ಬಂಟ್ವಾಳ: ನಿಶಾಂತ್ ಪ್ರಾಣ ಉಳಿಸಲು ಕೊನೆ ಕ್ಷಣದವರೆಗೆ ಪ್ರಯತ್ನಿಸಿದ ಆರೀಫ್ ಹೈವೇ

Update: 2020-05-24 15:49 GMT

ಬಂಟ್ವಾಳ, ಮೇ 24: ಆತ್ಮಹತ್ಯೆ ಮಾಡಲು ನದಿಗೆ ಹಾರಿದ ಯುವಕನೋರ್ವನ ಜೀವ ಉಳಿಸಲು ನದಿಗೆ ಧುಮುಕಿದ ಯುವಕರ ತಂಡವೊಂದು ಮಾಡಿದ ಅಪಾಯಕಾರಿ ಹಾಗೂ ಮಾನವೀಯ ಪ್ರಯತ್ನಕ್ಕೆ ಕರಾವಳಿಯಾದ್ಯಂತ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. 

ಬಂಟ್ವಾಳ ತಾಲೂಕಿನ ಕಲ್ಲಡ್ಕ ಸಮೀಪದ ಕೊಳಕೀರು ನಿವಾಸಿ ನಿಶಾಂತ್ ಆತ್ಮಹತ್ಯೆ ಮಾಡಿಕೊಂಡ ಯುವಕ. ಇವರು ರವಿವಾರ ತಾಲೂಕಿನ ಪಾಣೆಮಂಗಳೂರು ಹಳೆ ಸೇತುವೆಯಿಂದ ನೇತ್ರಾವತಿ ನದಿಗೆ ಹಾರಿದ್ದಾರೆ.‌ ವಿಷಯ ತಿಳಿದು ಧಾವಿಸಿ ಬಂದ ನದಿ ಸಮೀಪದ ನಿವಾಸಿ ಮುಹಮ್ಮದ್ ಗೂಡಿನಬಳಿ ಎಂಬವರು ನದಿಗೆ ಜಿಗಿದಿದ್ದಾರೆ. ಅವರ ಬೆನ್ನಿಗೆ ಇತರ ಮೂವರು ಯುವಕರು ನದಿಗೆ ಧುಮುಕಿ ನಿಶಾಂತ್ ಅವರನ್ನು ನೀರಿನಿಂದ ಮೇಲಕ್ಕೆತ್ತಿದ್ದಾರೆ. 

ಯುವಕನನ್ನು ನೀರಿನಿಂದ ಮೇಲೆ ತಂದ ಬಳಿಕ ಇಲ್ಲಿಗೆ ಸಮೀಪದ ಅಕ್ಕರಂಗಡಿ ನೆಹರೂ ನಗರದ ಹೈವೇ ಇನ್ ಹೊಟೇಲ್ ಮಾಲಕ ರಹೀಂ ಎಂಬವರ ಪುತ್ರ ಆರೀಫ್ ಹೈವೇ ಎಂಬವರು ನಿಶಾಂತ್ ಅವರ ಬಾಯಿಗೆ ತನ್ನ ಬಾಯಿಯನ್ನು ಇಟ್ಟು ಊದುವ ಮೂಲಕ ಉಸಿರಾಡುವಂತೆ ‌ಮಾಡಲು ಪ್ರಯತ್ನಿಸುತ್ತಿರುವ ವೀಡಿಯೊ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. 

ಮತೀಯತೆಗೆ ಕುಖ್ಯಾತಿಯಾಗಿರುವ ಕರಾವಳಿಯಲ್ಲಿ ಮತೀಯತೆ ಮರೆತು ಯುವಕನನ್ನು ರಕ್ಷಿಸಲು ಮಾನವೀಯತೆ ಮೆರೆದ ಯುವಕ ಆರೀಫ್ ಹೈವೇ ಹಾಗೂ ನದಿಗೆ ಧುಮುಕಿದ ಗೂಡಿನಬಳಿಯ ಮುಹಮ್ಮದ್, ಶಮೀರ್, ತೌಸೀಫ್, ಝಾಹಿದ್, ಅಕ್ಕರಂಗಡಿಯ ಮುಕ್ತಾರ್ ಅವರ ಕಾರ್ಯಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ. 

ನದಿಗೆ ಹಾರಿದ ಯುವಕನ ಪ್ರಾಣ ಉಳಿಸಲು ಯುವಕರ ತಂಡ ಸರ್ವ ಪ್ರಯತ್ನ ಮಾಡಿದ್ದರೂ ಯುವಕ ಕೊನೆ ಉಸಿರೆಳೆದಿದ್ದಾನೆ. 

ಯುವಕ ನದಿಗೆ ಹಾರಿದ ವಿಷಯ ತಿಳಿದಂತೆ ಓಡಿ ಬಂದು ನದಿಗೆ ಜಿಗಿದೆ. ಬಳಿಕ ಇತರ ಮೂವರು ಜಿಗಿದು ಯುವಕನನ್ನು ನೀರಿನಿಂದ ಮೇಲಕ್ಕೆತ್ತಿದೆವು. ಆದರೆ ಅವರ ಆಯುಷ್ಯ ಮುಗಿದಿತ್ತು. ಮನುಷ್ಯನ ಜೀವಕ್ಕೆ ದೊಡ್ಡ ಬೆಲೆ ಇದೆ. ಅದರಲ್ಲಿ ಜಾತಿ, ಧರ್ಮ ನೋಡಬಾರದು. ಈ ಹಿಂದೆಯೂ ನಾನು ನೀರಿಗೆ ಬಿದ್ದ ಕೆಲವರ ಜೀವ ಉಳಿಸಿದ್ದೇನೆ.‌ ಹಲವು ಮೃತದೇಹಗಳನ್ನು ನೀರಿನಿಂದ ತೆಗೆದಿದ್ದೇನೆ. ಅವರಲ್ಲಿ ಎಲ್ಲಾ ಜಾತಿ, ಧರ್ಮದವರೂ ಸೇರಿದ್ದಾರೆ. 

- ಮುಹಮ್ಮದ್, ಗೂಡಿನಬಳಿ ನಿವಾಸಿ

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News