×
Ad

ಕಾರ್ಕಳದ ಇಬ್ಬರು ಪೊಲೀಸರಲ್ಲಿ ಕೊರೋನ ಸೋಂಕು ಪತ್ತೆ

Update: 2020-05-24 12:57 IST

ಉಡುಪಿ, ಮೇ 24: ಕಾರ್ಕಳ ತಾಲೂಕಿನ ಇಬ್ಬರು ಪೊಲೀಸ್ ಸಿಬ್ಬಂದಿಗಳಲ್ಲಿ ಕೊರೋನ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಅಲ್ಲಿನ ನಾಲ್ಕು ಪೊಲೀಸ್ ಠಾಣಾ ಕಚೇರಿಗಳನ್ನು ಸೀಲ್‌ಡೌನ್ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಕಾರ್ಕಳ ಗ್ರಾಮಾಂತರ ಠಾಣೆಯ ಕಾನ್‌ಸ್ಟೇಬಲ್ ಹಾಗೂ ಅಜೆಕಾರು ಠಾಣೆಯ ಎಎಸ್‌ಐ ಅವರ ಗಂಟಲು ದ್ರವ ಮಾದರಿಯ ಪರೀಕ್ಷೆ ಪಾಸಿಟಿವ್ ಫಲಿತಾಂಶವನ್ನು ನೀಡಿರುವುದನ್ನು ಜಿಲ್ಲಾ ಆರೋಗ್ಯಾಧಿಕಾರಿ ದೃಢಪಡಿಸಿದ್ದಾರೆ. ಇವರಿಬ್ಬರನ್ನು ಚಿಕಿತ್ಸೆಗಾಗಿ ಉಡುಪಿಯ ಡಾ.ಟಿಎಂಎ ಪೈ ಕೋವಿಡ್ ಆಸ್ಪತ್ರೆಗೆ ಸೇರಿಸಲಾಗುತ್ತಿದೆ ಎಂದವರು ತಿಳಿಸಿದರು.
 ಈ ಹಿನ್ನೆಲೆಯಲ್ಲಿ ಅಜೆಕಾರು ಪೊಲೀಸ್ ಠಾಣೆ ಅಲ್ಲದೇ ಕಾರ್ಕಳ ನಗರ, ಕಾರ್ಕಳ ಗ್ರಾಮಾಂತರ ಹಾಗೂ ಕಾರ್ಕಳ ಸರ್ಕಲ್ ಇನ್‌ಸ್ಪೆಕ್ಟರ್ ಕಚೇರಿಗಳನ್ನು ಸೀಲ್‌ಡೌನ್ ಮಾಡಲಾಗಿದೆ. ಈ ಮೂರು ಕಚೇರಿಗಳು ಒಂದೇ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿವೆ.

ಒಟ್ಟಾರೆಯಾಗಿ ಇಲ್ಲಿನ ನಾಲ್ಕು ಕಚೇರಿಗಳ ಹಿರಿಯ ಅಧಿಕಾರಿಗಳು ಸೇರಿದಂತೆ ಒಟ್ಟು 80 ಸಿಬ್ಬಂದಿಗಳನ್ನು ಕ್ವಾರಂಟೈನ್‌ನಲ್ಲಿರಿಸಲಾಗುತ್ತಿದೆ. ಪಾಸಿಟಿವ್ ಬಂದ ಇಬ್ಬರು ಪೊಲೀಸ್ ಸಿಬ್ಬಂದಿಗಳು ಚೆಕ್‌ಪೋಸ್ಟ್ ಹಾಗೂ ಕ್ವಾರಂಟೈನ್ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸಿದ್ದರು ಎಂದು ತಿಳಿದುಬಂದಿದ್ದು, ಆದರೆ ಯಾರ ಸಂಪರ್ಕದಿಂದ ಸೋಂಕು ತಗಲಿದೆ ಎಂದು ಇನ್ನಷ್ಟೆ ಗೊತ್ತಾಗಬೇಕಿದೆ. ಗಂಟಲು ದ್ರವ ಪರೀಕ್ಷೆಯಲ್ಲಿ ಉಳಿದೆಲ್ಲ ಸಿಬ್ಬಂದಿಗಳ ವರದಿ ನೆಗೆಟಿವ್ ಬಂದಿದ್ದರೆ, ಇವರಿಬ್ಬರದ್ದು ಮಾತ್ರ ಪಾಸಿಟಿವ್ ಆಗಿದೆ ಎಂದು ಆರೋಗ್ಯ ಇಲಾಖೆಯಿಂದ ತಿಳಿದುಬಂದಿದೆ. ಕಟ್ಟಡಗಳನ್ನು ಸಂಪೂರ್ಣವಾಗಿ ಸ್ಯಾನಿಟೈಸ್ ಮಾಡಿದ ಬಳಿಕವಷ್ಟೇ ಠಾಣೆಯನ್ನು ಪುನಹ ತೆರೆಯಲು ನಿರ್ಧರಿಸಲಾಗಿದೆ. ಸದ್ಯಕ್ಕೆ ಪ್ರತ್ಯೇಕ ಕಟ್ಟಡದಲ್ಲಿ ಬದಲಿ ಪೊಲೀಸರನ್ನು ಬಳಸಿ ಕಾರ್ಯನಿರ್ವಹಿಸಲು ಚಿಂತನೆ ನಡೆಸಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News