ಅಮೆರಿಕ ಶಿಕ್ಷಿತರಿಗೆ ಎಚ್-1ಬಿ ವೀಸಾದಲ್ಲಿ ಆದ್ಯತೆ: ಅಮೆರಿಕ ಕಾಂಗ್ರೆಸ್‌ನಲ್ಲಿ ನಿರ್ಣಯ ಮಂಡನೆ

Update: 2020-05-23 17:34 GMT

ವಾಶಿಂಗ್ಟನ್, ಮೇ 23: ಉನ್ನತ ಕೌಶಲ್ಯ ಹೊಂದಿರುವ ವಿದೇಶಿ ಉದ್ಯೋಗಿಗಳಿಗೆ ನೀಡುವ ವೀಸಾ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಗಳನ್ನು ಸೂಚಿಸುವ ನಿರ್ಣಯವೊಂದನ್ನು ಅಮೆರಿಕ ಸಂಸತ್ತಿನ ಎರಡೂ ಪಕ್ಷಗಳ ಸಂಸದರು ಶುಕ್ರವಾರ ಎರಡೂ ಸದನಗಳಲ್ಲಿ ಮಂಡಿಸಿದ್ದಾರೆ. ಎಚ್-1ಬಿ ವೀಸಾಗಳನ್ನು ನೀಡುವಾಗ ಅಮೆರಿಕದಲ್ಲಿ ಶಿಕ್ಷಣ ಪಡೆದಿರುವ ತಂತ್ರಜ್ಞಾನ ಪದವೀಧರರಿಗೆ ಆದ್ಯತೆ ನೀಡಬೇಕು ಎಂಬುದಾಗಿ ಈ ನಿರ್ಣಯವು ಒತ್ತಾಯಿಸುತ್ತದೆ.

ಎಚ್-1ಬಿ ಮತ್ತು ಎಲ್-1 ವೀಸಾ ಸುಧಾರಣೆ ಕಾಯ್ದೆಯನ್ನು ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಮತ್ತು ಸೆನೆಟ್‌ನಲ್ಲಿ ಮಂಡಿಸಲಾಗಿದೆ. ಎಚ್-1ಬಿ ವೀಸಾಗಳ ವಾರ್ಷಿಕ ವಿತರಣೆಯ ವೇಳೆ, ಮೊದಲ ಬಾರಿಗೆ ಅಮೆರಿಕ ಪೌರತ್ವ ಮತ್ತು ವಲಸೆ ಸೇವೆಗಳ ವಿಭಾಗವು ನಿರ್ದಿಷ್ಟ ಗುಂಪಿಗೆ ಆದ್ಯತೆ ನೀಡಬೇಕೆಂದು ಈ ನಿರ್ಣಯ ಬಯಸುತ್ತದೆ.

ಎಚ್-1ಬಿ ವೀಸಾ ವಿತರಣೆಯಲ್ಲಿ ಅಮೆರಿಕದಲ್ಲಿ ಶಿಕ್ಷಣ ಪಡೆದ ಶ್ರೇಷ್ಠ ಮತ್ತು ಅತ್ಯಂತ ಬುದ್ಧಿವಂತ ವಿದ್ಯಾರ್ಥಿಗಳಿಗೆ ಆದ್ಯತೆ ನೀಡಬೇಕೆಂದು ನೂತನ ವ್ಯವಸ್ಥೆಯು ಬಯಸುತ್ತದೆ.

ಮಸೂದೆಯನ್ನು ಸೆನೆಟ್‌ನಲ್ಲಿ ಸೆನೆಟರ್‌ಗಳಾದ ಚಕ್ ಗ್ರಾಸ್ಲಿ ಮತ್ತು ಡಿಕ್ ಡರ್ಬಿನ್ ಮಂಡಿಸಿದರೆ, ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನಲ್ಲಿ ಕಾಂಗ್ರೆಸ್ ಸದಸ್ಯರಾದ ಬಿಲ್ ಪ್ಯಾಸ್ಕ್ರಲ್, ಪೌಲ್ ಗೋಸರ್, ರೋ ಖನ್ನಾ. ಫ್ರಾಂಕ್ ಪ್ಯಾಲೋನ್ ಮತ್ತು ಲ್ಯಾನ್ಸ್ ಗುಡನ್ ಮಂಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News