ನೇರ ಸಂದರ್ಶನದ ವೇಳೆ ಭೂಕಂಪವಾದರೂ ಧೃತಿಗೆಡದ ನ್ಯೂಝಿಲ್ಯಾಂಡ್ ಪ್ರಧಾನಿ: ವೀಡಿಯೋ ವೈರಲ್

Update: 2020-05-25 09:50 GMT

ವೆಲ್ಲಿಂಗ್ಟನ್ :  ನೇರ ಪ್ರಸಾರದ ಟಿವಿ ಸಂದರ್ಶನವೊಂದನ್ನು ತಾವು ನೀಡುತ್ತಿದ್ದ ವೇಳೆ ಭೂಕಂಪ ಸಂಭವಿಸಿದರೂ ಧೃತಿಗೆಡದೆ ಶಾಂತಚಿತ್ತತೆಯಿಂದ ಸಂದರ್ಶನ ಮುಂದುವರಿಸಿದ ನ್ಯೂಜಿಲೆಂಡ್ ಪ್ರಧಾನಿ ಜೆಸಿಂಡಾ ಆರ್ಡೆರ್ನ್ ಎಲ್ಲರ ಗಮನ ಸೆಳೆದಿದ್ದಾರಲ್ಲದೆ ಈ ಕುರಿತಾದ ವೀಡಿಯೋ ವೈರಲ್ ಆಗಿದೆ.

ವೆಲ್ಲಿಂಗ್ಟನ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ  ಸೋಮವಾರ 5.8 ತೀವ್ರತೆಯ ಭೂಕಂಪ ಸಂಭವಿಸಿತ್ತು. ಭೂಕಂಪದ ಕೇಂದ್ರ ರಾಜಧಾನಿ ವೆಲ್ಲಿಂಗ್ಟನ್  ಸಮೀಪದ ಲೆವಿನ್ ಎಂಬಲ್ಲಿತ್ತು.

ದೇಶದ ಸಂಸತ್ ಕಟ್ಟಡ ‘ಬೀ ಹೈವ್’ ಎದುರು ನೇರ ಟಿವಿ ಸಂದರ್ಶನದಲ್ಲಿ ನ್ಯೂಜಿಲೆಂಡ್ ಪ್ರಧಾನಿ ಮಾತನಾಡುತ್ತಿದ್ದಾಗಲೇ ಭೂಮಿ ಕಂಪಿಸಿತ್ತು. “ನಮಗಿಲ್ಲಿ ಸ್ವಲ್ಪ ಭೂಕಂಪದ ಅನುಭವವಾಗುತ್ತಿದೆ ರಯಾನ್'' ಎಂದು ಅವರು ಕಾರ್ಯಕ್ರಮದ ನಿರೂಪಕ ರಯಾನ್ ಬ್ರಿಡ್ಜ್ ಅವರನ್ನುದ್ದೇಶಿಸಿ ಹೇಳುವಾಗಲೇ ಅವರು, ಅವರ ಸುತ್ತ ಇದ್ದ ಕ್ಯಾಮರಾಗಳೆಲ್ಲವೂ ಅಲುಗಾಡಿದ್ದವು.

“ಬೀ ಹೈವ್ ಎಲ್ಲಕ್ಕಿಂತಲೂ ಹೆಚ್ಚು ಅಲುಗಾಡಿದೆ'' ಎಂದು ಹೇಳಿದ ಅವರು ತಾನು ಸುರಕ್ಷಿತವಾಗಿದ್ದೇನೆ, ಸಂದರ್ಶನ ಮುಂದುವರಿಸಬಹುದು ಎಂದರು.

ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಧಾನಿ ``ಭೂಕಂಪದಿಂದ ಎಲ್ಲಿಯೂ ಯಾವುದೇ ಹಾನಿಯುಂಟಾಗಿಲ್ಲ,'' ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News