಡು ತಿಂಗಳಿನಿಂದ ಲಾಕ್‍ಡೌನ್ ನಿಂದ ಎಲ್ಲರೂ ಮನೆಯಲ್ಲಿಯೇ ಕುಳಿತು ತೀವ್ರ ತೊಂದರೆಯಾಗಿದೆ. ಕನಿಷ್ಟ ಕಂಟೈನ್‍ಮೆಂಟ್ ಝೋನ್ ಬಿಟ್ಟು ಉಳಿದೆಡೆಯಲ್ಲಿ ಅಂಗಡಿಗಳ ಬಾಗಿಲು ತೆರೆಯಲು, ಜನರ ಓಡಾಟಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸಿದರು. 

ಅಟೋ ರಿಕ್ಷಾ ಚಾಲಕರ ಸಂಘದ ಮಾಜಿ ಅಧ್ಯಕ್ಷ ವೆಂಕಟೇಶ ನಾಯ್ಕ ಮಾತನಾಡಿ, ಈ ಬಾರಿಯ ಹಬ್ಬವನ್ನು ಮನೆಯಲ್ಲಿಯೇ ಆಚರಿಸಬೇಕಾಗಿ ಬಂದಿದ್ದರಿಂದ ನಮಗೆಲ್ಲರಿಗೂ ತುಂಬಾ ಬೇಸರವಿದೆ. ಆದರೆ ಪರಿಸ್ಥಿತಿ ಎಲ್ಲರಿಗೂ ಒಂದೇ ಆಗಿದ್ದು ಮುಂದಿನ ದಿನಗಳಲ್ಲಿ ಹಬ್ಬಗಳನ್ನು ಅತ್ಯಂತ ಉತ್ತಮವಾಗಿ ಆಚರಿಸುವ ಎಂದು ಕರೆ ನೀಡಿದರು. 

ತಂಝೀಮ್ ಅಧ್ಯಕ್ಷ ಎಸ್. ಎಂ. ಪರ್ವೇಝ್, ನಾಮಧಾರಿ ಸಂಘದ ಅಧ್ಯಕ್ಷ ಎಂ. ಆರ್. ನಾಯ್ಕ, ತಂಝೀಮ್ ಪ್ರಧಾನ ಕಾರ್ಯದರ್ಶಿ ಅಬ್ದುರ್ ರಕೀಬ್, ಪುರಸಭಾ ಮಾಜಿ ಅಧ್ಯಕ್ಷ ಪರ್ವೆಜ್ ಕಾಶಿಮಜಿ, ಶ್ರೀಧರ ನಾಯ್ಕ ಆಸರಕೇರಿ, ಸುರೇಂದ್ರ ಭಟ್ಕಳ ಮುಂತಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News