ಕಾರ್ಕಳ ಕಂಟೈನ್‌ಮೆಂಟ್ ಝೋನ್‌ಗೆ ಜಿಲ್ಲಾಧಿಕಾರಿ ಭೇಟಿ

Update: 2020-05-24 16:15 GMT

ಉಡುಪಿ, ಮೇ 24: ಕಾರ್ಕಳದಲ್ಲಿರುವ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕಾನ್‌ಸ್ಟೇಬಲ್ ಒಬ್ಬರು ಇಂದು ಕೊರೋನ ಪಾಸಿಟಿವ್ ಆಗಿರುವ ಹಿನ್ನೆಲೆಯಲ್ಲಿ ಕಾರ್ಕಳ ಗ್ರಾಮಾಂತರ, ನಗರ ಹಾಗೂ ವೃತ್ತ ನಿರೀಕ್ಷಕರ ಕಚೇರಿ ಇರುವ ಪ್ರದೇಶವನ್ನು ಕಂಟೈನ್‌ಮೆಂಟ್ ಝೋನ್ ಆಗಿ ಘೋಷಿಸಿರುವ ಜಿಲ್ಲಾಧಿಕಾರಿ ಜಿ.ಜಗದೀಶ್, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಈ ಪ್ರದೇಶದಲ್ಲಿ ಕೈಗೊಂಡಿರುವ ಸುರಕ್ಷತಾ ಕ್ರಮಗಳ ಕುರಿತು ಅವರು ಪರಿಶೀಲಿಸಿದರು. ಅಲ್ಲದೇ ಅಧಿಕಾರಿಗಳಿಗೆ ಹಲವು ಸಲಹೆಗಳನ್ನು ನೀಡಿದರು. ಇದೀಗ ಜಿಲ್ಲಾ ಪೊಲೀಸರು ಪಾಸಿಟಿವ್ ಬಂದಿರುವ ಅಜೆಕಾರು ಠಾಣೆಯ ಎಎಸ್ಪಿ, ಬ್ರಹ್ಮಾವರ ಹಾಗೂ ಕುಂದಾಪುರ ಠಾಣೆಗಳ ಕಾನ್‌ಸ್ಟೇಬಲ್‌ಗಳ ಸಂಪರ್ಕಕ್ಕೆ ಬಂದವರ ಮಾಹಿತಿಗಳನ್ನು ಕಲೆ ಹಾಕುತ್ತಿದ್ದಾರೆ. ಪ್ರಾಥಮಿಕ ಸಂಪರ್ಕಿತರು ಹಾಗೂ ದ್ವಿತೀಯ ಸಂಪರ್ಕಿತರ ವಿವರಗಳನ್ನು ಪೊಲೀಸ್ ಇಲಾಖೆ ಸಂಗ್ರಹಿಸುತ್ತಿದೆ ಎಂದು ಇಲಾಖೆಯ ಪ್ರಕಟಣೆ ತಿಳಿಸಿದೆ.

ಮೂರು ಪೊಲೀಸ್ ಠಾಣೆಗಳನ್ನು ತೆರವುಗೊಳಿಸಿ ಸ್ಯಾನಿಟೈಸ್ ಮಾಡಲಾ ಗುತ್ತಿದೆ. ಇದಕ್ಕಾಗಿ ಮೂರು ಠಾಣೆಗಳಲ್ಲಿ ಬದಲಿ ವ್ಯವಸ್ಥೆಗಳನ್ನು ಮಾಡಲಾ ಗುತ್ತಿದೆ. ಇದಕ್ಕಾಗಿ ಪಕ್ಕದಲ್ಲೇ ಇರುವ ಸರಕಾರಿ ಕಟ್ಟಡಗಳನ್ನು ಗುರುತಿಸಲಾಗಿದೆ. ತಾತ್ಕಾಲಿಕವಾಗಿ ಈ ಕಟ್ಟಡಗಳಿಗೆ ಪೊಲೀಸ್ ಠಾಣೆ ಸ್ಥಳಾಂತರಗೊಳ್ಳುತ್ತಿವೆ ಎಂದು ಇಲಾಖೆ ತಿಳಿಸಿದೆ.

ಸದ್ಯಕ್ಕೆ ಅಜೆಕಾರು ಠಾಣೆ, ಅಜೆಕಾರು ಮುಖ್ಯ ರಸ್ತೆಯಲ್ಲಿರುವ ಅಂಗನವಾಡಿ ಕಟ್ಟಡದಲ್ಲಿ ಕಾರ್ಯನಿರ್ವಹಿಸಿದರೆ, ಬ್ರಹ್ಮಾವರ ಪೊಲೀಸ್ ಠಾಣೆಯನ್ನು ಸಮೀಪದಲ್ಲೇ ಈಗಿನ ಠಾಣೆಯ ಹಿಂಭಾಗದಲ್ಲಿರುವ ಹಳೆಯ ಪೊಲೀಸ್ ಠಾಣಾ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ. ಕಾರ್ಕಳ ಠಾಣೆಯನ್ನು ಡಿಎಸ್ಪಿ ಕಾರ್ಕಳ ಕಚೇರಿಯ ಎದುರಿಗಿರುವ ಪುರಸಭಾ ಭವನಕ್ಕೆ ವಗಾಯಿರ್ಸಲಾಗಿದೆ ಎಂದು ಇಲಾಖೆ ವಿವರಿಸಿದೆ.

ಈ ಮೂಲಕ ಠಾಣೆಯ ಎಲ್ಲಾ ಕಾರ್ಯಗಳು ಎಂದಿನಂತೆ ನಡೆಯುತ್ತಿವೆ. ಜನರು ತಮ್ಮ ಕೆಲಸಗಳಿಗಾಗಿ ಈ ಕಚೇರಿಗಳಿಗೆ ಭೇಟಿ ನೀಡಬಹುದು ಎಂದು ಎಸ್ಪಿ ಕಚೇರಿ ನೀಡಿದ ಪ್ರಕಟಣೆ ತಿಳಿಸಿದೆ. ಸೋಂಕಿತ ಮೂವರು ಪೊಲೀಸ್ ಸಿಬ್ಬಂದಿಗಳನ್ನು ಚಿಕಿತ್ಸೆಗಾಗಿ ಈಗಾಗಲೇ ಉಡುಪಿಯ ಡಾ.ಟಿಎಂಎ ಪೈ ಕೋವಿಡ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

ಗರಡಿಮಜಲು ಸೀಲ್‌ಡೌನ್: ಈ ನಡುವೆ ಕಂಟೈನ್‌ಮೆಂಟ್ ಏರಿಯಾ ಆಗಿರುವ ತೆಂಕನಿಡಿಯೂರು ಗ್ರಾಮದ ಗರಡಿಮಜಲುನಲ್ಲಿರುವ ಎರಡು ಪೊಲೀಸ್ ಕ್ವಾಟ್ರಸ್‌ಗಳನ್ನು ಸೀಲ್‌ಡೌನ್ ಮಾಡಲಾಗಿದೆ. ಅದರ ಸುತ್ತ ಮುತ್ತಲಿನ ಒಂದು ಕಿ.ಮೀ.ಪ್ರದೇಶವನ್ನು ಬಫರ್ ರೆನ್ ಆಗಿ ಘೋಷಿಸಲಾಗಿದೆ ಎಂದು ತಿಳಿದುಬಂದಿದೆ.

ಗರಡಿಮಜಲಿನಲ್ಲಿ ಮೂರು ಪೊಲೀಸ್ ಕ್ವಾಟ್ರಸ್ ಬ್ಲಾಕ್‌ಗಳಿದ್ದು, ಇವುಗಳಲ್ಲಿ ಬಿ ಮತ್ತು ಸಿ ಬ್ಲಾಕ್‌ಗಳನ್ನು ಸೀಲ್‌ಡೌನ್ ಮಾಡಲಾಗಿದೆ. ಇದರಲ್ಲಿರುವ ಮನೆಯವರಿಗೆ ಮುಂದಿನ 14 ದಿನಗಳ ಕಾಲ ಕ್ವಾರಂಟೈನ್‌ನಲ್ಲಿರುವಂತೆ ಸೂಚಿಸಲಾಗಿದೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News