ಉಡುಪಿ: ರವಿವಾರ 1,301 ಸ್ಯಾಂಪಲ್‌ಗಳು ಕೊರೋನ ಟೆಸ್ಟ್‌ಗೆ

Update: 2020-05-24 16:12 GMT

ಉಡುಪಿ, ಮೇ 24: ನೋವೆಲ್ ಕೊರೋನ ಸೋಂಕಿನ ಪರೀಕ್ಷೆಗಾಗಿ ಜಿಲ್ಲಾ ಆರೋಗ್ಯ ಇಲಾಖೆ, ರವಿವಾರ ಕೊರೋನ ಸೋಂಕಿನ ಗುಣಲಕ್ಷಣಗಳನ್ನು ಹೊಂದಿರುವ ಒಟ್ಟು 1301 ವ್ಯಕ್ತಿಗಳ ಗಂಟಲು ದ್ರವ ಮಾದರಿಗಳನ್ನು ಸೋಂಕಿನ ಪರೀಕ್ಷೆಗಾಗಿ ಪ್ರಯೋಗಾಲಯಗಳಿಗೆ ಕಳುಹಿಸಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸುಧೀರ್‌ ಚಂದ್ರ ಸೂಡ ಹೇಳಿದ್ದಾರೆ.

ರವಿವಾರ ಒಂದೇ ದಿನದಲ್ಲಿ 1246 ಸ್ಯಾಂಪಲ್‌ಗಳನ್ನು ಕೊರೋನ ಹಾಟ್‌ಸ್ಪಾಟ್ ಎನಿಸಿರುವ ಹೊರರಾಜ್ಯಗಳಿಂದ ಬಂದವರಿಂದ ಪರೀಕ್ಷೆಗಾಗಿ ಪಡೆಯಲಾಗಿದೆ. ಉಳಿದಂತೆ 28 ಮಂದಿ ಸೋಂಕಿತರ ಸಂಪರ್ಕಕ್ಕೆ ಬಂದವರು, ಎಂಟು ಮಂದಿ ತೀವ್ರ ಉಸಿರಾಟ ತೊಂದರೆಯವರು, 19 ಮಂದಿ ಶೀತಜ್ವರ ದಿಂದ ಬಳಲುವವರ ಸ್ಯಾಂಪಲ್‌ಗಳು ಸೇರಿವೆ ಎಂದು ಡಿಎಚ್‌ಓ ತಿಳಿಸಿದರು.

23 ಪಾಸಿಟಿವ್, 439 ನೆಗೆಟಿವ್: ನೋವೆಲ್ ಕೊರೋನ ವೈರಸ್ (ಕೋವಿಡ್ -19) ಸೋಂಕಿನ ಪರೀಕ್ಷೆಗಾಗಿ ಕಳುಹಿಸಿದ ಶಂಕಿತರ ಗಂಟಲು ದ್ರವದ ಮಾದರಿಗಳಲ್ಲಿ ರವಿವಾರ ಮತ್ತೆ 23 ಮಾದರಿಗಳು ಪಾಸಿಟಿವ್ ಫಲಿತಾಂಶವನ್ನು ನೀಡಿದ್ದರೆ, 439 ವರದಿಗಳು ನೆಗೆಟಿವ್ ಆಗಿವೆ. ಇಂದು ಸಂಜೆ ಯವರೆಗೆ ಒಟ್ಟು 7,004 ಮಂದಿಯ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗಾಗಿ ಪಡೆಯಲಾಗಿದೆ. ಇವುಗಳಲ್ಲಿ 3,166 ನೆಗೆಟಿವ್ ಆಗಿವೆ. ಒಟ್ಟಾರೆಯಾಗಿ ಈವರೆಗೆ ಉಡುಪಿಯಲ್ಲಿ 76 ವರದಿಗಳು ಪಾಸಿಟಿವ್ ಆಗಿ ಬಂದಿವೆ. ದಿನದ ಕೊನೆಗೆ ಇನ್ನೂ 3,762 ಸ್ಯಾಂಪಲ್‌ಗಳ ವರದಿಯನ್ನು ಕಾಯಲಾಗುತ್ತಿದೆ ಎಂದರು.

ಶಂಕಿತ ನೋವೆಲ್ ಕೊರೋನ ಸೋಂಕಿನ ಪರೀಕ್ಷೆಗಾಗಿ ಇಂದು 12 ಮಂದಿ ಆಸ್ಪತ್ರೆಗಳ ಐಸೋಲೇಶನ್ ವಾರ್ಡಿಗೆ ದಾಖಲಾಗಿದ್ದಾರೆ. ಇವರಲ್ಲಿ 8 ಮಂದಿ ಪುರುಷ ಹಾಗೂ ನಾಲ್ವರು ಮಹಿಳೆಯರಿದ್ದಾರೆ. ನಾಲ್ವರು ಕೊರೋನ ಶಂಕಿತರು, ಮೂವರು ತೀವ್ರತರದ ಉಸಿರಾಟ ತೊಂದರೆ ಹಾಗೂ ಐವರು ಶೀತಜ್ವರದ ಬಾಧೆಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ವಿವಿಧ ಆಸ್ಪತ್ರೆಗಳ ಐಸೋಲೇಶನ್ ವಾರ್ಡಿನಿಂದ ಇಂದು ನಾಲ್ವರು ಬಿಡುಗಡೆಗೊಂಡಿದ್ದು, 114 ಮಂದಿ ಇನ್ನೂ ವೈದ್ಯರ ನಿಗಾದಲ್ಲಿ ಚಿಕಿತ್ಸೆಯಲ್ಲಿದ್ದಾರೆ. ಇದುವರೆಗೆ 587 ಮಂದಿ ಚಿಕಿತ್ಸೆ ಪಡೆದು ಐಸೋಲೇಶನ್ ವಾರ್ಡಿನಿಂದ ಬಿಡುಗಡೆಗೊಂಡಿದ್ದಾರೆ ಎಂದವರು ವಿವರಿಸಿದರು.

ಜಿಲ್ಲೆಯಲ್ಲಿ ಕೊರೋನ ಸೋಂಕಿನ ಗುಣಲಕ್ಷಣದ 12 ಮಂದಿ ಇಂದು ಹೊಸದಾಗಿ ನೋಂದಣಿಗೊಂಡಿದ್ದು, ಈ ಮೂಲಕ ಜಿಲ್ಲೆಯಲ್ಲಿ ಈವರೆಗೆ ಒಟ್ಟು 4852 ಮಂದಿಯನ್ನು ಕೊರೋನ ತಪಾಸಣೆಗಾಗಿ ನೋಂದಣಿ ಮಾಡಿ ಕೊಳ್ಳಲಾಗಿದೆ. ಇವರಲ್ಲಿ 3513(ಇಂದು 24) ಮಂದಿ 28 ದಿನಗಳ ನಿಗಾವನ್ನೂ, 4344 (43) ಮಂದಿ 14 ದಿನಗಳ ನಿಗಾವನ್ನು ಪೂರ್ಣಗೊಳಿಸಿದ್ದಾರೆ.

ಜಿಲ್ಲೆಯಲ್ಲಿ ಈಗಲೂ 313 ಮಂದಿ ಹೋಮ್ ಕ್ವಾರಂಟೈನ್‌ನಲ್ಲೂ, 8,010 ಮಂದಿ ವಿವಿಧ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿ ಹಾಗೂ 81 ಮಂದಿ ಆಸ್ಪತ್ರೆ ಕ್ವಾರಂಟೈನ್‌ನಲ್ಲಿದ್ದಾರೆ ಎಂದು ಡಾ.ಸುಧೀರ್ ‌ಚಂದ್ರ ಸೂಡ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News