ಡಿಕೆಎಸ್‍ಸಿ ವತಿಯಿಂದ ಸರಳ ಈದ್ ಆಚರಣೆ: ಸರ್ಕಾರಿ ಕ್ವಾರಂಟೈನ್‍ಗಳಿಗೆ ಹಣ್ಣು ಹಂಪಲು ವಿತರಣೆ

Update: 2020-05-24 17:06 GMT

ಪಡುಬಿದ್ರಿ: ಈದುಲ್ ಫಿತ್ರ್ ಹಬ್ಬದ ಪ್ರಯುಕ್ತ ಕಾಪು ತಾಲೂಕಿನಲ್ಲಿ ಸರ್ಕಾರಿ ಕ್ವಾರಂಟೈನ್‍ಗಳಲ್ಲಿ ಇರುವ 350ಕ್ಕೂ ಅಧಿಕ ಮಂದಿಗೆ ಮಂಗಳೂರಿನ ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ ಇದರ ಅಧೀನ ಸಂಸ್ಥೆಯಾದ ಮೂಳೂರಿನ ಅಲ್ ಇಹ್ಸಾನ್ ಎಜುಕೇಶನ್ ಸೆಂಟರ್ ನ ಸಂಸ್ಥೆಯ ಬೆಳ್ಳಿಹಬ್ಬಆಚರಿಸುವ ಸಂಭ್ರಮದಲ್ಲಿರುವ ಡಿಕೆಎಸ್‍ಸಿ ಸ್ವಾಗತ ಸಮಿತಿಯು ರವಿವಾರ ಹಣ್ಣು ಹಂಪಲು ಮತ್ತು ಸಿಹಿ ತಿಂಡಿಗಳ ಪೊಟ್ಟಣವನ್ನು ವಿತರಿಸುವ ಮೂಲಕ ಹಬ್ಬವನ್ನು ವಿಶಿಷ್ಠ ರೀತಿಯಲ್ಲಿ ಆಚರಿಸಿತು. 

ತಾಲೂಕು ಆಡಳಿತಕ್ಕೆ ಆಹಾರ ಪೊಟ್ಟಣ ಹಸ್ತಾಂತರಿಸಿದ ಅಲ್ ಇಹ್ಸಾನ್ ಎಜುಕೇಶನ್ ಸೆಂಟರ್ ವ್ಯವಸ್ಥಾಪಕ ಮುಸ್ತಾಫ ಸಅದಿ, ಸಂಸ್ಥೆಯು ಬೆಳ್ಳಿ ಹಬ್ಬದ ಸಂಭ್ರಮದಲ್ಲಿದ್ದು ಕೊರೋನ ಕಾರಣದಿಂದಾಗಿ ನಮ್ಮಲ್ಲಿನ ಎಲ್ಲಾ ಚಟುವಟಿಕೆಗಳೂ ಸ್ತಬ್ಧಗೊಂಡಿವೆ. ಇದರಿಂದ ಹಬ್ಬವನ್ನು ಸರಳ ರೀತಿಯಲ್ಲಿ ಆಚರಿಸಿದ್ದೇವೆ. ಈ ಈ ರೋಗದ ವಿರುದ್ಧ ಎಲ್ಲರೂ ಒಂದಾಗಿ ಹೋರಾಟ ನಡೆಸಬೇಕಾಗಿದೆ. ಯಾವುದೇ ಕಾರಣಕ್ಕೂ ರೋಗಿಯ ವಿರುದ್ಧ ಹೋರಾಡಬೇಡಿ ಎಂದ ಅವರು, ರೋಗಕ್ಕೆ ಜಾತಿ, ಧರ್ಮ ಇರುವುದಿಲ್ಲ ಎಂದು ಹೇಳಿದರು. 

ಕಾಪು ತಹಶೀಲ್ದಾರ್ ಮಹಮ್ಮದ್ ಇಸಾಕ್ ಮಾತನಾಡಿ, ಕಾಪು ತಾಲೂಕಿಗೆ ಈವರೆಗೆ 450 ಮಂದಿ ಕ್ವಾರಂಟೈನ್‍ಗಾಗಿ ಆಗಮಿಸಿದ್ದು ಇವರಲ್ಲಿ 320 ಮಂದಿ ಸರಕಾರಿ ಕ್ವಾರಂಟೈನ್‍ನಲ್ಲಿದ್ದಾರೆ. ಇವರಿಗೆ ಹೊಸ ಮಾರಿಗುಡಿಯ ವತಿಯಿಂದ ಊಟ - ಉಪಹಾರವನ್ನು ನೀಡಲಾಗುತ್ತಿದ್ದು, ರಮಝಾನ್ ಪ್ರಯುಕ್ತ ಅಲ್ ಇಹ್ಸಾನ್ ಸಂಸ್ಥೆಯು ಸಿಹಿ ವಿತರಿಸಲು ಮುಂದಾಗಿರುವುದು ಸ್ವಾಗತಾರ್ಹ ಎಂದರು. ಇಂತಹ ಸಮಾಜ ಮುಖಿ ಕಾರ್ಯಗಳು ಇನ್ನಷ್ಟು ನಡೆಯಬೇಕಿದೆ. ಆ ಮೂಲಕ ಕೊರೋನ ಸಂಕಷ್ಟಕ್ಕೆ ಸಿಲುಕಿರುವವರನ್ನು ರಕ್ಷಿಸಬೇಕಿದೆ ಎಂದರು.

ಕಾಪು ಪುರಸಭೆ ಮುಖ್ಯಾಧಿಕಾರಿ ವೆಂಕಟೇಶ ನಾವಡ, ಕಾಪು ಎಸ್ಸೈ ರಾಜಶೇಖರ್ ಬಿ. ಸಾಗನೂರು, ಕಂದಾಯ ನಿರೀಕ್ಷಕ ಕೆ. ರವಿಶಂಕರ್, ಅಲ್ ಇಹ್ಸಾನ್ ಎಜುಕೇಶನ್ ಸೆಂಟರ್ ನ ವ್ಯವಸ್ಥಾಪಕ ಮುಸ್ತಫ ಸಅದಿ, ಜೊತೆ ಕಾರ್ಯದರ್ಶಿ ವೈ. ಬಿ. ಸಿ. ಬಶೀರ್ ಅಲಿ, ಪ್ರಾಂಶುಪಾಲ ಹಬೀಬ್ ರೆಹಮಾನ್, ದೈಹಿಕ ಶಿಕ್ಷಕ ಬಶೀರ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News