ಚೀನಾದಲ್ಲಿ ಶೂನ್ಯಕ್ಕಿಳಿದ ಹೊಸ ಕೊರೋನ ಪ್ರಕರಣಗಳು

Update: 2020-05-23 17:20 GMT

ಬೀಜಿಂಗ್, ಮೇ 23: ಚೀನಾದಲ್ಲಿ ಶನಿವಾರ ಯಾವುದೇ ಕೊರೋನ ವೈರಸ್ ಸೋಂಕು ಪ್ರಕರಣ ವರದಿಯಾಗಲಿಲ್ಲ. ಜನವರಿಯಲ್ಲಿ ಕೊರೋನ ಸಂಬಂಧಿ ಸೋಂಕು ಮತ್ತು ಸಾವುಗಳನ್ನು ಅದು ವರದಿ ಮಾಡಲು ಆರಂಭಿಸಿದ ಬಳಿಕ, ಒಂದೇ ಒಂದು ಸೋಂಕು ಪ್ರಕರಣ ವರದಿಯಾಗದೆ ಇರುವುದು ಇದೇ ಮೊದಲ ಬಾರಿಯಾಗಿದೆ.

ವೈರಸ್ ವಿರುದ್ಧದ ಹೋರಾಟದಲ್ಲಿ ಮಹತ್ವದ ಸಾಧನೆಯನ್ನು ಕಮ್ಯುನಿಸ್ಟ್ ಪಕ್ಷದ ನಾಯಕರು ಸಂಭ್ರಮಿಸಿದ ಒಂದು ದಿನದ ಬಳಿಕ, ಈ ಬೆಳವಣಿಗೆ ಸಂಭವಿಸಿದೆ. ನೂತನ-ಕೊರೋನ ವೈರಸ್ ಮೊಟ್ಟ ಮೊದಲು ಚೀನಾದ ವುಹಾನ್ ನಗರದಲ್ಲಿ ಕಳೆದ ವರ್ಷದ ಕೊನೆಯಲ್ಲಿ ಕಾಣಿಸಿಕೊಂಡಿತು ಹಾಗೂ ಬಳಿಕ ಅದು ನಿಧಾನವಾಗಿ ಇಡೀ ಜಗತ್ತಿಗೆ ಹರಡಿತು.

ಆದರೆ, ಚೀನಾದಲ್ಲಿ ಫೆಬ್ರವರಿ ಮಧ್ಯ ಭಾಗದಲ್ಲಿ ಗರಿಷ್ಠ ಸೋಂಕು ಮತ್ತು ಸಾವುಗಳು ಸಂಭವಿಸಿದ ಬಳಿಕ ಚೀನಾದಲ್ಲಿ ಸಾಂಕ್ರಾಮಿಕದ ತೀವ್ರತೆ ಕಡಿಮೆಯಾಗಿದೆ. ಈಗ ಅಲ್ಲಿ ಸಾಂಕ್ರಾಮಿಕವು ಬಹುತೇಕ ನಿಯಂತ್ರಣದಲ್ಲಿದೆ. 140 ಕೋಟಿ ಜನಸಂಖ್ಯೆಯ ಚೀನಾದ ಅಧಿಕೃತ ಕೊರೋನ ವೈರಸ್ ಸಾವಿನ ಸಂಖ್ಯೆ 4,634 ಆಗಿದೆ. ಇದು ಇತರ ಹಲವಾರು ಸಣ್ಣ ದೇಶಗಳ ಸಾವಿನ ಸಂಖ್ಯೆಗಿಂತ ತುಂಬಾ ಕಡಿಮೆಯಾಗಿದೆ.

ಆದರೆ, ಚೀನಾದ ಅಂಕಿಸಂಖ್ಯೆಗಳು ಎಷ್ಟು ವಿಶ್ವಾಸಾರ್ಹ ಎಂಬ ಸಂದೇಹ ಜಗತ್ತನ್ನು ಕಾಡುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News