ಕೋವಿಡ್: ಸೋಂಕಿತರ ಸಂಖ್ಯೆ ಗರಿಷ್ಠ ಹೆಚ್ಚಳ; ಮತ್ತೆ 144 ಮಂದಿ ಬಲಿ

Update: 2020-05-24 05:24 GMT


ಹೊಸದಿಲ್ಲಿ, ಮೇ 24: ಶನಿವಾರ ದೇಶದಲ್ಲಿ ಮತ್ತೊಮ್ಮೆ ಗರಿಷ್ಠ ಸಂಖ್ಯೆಯ ಕೊರೋನಾ ಸೋಂಕು ಪ್ರಕರಣಗಳ ದಾಖಲಾಗಿದ್ದು, ಒಂದೇ ದಿನ 144 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.
ಒಂದು ಲಕ್ಷ ಪ್ರಕರಣಗಳು ದೇಶದಲ್ಲಿ ದಾಖಲಾದ ಕೇವಲ ಐದು ದಿನಗಳಲ್ಲಿ ಸೋಂಕಿತರ ಸಂಖ್ಯೆ 1.3 ಲಕ್ಷದ ಸನಿಹ ತಲುಪಿದೆ. ರಾಜ್ಯಗಳಿಂದ ಬಂದ ವರದಿಗಳ ಪ್ರಕಾರ ದೇಶದ ಕೋವಿಡ್-19 ವೈರಸ್ ಸೋಂಕಿತರ ನಿಖರ ಸಂಖ್ಯೆ 1,29,539. ದೇಶದಲ್ಲಿ ಸತತ ಏಳನೇ ದಿನ 130ಕ್ಕಿಂತ ಹೆಚ್ಚು ಮಂದಿ ಸೋಂಕಿನಿಂದ ಮೃತಪಟ್ಟಿದ್ದು, ಮೃತರ ಸಂಖ್ಯೆ 3870ಕ್ಕೇರಿದೆ.
ದೇಶದಲ್ಲಿ ಗರಿಷ್ಠ ಸಂಖ್ಯೆಯ ಪ್ರಕರಣಗಳು ಶನಿವಾರ ವರದಿಯಾದರೂ, ಮಹಾರಾಷ್ಟ್ರದಲ್ಲಿ ಅಲ್ಪ ಇಳಿಕೆ ಕಂಡುಬಂದಿದೆ. ಶುಕ್ರವಾರ 2940 ಪ್ರಕರಣಗಳು ಇಲ್ಲಿ ದಾಖಲಾಗಿದ್ದರೆ, ಶನಿವಾರ ಈ ಸಂಖ್ಯೆ 2608ಕ್ಕೆ ಇಳಿದಿದೆ. ಇದುವರೆಗೆ ಪರಿಸ್ಥಿತಿ ಗಂಭೀರ ಸ್ಥಿತಿ ತಲುಪದ ಕರ್ನಾಟಕ (216) ಮತ್ತು ಉತ್ತರಾಖಂಡ (92) ರಾಜ್ಯಗಳಲ್ಲಿ ಆತಂಕಕಾರಿ ಪ್ರಮಾಣದಲ್ಲಿ ಏರಿಕೆ ಕಂಡುಬಂದಿದೆ.

ಉಳಿದಂತೆ ತಮಿಳುನಾಡು (759), ದೆಹಲಿ (591), ಮಧ್ಯಪ್ರದೇಶ 282), ರಾಜಸ್ಥಾನ (248), ಉತ್ತರ ಪ್ರದೇಶ (282) ಮತ್ತು ಬಿಹಾರ (228) 200ಕ್ಕಿಂತ ಹೆಚ್ಚು ಪ್ರಕರಣಗಳನ್ನು ಕಂಡಿವೆ. ಶನಿವಾರ ಒಟ್ಟು 27 ರಾಜ್ಯಗಳಲ್ಲಿ ಹೊಸ ಪ್ರಕರಣಗಳು ವರದಿಯಾಗಿದ್ದು, ದೇಶಾದ್ಯಂತ ವೈರಸ್‌ನ ದಟ್ಟ ಛಾಯೆ ಹರಡಿದೆ ಎನ್ನುವುದರ ಸೂಚಕ ಇದಾಗಿದೆ. ಇದುವರೆಗೆ ಕೊರೋನಾ ಮುಕ್ತವಾಗಿದ್ದ ಸಿಕ್ಕಿಂನಲ್ಲೂ ಮೊದಲ ಸೋಂಕು ಪ್ರಕರಣ ವರದಿಯಾಗಿದೆ. ಮಹಾರಾಷ್ಟ್ರದಲ್ಲಿ ಸತತ ಏಳನೇ ದಿನ 2000ಕ್ಕಿಂತ ಅಧಿಕ ಪ್ರಕರಣಗಳು ವರದಿಯಾಗಿದ್ದು, ಒಟ್ಟು ಸೋಂಕಿತರ ಸಮಖ್ಯೆ 47190ಕ್ಕೇರಿದೆ. ರಾಜ್ಯದಲ್ಲಿ ಶನಿವಾರ 60 ಮಂದಿ ಮೃತಪಟ್ಟಿದ್ದು, ಒಟ್ಟು ಮೃತರ ಸಂಖ್ಯೆ 1577ಕ್ಕೇರಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News