ಉಡುಪಿ ನಗರದಲ್ಲಿ ಸಂಪೂರ್ಣ ಬಂದ್ ವಾತಾವರಣ

Update: 2020-05-24 08:04 GMT

ಉಡುಪಿ, ಮೇ 24: ಉಡುಪಿ ನಗರದಾದ್ಯಂತ ಇಂದು ಬೆಳಗಿನಿಂದ ಸಂಪೂರ್ಣ ಲಾಕ್‌ಡೌನ್ ಕಾರ್ಯರೂಪಕ್ಕೆ ಬಂದಿದೆ. ಒಂದರ್ಥದಲ್ಲಿ ಉಡುಪಿ ಇಡೀ ಕರ್ಪ್ಯೂ ವಿಧಿಸಿದ ವಾತಾವರಣ ಕಂಡುಬರುತ್ತಿದೆ. ಪೊಲೀಸ್ ಬಿಗುಭದ್ರತೆ ಇದ್ದು, ಮೆಡಿಕಲ್ ಶಾಪ್‌ಗಳು, ಹಾಲಿನ ಅಂಗಡಿಗಳನ್ನು ಹೊರತು ಪಡಿಸಿ ಉಳಿದಂತೆ ಯಾವುದೇ ಅಂಗಡಿ ಮುಂಗಟ್ಟು ಇಂದು ಬಾಗಿಲು ತೆರೆಯಲಿಲ್ಲ.
 ಇಡೀ ನಗರದಲ್ಲಿ ಜನ ಸಂಚಾರವೇ ಸ್ಥಬ್ಧಗೊಂಡಂತೆ ಬಾಸವಾಗುತ್ತಿದೆ. ಕೈಬೆರಳೆಣಿಕೆಯ ಮಂದಿ ದ್ವಿಚಕ್ರ ವಾಹನಗಳಲ್ಲಿ ಆಗಾಗ ಸಂಚರಿಸುವುದನ್ನು ಹೊರತು ಪಡಿಸಿದರೆ ಇಡೀ ನಗರದಲ್ಲಿ ಯಾವುದೇ ವಾಹನಗಳ ಓಡಾಟ ಕಂಡುಬರುತ್ತಿಲ್ಲ. ಬಸ್ಸು, ಕಾರು, ಟ್ಯಾಕ್ಸಿ, ರಿಕ್ಷಾ ಎಲ್ಲವುಗಳ ಸಂಚಾರ ಸಂಪೂರ್ಣವಾಗಿ ನಿಂತಿದೆ. ಜನರು ಸಹ ರಸ್ತೆಗಳಿಯದೇ ಸಂಪೂರ್ಣ ಬಂದ್‌ನ ವಾತಾವರಣ ಕಂಡುಬರುತ್ತಿದೆ.

ಕೊರೋನ ವಿರುದ್ಧದ ಹೋರಾಟದಲ್ಲಿ ದೇಶಾದ್ಯಂತ ವಿಧಿಸಲಾದ ಲಾಕ್‌ಡೌನ್‌ನಲ್ಲಿ ಕೆಲವಾರು ರಿಯಾಯಿತಿಗಳನ್ನು ನೀಡಿದ ಬಳಿಕ ಒಮ್ಮೆಂದೊಮ್ಮೆ ಪಾಸಿಟಿವ್ ಪ್ರಕರಣಗಳು ಹೆಚ್ಚಿದ ಹಿನ್ನೆಲೆಯಲ್ಲಿ ಶನಿವಾರ ಸಂಜೆಯಿಂದ ಸೋಮವಾರ ಬೆಳಗಿನವರೆಗೆ ಮತ್ತೆ ಕಟ್ಟುನಿಟ್ಟಿನ ಲಾಕ್‌ಡೌನ್‌ನ್ನು ರಾಜ್ಯ ಸರಕಾರ ಘೋಷಿಸಿದ್ದು, ಇಂದು ಮುಸ್ಲಿಮರ ಪವಿತ್ರ ಹಬ್ಬದ ಹೊರತಾಗಿಯೂ ಯಾವುದೇ ಚಟುವಟಿಕೆ ಕಂಡುಬರುತ್ತಿಲ್ಲ.
ಇದೇ ಪರಿಸ್ಥಿತಿ ಉಡುಪಿ ಜಿಲ್ಲೆಯಾದ್ಯಂತ ಕಂಡುಬರುತ್ತಿದೆ. ಆಯಕಟ್ಟಿನ ಸ್ಥಳಗಳಲ್ಲಿ ಪೊಲೀಸರು ಸರ್ಪಗಾವಲು ಹಾಕಿದ್ದಾರೆ. ಅಲ್ಲಲ್ಲಿ ಪೊಲೀಸರ ಉಪಸ್ಥಿತಿ ಹೊರತು ಪಡಿಸಿದರೆ ಜನರ ಸಂಚಾರವಂತೂ ಇಲ್ಲವೇ ಇಲ್ಲ ಎಂಬಷ್ಟು ವಿರಳವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News