ಉ.ಪ್ರ.ಸಿಎಂ ಆದಿತ್ಯನಾಥ್ ಹತ್ಯೆ ಬೆದರಿಕೆ:ಮುಂಬೈನಲ್ಲಿ ಯುವಕನ ಬಂಧನ

Update: 2020-05-24 08:00 GMT

ಲಕ್ನೋ,ಮೇ 24: ಉತ್ತರ ಪ್ರದೇಶ ಸರಕಾರದ ಸೋಷಿಯಲ್‌ ಮೀಡಿಯಾ ಹೆಲ್ಪ್ ಡೆಸ್ಕ್‌ಗೆ ಕರೆ ಮಾಡಿ ಮುಖ್ಯಮಂತ್ರಿ ಆದಿತ್ಯನಾಥ್ ಅವರನ್ನು ಬಾಂಬ್ ಸ್ಫೋಟಿಸಿ ಕೊಲ್ಲುವುದಾಗಿ ಬೆದರಿಕೆಯೊಡಿದ್ದ ಎನ್ನಲಾಗಿರುವ ಯುವಕನೋರ್ವನನ್ನು ಮಹಾರಾಷ್ಟ್ರ ಭಯೋತ್ಪಾದನೆ ನಿಗ್ರಹ ದಳ (ಎಟಿಎಸ್)ವು ಬಂಧಿಸಿದೆ. ಆರೋಪಿ ಕಮ್ರಾನ್ ಅಮಿನ್(25)ನನ್ನು ರವಿವಾರ ಇಲ್ಲಿಯ ನ್ಯಾಯಾಲಯದಲ್ಲಿ ಹಾಜರು ಪಡಿಸಲಾಗಿದ್ದು,ಆತನನ್ನು ಉತ್ತರ ಪ್ರದೇಶ ವಿಶೇಷ ಕಾರ್ಯಪಡೆ(ಎಸ್‌ಟಿಎಫ್)ಗೆ ಹಸ್ತಾಂತರಿಸಲಾಗಿದೆ.

ಕಮ್ರಾನ್ ಶುಕ್ರವಾರ ಈ ಕರೆಯನ್ನು ಮಾಡಿದ್ದು,ಲಕ್ನೋದ ಗೋಮತಿ ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು ಮತ್ತು ಉತ್ತರ ಪ್ರದೇಶ ಎಸ್‌ಟಿಎಫ್ ತನಿಖೆಯನ್ನು ಆರಂಭಿಸಿತ್ತು.

 ಉತ್ತರ ಪ್ರದೇಶ ಎಸ್‌ಟಿಎಫ್ ನೀಡಿದ್ದ ಮಾಹಿತಿಗಳ ಮೇರೆಗೆ ಕಾರ್ಯಾಚರಣೆಗೆ ಇಳಿದಿದ್ದ ಮಹಾರಾಷ್ಟ್ರ ಎಟಿಎಸ್ ಕಮ್ರಾನ್‌ನನ್ನು ಶನಿವಾರ ಚುನಾಭಟ್ಟಿಯಲ್ಲಿ ಬಂಧಿಸಿದೆ. ಬೆದರಿಕೆ ಕರೆ ಮಾಡಲು ಬಳಕೆಯಾಗಿದ್ದ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿತ್ತಾದರೂ ಡಂಪ್ ಡಾಟಾವನ್ನು ಆಧರಿಸಿ ಆರೋಪಿಯನ್ನು ಬಂಧಿಸುವಲ್ಲಿ ಎಟಿಎಸ್ ಅಧಿಕಾರಿಗಳು ಯಶಸ್ವಿಯಾಗಿದ್ದರು. ಕಮ್ರಾನ್ ಅಪರಾಧವನ್ನು ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ.

ಮೂಲತಃ ದಕ್ಷಿಣ ಮುಂಬೈನ ನಳಬಝಾರ್ ನಿವಾಸಿಯಾದ ಕಮ್ರಾನ್ ಮನೆ ರಿಪೇರಿ ನಡೆಯುತ್ತಿರುವ ಹಿನ್ನಲೆಯಲ್ಲಿ ಚುನಾಭಟ್ಟಿಗೆ ಸ್ಥಳಾಂತರಗೊಂಡಿದ್ದ. ಝವೇರಿ ಬಝಾರ್‌ನಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿದ್ದ ಆತ 2017ರಲ್ಲಿ ಮಿದುಳು ಬಳ್ಳಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಮತ್ತು ಆಗಿನಿಂದ ನಿರುದ್ಯೋಗಿಯಾಗಿದ್ದ. ಟ್ಯಾಕ್ಸಿ ಚಾಲಕರಾಗಿದ್ದ ಆತನ ತಂದೆ ಎರಡು ತಿಂಗಳ ಹಿಂದೆ ಮೃತಪಟ್ಟಿದ್ದಾರೆ. ಕಮ್ರಾನ್ ಮಾದಕದ್ರವ್ಯ ವ್ಯಸನಿಯಾಗಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News