ಉಡುಪಿ: ತುಂಬು ಗರ್ಭಿಣಿಯಲ್ಲಿ ಕೊರೋನ ಪತ್ತೆ!

Update: 2020-05-24 11:56 GMT

ಉಡುಪಿ, ಮೇ 24: ಉಡುಪಿ ಜಿಲ್ಲೆಯಲ್ಲಿ ಇಂದು ತುಂಬು ಗರ್ಭಿಣಿ ಹಾಗೂ ಮೂರು ಪೊಲೀಸ್ ಸಿಬ್ಬಂದಿಗಳು ಸೇರಿದಂತೆ ಒಟ್ಟು 18 ಮಂದಿಯಲ್ಲಿ ಕೊರೋನ ಪಾಸಿಟಿವ್ ಪ್ರಕರಣ ವರದಿಯಾಗಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ. ಇದರಿಂದ ನಿನ್ನೆಯವರೆಗೆ ಇದ್ದ ಜಿಲ್ಲೆಯ 53 ಸಾಸಿಟಿವ್ ಪ್ರಕರಣಗಳ ಸಂಖ್ಯೆ ಇಂದು 71ಕ್ಕೆ ನೆಗೆದಿದ್ದು, ಪಕ್ಕದ ದಕ್ಷಿಣ ಕನ್ನಡವನ್ನೂ ಹಿಂದಿಕ್ಕಿ ಸಾಗಿದೆ.
ಇಂದು ವರದಿಯಾದ 18ರಲ್ಲಿ 14 ಪ್ರಕರಣಗಳು ಹೊರರಾಜ್ಯಗಳಿಂದ ಅಂದರೆ ಮಹಾರಾಷ್ಟ್ರ ಮುಂಬಯಿ ಹಾಗೂ ತೆಲಂಗಾಣದಿಂದ ಬಂದಿರುವ ವರದ್ದು. ಉಳಿದ ನಾಲ್ಕು ಪ್ರಕರಣಗಳು ಜಿಲ್ಲೆಯ ಒಳಗಿನಿಂದಲೇ ವರದಿಯಾಗಿದೆ. ಅದರಲ್ಲೂ 51, 41 ಹಾಗೂ 29 ವರ್ಷ ಪ್ರಾಯದ ಮೂರು ಮಂದಿ ಪೊಲೀಸ್ ಕಾನ್‌ಸ್ಟೇಬಲ್‌ಗಳಿಗೆ ಕೊರೋನ ಸೋಂಕು ತಗಲಿರುವುದು ಕಂಡುಬಂದಿದೆ. ಇವರು ಮೂವರನ್ನು ನಾವು ಚಿಕಿತ್ಸೆಗಾಗಿ ನಗರದ ಡಾ.ಟಿಎಂಎ ಪೈ ಕೋವಿಡ್ ಆಸ್ಪತ್ರೆಗೆ ದಾಖಲಿಸಿದ್ದೇವೆ ಎಂದರು.
ಅಜೆಕಾರು ಠಾಣೆಯ ಎಎಸ್‌ಐ, ಕಾರ್ಕಳ ಗ್ರಾಮಾಂತರ ಹಾಗೂ ಬ್ರಹ್ಮಾವರ ಠಾಣೆಗಳ ಕಾನ್‌ಸ್ಟೇಬಲ್‌ಗಳಲ್ಲಿ ಕೊರೋನ ಪಾಸಿಟಿವ್ ಕಂಡುಬಂದಿದ್ದು, ಇವುಗಳನ್ನು ಮುಚ್ಚಿದ್ದೇವೆ. ಸರಕಾರಿ ಮಾರ್ಗಸೂಚಿಯ ಪ್ರಕಾರ ಇವುಗಳನ್ನು ಸ್ಯಾನೆಟೈಸ್ ಮಾಡಿ 48 ಗಂಟೆ ಬಿಟ್ಟು ಪುನಹ ತೆರೆಯಬೇಕಾಗುತ್ತದೆ. ಇದರೊಂದಿಗೆ ಮೂವರ ನಿಕಟ ಸಂಪರ್ಕಕ್ಕೆ ಬಂದವರನ್ನು ಗುರುತಿಸುವ ಕೆಲಸ ಮಾಡಲಾಗುತ್ತದೆ. ಎಸ್ಪಿಯವರು ಈ ಬಗ್ಗೆ ವಿಶೇಷ ನಿಗಾ ವಹಿಸಲಿದ್ದಾರೆ ಎಂದು ಜಗದೀಶ್ ತಿಳಿಸಿದರು.
ಜಿಲ್ಲೆಯ ಮಟ್ಟಿಗೆ ತುಂಬಾ ಮಹತ್ವದ ಬೆಳವಣಿಗೆ ಎಂದರೆ ಕಾರ್ಕಳ ತಾಲೂಕಿನ ತುಂಬು ಗರ್ಭಿಣಿಯೊಬ್ಬರಿಗೆ ಕೊರೋನ ಸೋಂಕು ತಗಲಿರುವುದು. 22ರ ಹರೆಯದ ಆಕೆಗೆ ಎಲ್ಲಿಂದ, ಹೇಗೆ, ಯಾರ ಸಂಪರ್ಕದಿಂದ ಸೋಂಕು ಬಂದಿದೆ ಎಂಬ ಬಗ್ಗೆ ಕೂಲಂಕಷ ತನಿಖೆ ನಡೆಯುತ್ತಿದೆ. 9ತಿಂಗಳ ಗರ್ಭಿಣಿಯಾಗಿರುವ ಆಕೆಗೆ ಇನ್ನು 10-15ದಿನಗಳಲ್ಲಿ ಹೆರಿಗೆಯಾಗಲಿದೆ. ಹೀಗಾಗಿ ಆಕೆಯ ಬಗ್ಗೆ ವಿಶೇಷ ನಿಗಾ ವಹಿಸಲಿದ್ದೇವೆ. ಜೊತೆಗೆ ಆಕೆಗೆ ಹೇಗೆ ಸೋಂಕು ಬಂದಿದೆ ಎಂಬ ಬಗ್ಗೆಯೂ ತನಿಖೆ ನಡೆಸಲಿದ್ದೇವೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News