ಬಂದ್ ವಾತಾವರಣ: ಪೊಲೀಸರ ಸರ್ಪಗಾವಲು!

Update: 2020-05-24 05:09 GMT

ಮಂಗಳೂರು, ಮೇ 24: ಕೊರೋನ ಸೋಂಕು ವ್ಯಾಪಕದ ನಡುವೆಯೂ ಲಾಕ್‍ಡೌನ್ ಸಡಿಲಿಕೆಯಿಂದಾಗಿ ಕಳೆದ ಕೆಲವು ದಿನಗಳಿಂದ ನಿನ್ನೆ ಸಂಜೆಯವರೆಗೂ ಜನಸಂಚಾರ, ವಾಹನ ವಾಹನಗಳ ಸಂಚಾರದಿಂದ ತುಂಬಿದ್ದ ರಸ್ತೆಗಳು ಇಂದು ಬಿಕೋ ಎನ್ನುತ್ತಿವೆ. ನಗರಾದ್ಯಂತ ಬಂದ್‍ನ ವಾತಾರವಣವಿದ್ದು, ಆಯಾಕಟ್ಟಿನ ಸ್ಥಳಗಳಲ್ಲಿ  ಪೊಲೀಸರು ಮತ್ತೆ ಸರ್ಪಗಾವಲು ಹಾಕಿದ್ದಾರೆ. 
ಬೆರಳೆಣಿಕೆಯಲ್ಲಿ ಖಾಸಗಿ ವಾಹನಗಳ ಸಂಚಾರ ಕಂಡು ಬರುತ್ತಿದ್ದು,  ಪೊಲೀಸರು ತಡೆದು ವಿಚಾರಣೆ ನಡೆಸುತ್ತಿದ್ದಾರೆ.  ಕೊರೋನ ಸೋಂಕಿನ ಭೀತಿಯ ಹಿನ್ನೆಲೆಯಲ್ಲಿ ಪ್ರಾರಂಭಿಕ ಹಂತದ ಲಾಕ್‍ಡೌನ್ ವೇಳೆ ಕಂಡುಬಂದಿದ್ದ ವಾತಾವರಣ ಮತ್ತೆ ಮರುಕಳಿಸಿದಂತೆ ಭಾಸವಾಗುತ್ತಿದೆ.  ಅಂಗಡಿ ಮುಂಗಟ್ಟುಗಳು ಮುಚ್ಚಿವೆ. ರಾಜ್ಯ ಸರಕಾರದ ಆದೇಶದಂತೆ ಶನಿವಾರ ರಾತ್ರಿ 7 ಗಂಟೆಯಿಂದ ಸೋಮವಾರ ಬೆಳಗ್ಗೆ 7 ಗಂಟೆಯವರೆಗೆ ಸಂಪೂರ್ಣ ಲಾಕ್‍ಡೌನ್ ದ.ಕ. ಜಿಲ್ಲೆಯಲ್ಲೂ ಘೋಷಿಸಲಾಗಿದೆ. ಈ ಮಧ್ಯೆ ಪತ್ರಿಕೆ, ಹಾಲು, ತರಕಾರಿ, ಮೀನು, ಮಾಂಸ ಔಷಧ ಪೂರೈಕೆ ಅಥವಾ ಖರೀದಿಗೆ ಯಾವುದೇ ನಿರ್ಬಂಧ ಇಲ್ಲ ಎಂದು ಜಿಲ್ಲಾಡಳಿತ ತಿಳಿಸಿದೆ. ಹಾಗಿದ್ದರೂ ನಗರದ ಆಯಾ ಕಟ್ಟಿನ ಸ್ಥಳಗಳಲ್ಲಿ ಸಂಪೂರ್ಣ ಬಂದ್‍ನ ವಾತಾವರಣವಿದೆ.  ಒಳ ಪ್ರದೇಶಗಳಲ್ಲಿ ಕೆಲವೊಂದು ದಿನಸಿ, ಹಾಲಿನ ಅಂಗಡಿಗಳು ಮಾತ್ರ ಬಾಗಿಲು ತೆರೆದು ಕಾರ್ಯಾಚರಿಸುತ್ತಿವೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News