ಹಾಂಕಾಂಗ್‌ನ ವಿಶೇಷ ವ್ಯಾಪಾರ ಸ್ಥಾನಮಾನ ವಾಪಸ್

Update: 2020-05-23 17:37 GMT

ವಾಶಿಂಗ್ಟನ್, ಮೇ 23: ಹಾಂಕಾಂಗ್‌ನ ಸ್ವಾಯತ್ತೆಯನ್ನು ರದ್ದುಪಡಿಸಲು ಚೀನಾ ತೆಗೆದುಕೊಂಡಿರುವ ಕ್ರಮದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಅಮೆರಿಕವು, ಹಾಂಕಾಂಗ್‌ಗೆ ನೀಡಿರುವ ವಿಶೇಷ ವ್ಯಾಪಾರ ಸ್ಥಾನಮಾನವನ್ನು ವಾಪಸ್ ಪಡೆಯುವುದಾಗಿ ಶುಕ್ರವಾರ ಬೆದರಿಕೆ ಹಾಕಿದೆ.

ಅಮೆರಿಕ ಮತ್ತು ಚೀನಾ ನಡುವೆ ಈಗಾಗಲೇ ನೆಲೆಸಿರುವ ಉದ್ವಿಗ್ನತೆಯು ಈಗ ಹಾಂಕಾಂಗ್ ವಿಷಯದಲ್ಲಿ ಮತ್ತೊಮ್ಮೆ ತಾರಕಕ್ಕೇರಿದೆ. ಹಾಂಕಾಂಗ್ ವಿಷಯದಲ್ಲಿ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವಂತೆ ಅಮೆರಿಕದ ಸಂಸದರು ತಮ್ಮ ಸರಕಾರವನ್ನು ಒತ್ತಾಯಿಸುತ್ತಿದ್ದಾರೆ.

ಚೀನಾ ಪ್ರಸ್ತಾಪಿಸಿರುವ ಹಾಂಕಾಂಗ್ ರಾಷ್ಟ್ರೀಯ ಭದ್ರತಾ ಕಾನೂನು, ಪ್ರಜಾಪ್ರಭುತ್ವಕ್ಕಾಗಿ ಹಾಗೂ ಹೆಚ್ಚಿನ ಸ್ವಾತಂತ್ರ್ಯಗಳಿಗಾಗಿ ಒತ್ತಾಯಿಸಿ ಧರಣಿ ನಡೆಸುವುದನ್ನು ದೇಶದ್ರೋಹವಾಗಿ ಪರಿಗಣಿಸುತ್ತದೆ ಹಾಗೂ ಅಂಥ ಹೋರಾಟಗಳಲ್ಲಿ ಪಾಲ್ಗೊಂಡವರಿಗೆ ಕಠಿಣ ಶಿಕ್ಷೆಗಳನ್ನು ನೀಡುತ್ತದೆ.

ಕಳೆದ ವರ್ಷವಿಡೀ ನಡೆದ ಬೃಹತ್ ಪ್ರಜಾಪ್ರಭುತ್ವ ಪರ ಚಳವಳಿಗಳ ಹಿನ್ನೆಲೆಯಲ್ಲಿ, ಹಾಂಕಾಂಗನ್ನು ತನ್ನ ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದಕ್ಕಾಗಿ ಚೀನಾ ನೂತನ ಕಾನೂನು ಜಾರಿಗೆ ತರಲು ಮುಂದಾಗಿದೆ ಎನ್ನಲಾಗಿದೆ.

ಹಾಂಕಾಂಗ್ ಸ್ವಾಯತ್ತೆಗೆ ಮರಣ ಗಂಟೆ: ಅಮೆರಿಕ ವಿದೇಶ ಕಾರ್ಯದರ್ಶಿ ಮೈಕ್ ಪಾಂಪಿಯೊ

ಹಾಂಕಾಂಗ್‌ನ ಸುವ್ಯವಸ್ಥಿತ ಶಾಸಕಾಂಗ ಪ್ರಕ್ರಿಯೆಯನ್ನು ಹೊರಗಿಟ್ಟು ಹಾಗೂ ಹಾಂಕಾಂಗ್ ಜನರ ಇಚ್ಛೆಯನ್ನು ಕಡೆಗಣಿಸಿ ನೂತನ ರಾಷ್ಟ್ರೀಯ ಭದ್ರತಾ ಕಾನೂನನ್ನು ಜಾರಿಗೊಳಿಸಲು ಚೀನಾ ಮುಂದಾಗಿರುವುದು, ಹಾಂಕಾಂಗ್‌ಗೆ ಗರಿಷ್ಠ ಸ್ವಾಯತ್ತೆಯನ್ನು ನೀಡುವುದಾಗಿ ಚೀನಾ ನೀಡಿರುವ ಭರವಸೆಯ ಮರಣ ಗಂಟೆಯಾಗಿದೆ ಎಂದು ಅಮೆರಿಕದ ವಿದೇಶ ಕಾರ್ಯದರ್ಶಿ ಮೈಕ್ ಪಾಂಪಿಯೊ ಶುಕ್ರವಾರ ಹೇಳಿದ್ದಾರೆ.

ಕಳೆದ ವರ್ಷ ಹಾಂಕಾಂಗ್‌ನಲ್ಲಿ ನಡೆದ ಪ್ರಜಾಪ್ರಭುತ್ವ ಪರ ಚಳವಳಿಗೆ ಬೆಂಬಲ ಸೂಚಿಸಿ ಅಮೆರಿಕದ ಸಂಸತ್ತು ಕಾನೂನೊಂದನ್ನು ಅಂಗೀಕರಿಸಿತ್ತು. ಆ ಕಾನೂನಿನ ಪ್ರಕಾರ, ಹಾಂಕಾಂಗ್‌ನ ವಿಶೇಷ ವ್ಯಾಪಾರ ಸ್ಥಾನಮಾನ ಮುಂದುವರಿಯಬೇಕಾದರೆ, ಹಾಂಕಾಂಗ್‌ನಲ್ಲಿ ಸ್ವಾಯತ್ತೆ ನೆಲೆಸಿದೆ ಎಂಬುದಾಗಿ ಅಮೆರಿಕದ ವಿದೇಶ ಇಲಾಖೆಯು ಪ್ರಮಾಣಪತ್ರ ನೀಡಬೇಕಾಗುತ್ತದೆ.

ಆದರೆ, ಚೀನಾದ ಈ ಕ್ರಮದಿಂದಾಗಿ ಇಂಥ ಪ್ರಮಾಣಪತ್ರ ನೀಡಲು ಅಮೆರಿಕಕ್ಕೆ ಕಷ್ಟವಾಗಬಹುದು ಎಂದು ಪಾಂಪಿಯೊ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News