ಕಾಸರಗೋಡು: ಮೇ 26ಕ್ಕೆ ಎಸೆಸೆಲ್ಸಿ, ಹೈಯರ್ ಸೆಕೆಂಡರಿ ಪರೀಕ್ಷೆಗಳು ಆರಂಭ

Update: 2020-05-25 05:18 GMT

ಕಾಸರಗೋಡು: ಕೊರೋನ ಭೀತಿಯ ನಡುವೆಯೂ ಪರೀಕ್ಷೆ ನಡೆಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಸಿದ್ಧತೆ ನಡೆಸುತ್ತಿದ್ದು, ಮೇ 26ರಿಂದ ಎಸೆಸೆಲ್ಸಿ, ಹೈಯರ್ ಸೆಕೆಂಡರಿ ಪರೀಕ್ಷೆಗಳು ಆರಂಭಗೊಳ್ಳಲಿದೆ.

ಜಿಲ್ಲೆಯಲ್ಲಿ ಈ ಬಾರಿ 53,344 ಮಂದಿ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ. ಜಿಲ್ಲೆಯ 153 ಕೇಂದ್ರಗಳಲ್ಲಿ 19,630 ವಿದ್ಯಾರ್ಥಿಗಳು ಎಸೆಸೆಲ್ಸಿ ಪರೀಕ್ಷೆಗೆ ಹಾಜರಾಗಲಿದ್ದಾರೆ. 106 ಕೇಂದ್ರಗಳಲ್ಲಿ 16,677 ಪ್ಲಸ್ ವನ್, 17,037 ಪ್ಲಸ್ ಟು ವಿದ್ಯಾರ್ಥಿಗಳು ಪರೀಕ್ಷೆಗಳಿಗೆ ಹಾಜರಾಗಲಿದ್ದಾರೆ. 22 ಕೇಂದ್ರಗಳಲ್ಲಿ 3 ಸಾವಿರ ವಿದ್ಯಾರ್ಥಿಗಳು ವಿ.ಎಚ್.ಎಸ್.ಸಿ. ಪರೀಕ್ಷೆಗೆ ಹಾಜರಾಗುವರು.

ಇದೇ ವೇಳೆ ಎಸೆಸೆಲ್ಸಿ ಪರೀಕ್ಷೆಗೆ ಹಾಜರಾಗಬೇಕಿರುವ 297 ಮಂದಿ ವಿದ್ಯಾರ್ಥಿಗಳು ಲಾಕ್ ಡೌನ್ ಕಾರಣದಿಂದ ಕರ್ನಾಟಕದ ವಿವಿಧೆಡೆ ಸಿಲುಕಿಕೊಂಡಿದ್ದು, ಇವರಲ್ಲಿ 33 ಮಂದಿ ಸ್ವಯಂ ಪರೀಕ್ಷೆಗೆ ಹಾಜರಾಗುವುದಾಗಿ ಈಗಾಗಲೇ ತಿಳಿಸಿದ್ದಾರೆ. ಉಳಿದಂತೆ 264 ಮಂದಿ ಎಸೆಸೆಲ್ಸಿ ಪರೀಕ್ಷೆಗೆ ಹಾಜರಾಗಬೇಕಾದ ವಿದ್ಯಾರ್ಥಿಗಳು. ಜೊತೆಗೆ 204 ಮಂದಿ ಹೈಯರ್ ಸೆಕೆಂಡರಿ ಪರೀಕ್ಷೆಗೆ ಹಾಜರಾಗಬೇಕಾದ ವಿದ್ಯಾರ್ಥಿಗಳು ಕರ್ನಾಟಕದಲ್ಲಿದ್ದಾರೆ.

ಜಿಲ್ಲೆಯ ಯಾವುದೇ ಪ್ರದೇಶಗಳಲ್ಲೂ ಪರೀಕ್ಷೆಯ ಕೇಂದ್ರಗಳಲ್ಲಿ ಬದಲಾವಣೆಯಿಲ್ಲ. ಹಾಟ್ ಸ್ಪಾಟ್ ಗಳಾಗಿರುವ ಗ್ರಾಮ ಪಂಚಾಯತ್ ಗಳ, ನಗರ ಸಭೆಗಳ ಪರೀಕ್ಷಾ ಕೇಂದ್ರಗಳಲ್ಲೇ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಬಹುದು. ಆದರೆ ಕಂಟೈನ್ ಮೆಂಟ್ ಝೋನ್ ಗಳಿಂದ ಬರುವ ವಿದ್ಯಾರ್ಥಿಗಳನ್ನು ಪ್ರತ್ಯೇಕ ಕೊಠಡಿಗಳಲ್ಲಿ ಪರೀಕ್ಷೆ ಬರೆಯಲು ಸೌಲಭ್ಯ ಏರ್ಪಡಿಸಲಾಗುವುದು. ಇದಕ್ಕಿರುವ ಸಿದ್ಧತೆ ಭರದಿಂದ ನಡೆಯುತ್ತಿದೆ.

ಪರೀಕ್ಷಾ ಕೇಂದ್ರಗಳಿರುವ ಶಾಲೆಗಳಿಗೆ ಪ್ರಯಾಣ ನಡೆಸುವ ಸಂಬಂಧ ಮಂಜೂರಾತಿಗಾಗಿ ಕೋವಿಡ್ 19 ಜಾಗ್ರತಾ ಪೋರ್ಟಲ್ ನಲ್ಲಿ ನೋಂದಣಿ ನಡೆಸಿರುವ ವಿದ್ಯಾರ್ಥಿಗಳು ಉಪಜಿಲ್ಲಾಧಿಕಾರಿ ಮಂಜೂರು ಮಾಡಿರುವ ಪಾಸ್ ಸಹಿತ ಇಂದು(ಮೇ 25) ಬೆಳಗ್ಗೆ 10 ಗಂಟೆಗೆ ಮುಂಚಿತವಾಗಿ ತಲಪಾಡಿ ಗಡಿ ಚೆಕ್ ಪೋಸ್ಟ್ ಗೆ ಹಾಜರಾಗಬೇಕು ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದ್ದು. ಇವರನ್ನು ಜಿಲ್ಲಾಡಳಿತ ಏರ್ಪಡಿಸಿರುವ ಪ್ರತ್ಯೇಕ ಕೆಎಸ್ಆರ್ಟಿಸಿ ಬಸ್ ಗಳಲ್ಲಿ ಆಯಾ ಕೇಂದ್ರಗಳಿಗೆ ತಲಪಿಸುವ ವ್ಯವಸ್ಥೆ ಮಾಡಲಾಗಿದೆ.

ಒಂದು ಬಸ್ ನಲ್ಲಿ ತಲಾ 30 ವಿದ್ಯಾರ್ಥಿಗಳು ಎಂಬಂತೆ ಕೆಎಸ್ಆರ್ಟಿಸಿ ಬಸ್ ಗಳು ಸಂಚಾರ ನಡೆಸಲಿವೆ. ಪರೀಕ್ಷೆ ಮುಗಿಯುವ ವರೆಗೆ ಈ ವಿದ್ಯಾರ್ಥಿಗಳ ವಸತಿ, ಭೋಜನ ಇತ್ಯಾದಿ ಪೂರ್ಣ ಹೊಣೆ ಆಯಾ ಶಾಲೆಗಳದೇ ಆಗಿರುತ್ತದೆ. ಜೊತೆಗೆ ಈ ಮಕ್ಕಳು ಗ್ರಾಮ ಪಂಚಾಯತ್ ಕಾರ್ಯದರ್ಶಿ ಮತ್ತು ಆರೋಗ್ಯ ಕೇಂದ್ರದಲ್ಲೂ ಹಾಜರಾಗಬೇಕು. ಶಾಲೆಗಳಿಗೆ ತಲುಪುವ ವಿದ್ಯಾರ್ಥಿಗಳು ಕೋವಿಡ್ 19 ಜಾಗ್ರತಾ ಕಟ್ಟುನಿಟ್ಟುಗಳ ಪ್ರಕಾರ ಪರೀಕ್ಷೆ ಬರೆಯಲು, ಸ್ಯಾನಿಟೈಸರ್ ಬಲಸಲು, ಸುರಕ್ಷಿತ ಅಂತರ ಪಾಲಿಸಲು ಆದೇಶ ಆಯಾ ಕೇಂದ್ರಗಳಿಗೆ ತಲಪಿಸಲಾಗಿದೆ ಎಂದು ಜಿಲ್ಲಾ ಶಿಕ್ಷಣ ಉಪನಿರ್ದೇಶಕಿ ಕೆ.ವಿ.ಪುಷ್ಪಾ ತಿಳಿಸಿದರು. ಪರೀಕ್ಷೆ ಮುಗಿದ ನಂತರವೂ ಆರೋಗ್ಯ ಇಲಾಖೆಯ ಆದೇಶ ಪ್ರಕಾರ 14 ದಿನಗಳ ಕ್ವಾರೆಂಟೈನ್ ಪೂರ್ಣಗೊಳಿಸಬೇಕಿದೆ.

ಈ ಪರೀಕ್ಷೆಗಳಿಗಾಗಿ ಜಿಲ್ಲೆಯ ಶಾಲೆಗಳು ಸಿದ್ಧಗೊಂಡಿವೆ. ಈ ಬಾರಿಯ ಸಿದ್ಧತೆಗಳು ಪ್ರತಿ ಪ್ರದೇಶದ ಜನತೆಯ ಒಗ್ಗಟ್ಟಿನ ಯಶಸ್ಸಿನ ಫಲವಾಗಿದೆ. ಸ್ಥಳೀಯಾಡಳಿತ ಸಂಸ್ಥೆಗಳು, ಶಾಲೆಯ ಸಿಬ್ಬಂದಿ, ಶಿಕ್ಷಕರು, ಸ್ವಯಂ ಸೇವಾ ಸಂಘಟನೆಗಳು, ಜನಪ್ರತಿನಿಧಿಗಳು, ಹಳೆ ವಿದ್ಯಾರ್ಥಿಗಳು ಮೊದಲಾವರು ಸಿದ್ಧತೆಗೆ ಹೆಗಲು ನೀಡಿದ್ದಾರೆ. ಶುಚೀಕರಣ, ಪರೀಕ್ಷಾ ಕೊಠಡಿಯ ಪೀಠೋಪಕರಣಗಳ ಸಜ್ಜು ಸಹಿತ ಹಲವು ಕೆಲಸ ಕಾರ್ಯಗಳು ಅವರ ಸಹಕಾರದೊಂದಿಗೆ ನಡೆದಿದೆ. ಕರ್ನಾಟಕದಿಂದ ಪಾಸ್ ಸಹಿತ ಆಗಮಿಸುವ ಮಕ್ಕಳಿಗೆ ಬೇಕಾದ ಸೌಲಭ್ಯಗಳನ್ನೂ ಶಾಲೆಗಳಲ್ಲಿ ಒದಗಿಸಲಾಗುವುದು.

ಸಿದ್ಧತೆಗಳ ಅಂಗವಾಗಿ ಆಯಾ ಪರೀಕ್ಷಾ ಕೇಂರಗಳಿರುವ ಶಾಲೆಗಳನ್ನು ರೋಗಾಣುಮುಕ್ತವಾಗಿಸುವ ಕಾಯಕ ನಡೆದಿದೆ. ಜಿಲ್ಲೆಯ ಎಲ್ಲ ಶಾಲೆಗಳನ್ನೂ ಈ ನಿಟ್ಟಿನಲ್ಲಿ ಶುಚಿಗೊಳಿಸಲಾಗಿದೆ. ಅಗ್ನಿ ಶಾಮಕದಳ ಮತ್ತು ಸಿವಿಲ್ ಡಿಫೆನ್ಸ್ ಫೋರ್ಸ್ ಜಂಟಿಯಾಗಿ ಈ ಕಾರ್ಯ ನಡೆಸಿವೆ. ಈ ಮೂಲಕ ಕೊರೋನ ಪ್ರತಿರೋಧ ಚಟುವಟಿಕೆಗಳ ಜೊತೆಗೆ ಪರೀಕ್ಷಾ ಅವಧಿಯ ಸಿದ್ಧತೆಗಳು ಪೂರ್ಣಗೊಂಡಿವೆ. ಮೊದಲ ಹಂತದಲ್ಲಿ ಕೋವಿಡ್ ಪ್ರತಿರೋಧ ಚಟುವಟಿಕೆಗಳು, ಶಿಬಿರಗಳು ಇತ್ಯಾದಿ ನಡೆದ ಶಾಲೆಗಳಲ್ಲಿ ಸೋಡಿಯಂ ಹೈಪೋ ಕ್ಲಾರೈಡ್ ಮಿಶ್ರಣ ಬಳಸಿ ಪೂರ್ಣ ಪ್ರಮಾಣದ ರೋಗಾಣುಮುಕ್ತ  ಔಷಧಿ ಸಿಂಪಡಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News