ಲಾಕ್‌ಡೌನ್ ಉಲ್ಲಂಘಿಸಿ ಧಾರ್ಮಿಕ ಸಭೆ: ಸ್ವಘೋಷಿತ ದೇವಮಾನವ ಧಾತಿ ಮಹಾರಾಜ್ ವಿರುದ್ಧ ಪ್ರಕರಣ

Update: 2020-05-23 17:45 GMT

ಹೊಸದಿಲ್ಲಿ, ಮೇ. 23: ಕೋವಿಡ್-19 ಲಾಕ್‌ಡೌನ್ ಕುರಿತ ಸರಕಾರಿ ಮಾರ್ಗದರ್ಶಿ ಸೂತ್ರಗಳನ್ನು ಉಲ್ಲಂಘಿಸಿದ ಹಾಗೂ ಧಾರ್ಮಿಕ ಸಭೆಯನ್ನು ಆಯೋಜಿಸಿದ್ದಕ್ಕಾಗಿ ಸ್ವಯಂಘೋಷಿತ ದೇವಮಾನವ ದಾತಿ ಮಹಾರಾಜ್ ಹಾಗೂ ಆತನ ಸಹಚರರ ವಿರುದ್ಧ ದಿಲ್ಲಿ ಪೊಲೀಸರು ಶನಿವಾರ ಪ್ರಕರಣ ದಾಖಲಿಸಿದ್ದಾರೆ.

ದಕ್ಷಿಣ ದಿಲ್ಲಿಯ ಮೆಹ್ರೌಲಿಯಲ್ಲಿನ ಶನಿಧಾಮ್ ದೇವಾಲಯದಲ್ಲಿ ಧಾತಿ ಮಹಾರಾಜ್ ಆಯೋಜಿಸಿದ ಸಭೆಯಲ್ಲಿ 30ಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದರು ಹಾಗೂ ಅವರಲ್ಲಿ ಹೆಚ್ಚಿನವರು ಮಾಸ್ಕ್‌ಗಳನ್ನು ಧರಿಸಿರಲಿಲ್ಲ ಎನ್ನಲಾಗಿದೆ.

 ಕಾರ್ಯಕ್ರಮದಲ್ಲಿ ಪಾಲ್ಗೊಂಡ ಕೆಲವರು ಸಮಾವೇಶದ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದರು. ಆನಂತರ ದಿಲ್ಲಿ ಪೊಲೀಸರು ಧಾತಿಮಹಾರಾಜ್ ವಿರುದ್ಧ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದ್ದರು. ಆದಾಗ್ಯೂ ಆತನನ್ನು ಈವರೆಗೆ ಬಂಧಿಸಿಲ್ಲವೆಂದು ತಿಳಿದುಬಂದಿದೆ.

 ಧಾತಿ ಮಹಾರಾಜ್ ವಿರುದ್ಧ ಭಾರತೀಯ ದಂಡಸಂಹಿತೆ, ವಿಪತ್ತು ನಿರ್ವಹಣಾ ಕಾಯ್ದೆ ಹಾಗೂ ಸೋಂಕುರೋಗಗಳ ಕಾಯ್ದೆಯ ವಿವಿಧ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಲಾಗಿದೆಯೆಂದು ದಕ್ಷಿಣ ದಿಲ್ಲಿಯ ಉಪ ಪೊಲೀಸ್ ಆಯುಕ್ತ ಅತುಲ್ ಠಾಕೂರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News